Asianet Suvarna News Asianet Suvarna News

ಕೆಟ್ಟು ನಿಂತ ನೀರಿನ ಘಟಕಗಳು; ಗೋಕರ್ಣದ ಅಂದ ಹಾಳು ಮಾಡುತ್ತಿವೆ ಪ್ಲ್ಯಾಸ್ಟಿಕ್ ಬಾಟಲ್ಸ್

ಅದು ದಿನ ನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪ್ರಸಿದ್ಧ ತಾಣ. ಅಲ್ಲಿರುವ ದೇವಾಲಯ, ವಿವಿಧ ಬೀಚ್‌ಗಳನ್ನು ನೋಡಲು, ಎಂಜಾಯ್ ಮಾಡಲೆಂದೇ ವಿವಿಧೆಡೆಯಿಂದ ಜನರು ಇಲ್ಲಿಗೆ ಭೇಟಿ ನೀಡ್ತಿದ್ದಾರೆ. ಆದರೆ, ಪ್ರವಾಸಿಗರಿಗಾಗಿಯೇ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕ ಮಾತ್ರ ಇಲ್ಲಿ ನಾಮ್ ಕೇ ವಾಸ್ತೆ ಅಸ್ಥಿತ್ವದಲ್ಲಿದೆ. ಪ್ರವಾಸೋದ್ಯಮ ಅಂತಾ ಹೇಳಿಕೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ತಿಳಿದಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. 

ಒಂದೆಡೆ ಮಹಾಬಲೇಶ್ವರನ ದರ್ಶನ ಪಡೆಯಲು ಬರುತ್ತಿರುವ ಸಹಸ್ರಾರು ಭಕ್ತಗಣ, ಇನ್ನೊಂದೆಡೆ ಕಡಲತೀರದಲ್ಲಿ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಮತ್ತೊಂದೆಡೆ ಕೆಟ್ಟು ನಿಂತಿರುವ ಕುಡಿಯುವ ನೀರಿನ ಘಟಕ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ(Gokarna)ದಲ್ಲಿ. ಹೌದು, ಶಾಲಾ ಕಾಲೇಜುಗಳಿಗೆ ರಜೆ ಕೊಡುತ್ತಿದ್ದಂತೆ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಪ್ರವಾಸಿಗರ ಫೇವರೇಟ್ ಸ್ಪಾಟ್ ಆಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ದೇಶ- ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರವಾಸಿಗರಿಗೆ ಬಿರು ಬೇಸಿಗೆ ಕಾಲದಲ್ಲಿ ಮುಖ್ಯವಾಗಿ ಕುಡಿಯಲು ಯೋಗ್ಯವಾದ ನೀರು ಬೇಕು. ಆದರೆ, ಗೋಕರ್ಣದಲ್ಲಿ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ(clean drinking water facility) ಕೆಟ್ಟು ನಿಂತು ತಿಂಗಳುಗಳೇ ಕಳೆದಿವೆ. ಇದನ್ನು ದುರಸ್ತಿಗೊಳಿಸುವ ಗೋಜಿಗೆ ಮಾತ್ರ ಈವರೆಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನೂ ಹೋಗಿಲ್ಲ. ಹೀಗಾಗಿ ಪ್ರವಾಸಿಗರು ಶುದ್ಧ ಕುಡಿಯುವ ನೀರು ದೊರೆಯದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. 

 ಅಂದಹಾಗೆ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಗೋಕರ್ಣದ ಓಂ ಬೀಚ್, ಮಹಾಬಲೇಶ್ವರ ದೇವಸ್ಥಾನ ಹಾಗೂ ಬಸ್ ನಿಲ್ದಾಣದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದರ ಬಗ್ಗೆ ತಿಳಿದಿದ್ದರೂ ಸಹ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ದುರಸ್ತಿ ಮಾಡೋ ಗೋಜಿಗೇ ಹೋಗಿಲ್ಲ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ಜನರಿಗೆ ಕುಡಿಯಲು ಬೇಕಾದ ನೀರಿನ ಸೌಲಭ್ಯವನ್ನು ಕೂಡಾ ಇಲ್ಲಿ ಪೂರೈಸಿಲ್ಲ.‌ ಪ್ರವಾಸೋದ್ಯಮ ಅಭಿವೃದ್ಧಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಶುದ್ಧ ಕುಡಿಯುವ ಘಟಕವನ್ನು ರಿಪೇರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದರಿಂದ ಜನರು ಬಿಸ್ಲೇರಿ ಬಾಟಲ್‌ಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಇದರಿಂದಾಗಿ ಪ್ಲಾಸ್ಟಿಕ್ ಬಳಕೆ ಕೂಡ ಹೆಚ್ಚಾಗುತ್ತಿದ್ದು,  ಪ್ರವಾಸಿಗರು ಎಲ್ಲೆಂದರಲ್ಲಿ ಬಾಟಲಿಗಳು ಬಿಸಾಕಿ ಪ್ರವಾಸಿ ತಾಣಗಳ ಸ್ವಚ್ಚತೆ ಹಾಳು ಮಾಡುತ್ತಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಸಂಬಂಧಪಟ್ಟವರು ಕೈ ಕಟ್ಟಿ ಕುಳಿತಿರೋದು ವಿಪರ್ಯಾಸವೇ ಸರಿ. 

ಕುಡ್ಲ ಗೋಡೆ ತುಂಬಾ ಬೆಡಗಿನ ಸಂಸ್ಕೃತಿ ಚಿತ್ತಾರ!

ಒಟ್ಟಿನಲ್ಲಿ ಪ್ರಮುಖ ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ಅತೀ ಅವಶ್ಯವಾಗಿರುವ ಕುಡಿಯುವ ನೀರಿನ ಸೌಲಭ್ಯವನ್ನು ಸಂಬಂಧಪಟ್ಟವರು ಶೀಘ್ರದಲ್ಲಿ ಒದಗಿಸಬೇಕಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿರುವ ಶುದ್ಧ ನೀರಿನ ಘಟಕದ ಪ್ರಯೋಜನ ಪ್ರವಾಸಿಗರಿಗೆ ಮತ್ತೆ ದೊರೆಯಬೇಕಿದೆ.

Video Top Stories