ಹೊಸ ವೈರಸ್ ಭೀತಿಯಿದ್ದರೂ ಶಾಲೆ ಆರಂಭಿಸುವ ನಿರ್ಧಾರ ಬದಲಿಲ್ಲ!
ಕರೋನಾ ರೂಪಾಂತರದ ಭೀತಿಯಿದ್ದರೂ ಜ.1ರಿಂದ ಶಾಲೆ, ಪಿಯು ಕಾಲೇಜು ಆರಂಭಿಸುವ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ಹಾಗೂ ಪ್ರಸ್ತುತ ನಡೆದಿರುವ ಸಿದ್ಧತೆಯನ್ನು ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು(ಡಿ.23) ಕರೋನಾ ರೂಪಾಂತರದ ಭೀತಿಯಿದ್ದರೂ ಜ.1ರಿಂದ ಶಾಲೆ, ಪಿಯು ಕಾಲೇಜು ಆರಂಭಿಸುವ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ಹಾಗೂ ಪ್ರಸ್ತುತ ನಡೆದಿರುವ ಸಿದ್ಧತೆಯನ್ನು ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೊರೋನಾ ವೈರಸ್‌ನ ಹೊಸ ರೂಪಾಂತರದ ನೈಜ ಶಕ್ತಿ ಅಧ್ಯಯನಕ್ಕೆ ಒಂಬತ್ತು ದಿನಗಳ ಕಾಲಾವಕಾಶವಿದೆ. ಈ ಅವಧಿಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಏನು ಅಭಿಪ್ರಾಯ ನೀಡುತ್ತದೋ ಅದರಂತೆ ಮುನ್ನಡೆಯುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಜ.1ರಿಂದ 10 ಮತ್ತು 12ನೇ ತರಗತಿ ಮಕ್ಕಳಿಗೆ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸಲು ಹಾಗೂ 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಪುನಾರಂಭಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಪೂರ್ವ ಸಿದ್ಧತೆಗಳು ಮತ್ತು ಸುರಕ್ಷಾ ಕ್ರಮಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈ ಅವಲೋಕನ ಮಾಡಲಿದೆ. ಪರಿಸ್ಥಿತಿ ನೋಡಿಕೊಂಡು ಸಮಿತಿ ಮುಂದೆ ಏನಾದರೂ ಹೊಸ ಅಭಿಪ್ರಾಯ, ಸಲಹೆ ನೀಡಿದರೆ, ಅದರಂತೆ ಮುಂದಿನ ಹೆಜ್ಜೆ ಇಡುತ್ತೇವೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ