ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ; ಪೊಲೀಸರೊಂದಿಗೆ ತಳ್ಳಾಟ, ನೂಕಾಟ
ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಸಾವಿರಾರು ವಕೀಲರು 'ವಕೀಲರ ರಕ್ಷಣಾ ಕಾಯ್ದೆ' ಜಾರಿಗೆ ಆಗ್ರಹಿಸಿ ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಪೊಲೀಸರನ್ನೇ ತಳ್ಳಾಡಿದ ಘಟನೆ ನಡೆದಿದೆ.
ಬೆಳಗಾವಿ (ಡಿ.27): ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ ವತಿಯಿಂದ ಸಾವಿರಾರು ವಕೀಲರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕಲು ಹೊರಟಿದ್ದರು. ಈ ವೇಳೆ ಪೊಲೀಸರು ಅಡ್ಡ ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು, ಪೊಲೀಸರನ್ನೇ ತಳ್ಳಾಡಿದ ಘಟನೆ ನಡೆದಿದೆ.
ಪ್ರತಿವರ್ಷ ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೂ ವಕೀಲರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ 144 ಸೆಕ್ಷನ್ ಜಾರಿಯಾಗಿದ್ದ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಬಂದ ಸಚಿವ ಗೋವಿಂದ ಕಾರಜೋಳರನ್ನು ತರಾಟೆಗೆ ತೆಗೆದುಕೊಂಡರು. ಯುವ ವಕೀಲರ ಜೊತೆಗೆ ಮಾತಿನ ಚಕಮಕಿನಡೆಯಿತು. ನಂತರ ಕಾನೂನು ಸಚಿವ ಮಾಧುಸ್ವಾಮಿಯೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮಾಧುಸ್ವಾಮಿ ಬರದಿದ್ದಾಗ ಅವರ ವಿರುದ್ಧ ಘೋಷಣೆ ಕೂಗಿ ಒಳಗೆ ನುಗ್ಗಲು ಯತ್ನಿಸಿದರು. ಆಗ ಪೊಲೀಸರು ಕೇವಲ 10 ಜನ ಪದಾಧಿಕಾರಿಗಳು ಒಳಗೆ ಹೋಗಲು ಅವಕಾಶ ಮಾಡಿಕೊಡುವುದಾಗಿ ಹೇಳಿದರೂ ಕೇಳಲಿಲ್ಲ. ನಂತರ, ಬ್ಯಾರಿಕೇಡ್ ದಾಟಿ ಒಳನುಗ್ಗಲು ಯತ್ನಿಸಿದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.