ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನ: ಗಡಿಭಾಗದಲ್ಲಿ ದುಷ್ಕರ್ಮಿಗಳಿಂದ ಮಹಾಸಂಚು
ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.
ಮಂಗಳೂರು (ಆ.26): ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಕೇರಳ ಪೊಲೀಸ್ ಇಲಾಖೆ ಹಾಗೂ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದೆ. ರೈಲ್ವೇ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್ ತುಂಡುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿದೆ. ಕಳೆದ ಕೆಲ ದಿನಗಳಲ್ಲಿ ಕೇರಳ ರಾಜ್ಯದ ಕಾಸರಗೋಡಿನ ಹಲವೆಡೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿದ್ದು, ಅ.21ರ ರವಿವಾರ ಕೋಟಿಕುಳಂ-ಬೇಕಲ ಮಧ್ಯೆ ತೃಕ್ಕನ್ನಾಡು ದೇಗುಲದ ಹಿಂದುಗಡೆ ರೈಲು ಹಳಿಯಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದೆ. ರೈಲ್ವೇ ಗಾರ್ಡ್ ಸಮಯ ಪ್ರಜ್ಞೆಯಿಂದ ಸಂಭಾವ್ಯ ರೈಲು ದುರಂತ ತಪ್ಪಿದ್ದು, 35 ಕಿಲೋ ತೂಕದ ಕಾಂಕ್ರೀಟ್ ತುಂಡನ್ನು ಹಳಿ ಮೇಲೆ ಇರಿಸಿ ದುಷ್ಕೃತ್ಯಕ್ಕೆ ಪ್ಲಾನ್ ಎಸಗಿರೋ ಅನುಮಾನ ವ್ಯಕ್ತವಾಗಿದೆ. ಕುಂಬಳೆ ರೈಲು ನಿಲ್ದಾಣದ 400 ಮೀಟರ್ ದೂರದಲ್ಲೂ ಹಳಿಗಳ ಮೇಲೂ ಕಲ್ಲುಗಳು ಪತ್ತೆಯಾಗಿದ್ದು, ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್), ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರಿಂದ ತನಿಖೆ ಆರಂಭವಾಗಿದೆ.