ಕರಾವಳಿಯಲ್ಲಿ ಸೆಕೆಯ ಅಬ್ಬರ; ತಂಪು ಪಾನೀಯಗಳಿಗೆ ಜನ ಮೊರೆ

ಕರಾವಳಿ ಭಾಗದಲ್ಲಿ ಸೆಖೆಯ ಕಾಟ ತಾಳಲಾಗದೆ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಈ ಪಾನೀಯಗಳ ಬೆಲೆ ಮುಗಿಲು ಮುಟ್ಟಿದೆ. 

First Published Apr 20, 2022, 3:44 PM IST | Last Updated Apr 20, 2022, 3:44 PM IST

ಬೇಸಿಗೆ(summer) ಪ್ರಾರಂಭವಾದಾಗಿನಿಂದ ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಮುದ್ರತೀರಕ್ಕೆ ಹೊಂದಿಕೊಂಡಿರುವ ಕರಾವಳಿಯ ತಾಲ್ಲೂಕುಗಳಲ್ಲಂತೂ ಸೆಕೆಯ ಅಬ್ಬರ ಹೇಳತೀರದಾಗಿದೆ. ಪರಿಣಾಮ ಜನರು ಸೂರ್ಯನ ಝಳದಿಂದ ತಪ್ಪಿಸಿಕೊಳ್ಳುವ ಉಪಾಯಗಳತ್ತ ಮುಖಮಾಡುತ್ತಿದ್ದಾರೆ. ಸದ್ಯ ಜಿಲ್ಲೆಯ ಕರಾವಳಿ ಭಾಗದಲ್ಲಿ ತಂಪು ಪಾನೀಯಗಳಿಗೆ(cool drinks) ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜನ ಸೂರ್ಯನ ತಾಪ ತಾಳಲಾರದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಎಳನೀರು, ಲಿಂಬು ಶರಬತ್, ಲಸ್ಸಿಯಂತಹ ತಂಪು ಪಾನೀಯಗಳಿಗೆ ಸಕತ್ ಬೇಡಿಕೆಯಿದ್ದು, ಜನರು ಐಸ್‌ಕ್ರಿಂ ಅಂಗಡಿಗಳಿಗೂ ಮುಗಿಬೀಳುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಬಿಸಿಗಾಳಿ, ನೆತ್ತಿಸುಡುವ ಬಿಸಿಲು, ರಸ್ತೆಯಲ್ಲಿ ಓಡಾಡೋಣವೆಂದರೆ ಬಿಸಿಲಿನ ಧಗೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಕನಿಷ್ಟ 36 ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪ ಇರುತ್ತದೆ. ಹೀಗಾಗಿ ಈ ಉಷ್ಣತೆಯನ್ನು ತಾಳಲಾರದೇ ಮಧ್ಯಾಹ್ನದ ಹೊತ್ತಿಗೆ ಜನರು ಮನೆಯಿಂದ ಹೊರಗಡೆ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಏನೇ ಕೆಲಸ ಕಾರ್ಯಗಳಿದ್ದರೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮುಗಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ. ಮಾರ್ಚ್ ತಿಂಗಳ ಆರಂಭದಿಂದಲೇ ನಗರದಲ್ಲಿ ಹಲವೆಡೆ ಹಣ್ಣಿನ ಜ್ಯೂಸ್ ಸೆಂಟರ್‌ಗಳು ತಲೆಯೆತ್ತಿವೆ. ಸೇಬು, ಮಾವು, ಕರಬೂಜ, ಕಲ್ಲಂಗಡಿಯಂತಹ ವಿವಿಧ ರೀತಿಯ ಹಣ್ಣುಗಳ ಜ್ಯೂಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳನ್ನು ಸವಿಯಲು ಜನ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. 

ನಿರುದ್ಯೋಗ: ಚಾ ಅಂಗಡಿ ತೆರೆದ ಅರ್ಥಶಾಸ್ತ್ರ ಪದವೀಧರೆ

ಕಳೆದ‌ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಬಾರಿ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ನೆಚ್ಚರಿಕೆಯನ್ನ ಸಹ ನೀಡಿತ್ತು. ಈ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಅವಧಿಗೂ ಮುನ್ನವೇ ಬಿಸಿಲಿನ ಅಬ್ಬರ ತನ್ನ ಪ್ರಭಾವ ತೋರಿಸುತ್ತಿದೆ. ಇನ್ನು ಬೇಸಿಗೆ ಆರಂಭಕ್ಕೂ ಮೊದಲು ಕಡಿಮೆಯಿದ್ದ ತಂಪುಪಾನೀಯಗಳ ಬೆಲೆ ಇದೀಗ ಜಾಸ್ತಿಯಾಗಿದೆ. ಸದ್ಯ ಎಳನೀರು 45 ರೂ, ನಿಂಬು ಶರಬತ್ 30ರೂ. ಹಣ್ಣಿನ ಜ್ಯೂಸ್ 80ರೂ., ಕಬ್ಬಿನ ಜ್ಯೂಸ್ 40ರೂ.ನಂತೆ ತಂಪು ಪಾನೀಯಗಳ ಬೆಲೆ ಗಗನಕ್ಕೇರಿದೆ. ಆದರೂ ಡೀಸೆಲ್, ಪೆಟ್ರೋಲ್ ಬೆಲೆಯೇರಿಕೆಯಿಂದಾಗಿ ಲಾಭವಾಗುತ್ತಿಲ್ಲ ಅಂತಾರೇ ವ್ಯಾಪಾರಸ್ಥರು.

Video Top Stories