ವಕ್ಫ್‌ ಬೋರ್ಡ್ ಹೆಸರಿನಲ್ಲಿ ಒಂದಿಂಚು ಭೂಮಿಯೂ ಇಲ್ಲ: ನಸೀರ್‌ ಅಹ್ಮದ್

ಟ್ರಿಬ್ಯೂನಲ್ ತೀರ್ಮಾನವೇ ಅಂತಿಮ ಎಂದು ಹೇಳುವವರಿಗೆ ರಾಜ್ಯದಲ್ಲಿ ನಾಲ್ಕು ಟ್ರಿಬ್ಯೂನಲ್‌ಗಳಿರುವುದನ್ನು ನೆನಪಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್‌ ಸದಸ್ಯರಾದ ನಸೀರ್‌ ಅಹ್ಮದ್‌ 

First Published Dec 14, 2024, 4:40 PM IST | Last Updated Dec 14, 2024, 4:40 PM IST

ಬೆಂಗಳೂರು(ಡಿ.14):  ವಕ್ಫ್‌ ಬೋರ್ಡ್ ಹೆಸರಿನಲ್ಲಿ ಒಂದು ಎಕರೆ ಬಿಡಿ ಒಂದಿಂಚು ಭೂಮಿಯೂ ಇಲ್ಲ. ಈ ಆಸ್ತಿಗಳು ದರ್ಗಾ, ಅಂಜುಮನ್, ಈದ್ಗಾ, ಮಸೀದಿಗಳು ಸೇರಿದಂತೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧ ಪಟ್ಟಿದ್ದಾಗಿದೆ. ಹಾಗೂ ವಕ್ಫ್‌ ಬೋರ್ಡ್ ಈ ಆಸ್ತಿಗಳ ರಕ್ಷಣೆ ಮಾಡುವ ವಿವಾದಗಳನ್ನು ಇತ್ಯರ್ಥ ಮಾಡುವ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಎಷ್ಟರವರೆ ಅಂದರೆ ವಕ್ಫ್‌ ಬೋರ್ಡ್‌ನ ಕಚೇರಿಯೂ ಕೂಡ ವಕ್ಫ್‌ನ ಹೆಸರಿನಲ್ಲಿ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್‌ ಸದಸ್ಯರಾದ ನಸೀರ್‌ ಅಹ್ಮದ್‌ ಅವರು ಹೇಳಿದರು. ಅವರು ಗುರುವಾರ ನಡೆದ ವಿಧಾನ ಪರಿಷತ್‌ ಕಲಾಪದ ವೇಳೆ ವಕ್ಫ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದರು.

ಬೆಂಗಳೂರಿನ ಈ ಸರ್ಕಾರಿ ಕಟ್ಟಡಕ್ಕೆ ಭೇಟಿ ಕೊಡೋ ಮುನ್ನ ಹುಷಾರ್!

ರಾಜ್ಯದಲ್ಲಿ ನಾಲ್ಕು ಟ್ರಿಬ್ಯೂನಲ್‌ಗಳಿವೆ

ಟ್ರಿಬ್ಯೂನಲ್ ತೀರ್ಮಾನವೇ ಅಂತಿಮ ಎಂದು ಹೇಳುವವರಿಗೆ ರಾಜ್ಯದಲ್ಲಿ ನಾಲ್ಕು ಟ್ರಿಬ್ಯೂನಲ್‌ಗಳಿರುವುದನ್ನು ನೆನಪಿಸಿದ ನಸೀರ್‌ ಅಹ್ಮದ್‌ ಅವರು, ಸರ್ಕಾರವು ಈ ಟ್ರಿಬ್ಯೂನಲ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸಬೇಕೆಂದು ಮನವಿ ಸಲ್ಲಿಸಿದ ಬಳಿಕ ಈ ಟ್ರಿಬ್ಯೂನಲ್‌ಗಳ ನ್ಯಾಯಾಧೀಶರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರು ನೇಮಕ ಮಾಡುತ್ತಾರೆ.  

ಬೆಂಗಳೂರಿನಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಸುಧಾ ಸೀತಾರಾಮನ್ ಓಂಕಾರ್‌, ಕಲಬುರಗಿಯಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಶ್ರೀನಿವಾಸ್‌, ಬೆಳಗಾವಿಯಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಶ್ರೀಮತಿ ಕಟಿಯಾನಿ ಹಾಗೂ ಮೈಸೂರಿನಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಗುರುರಾಜ್ ಸೋಮ ತಳವಾರ್‌ರವರು ಜಿಲ್ಲಾ ನ್ಯಾಯಾಧೀಶರಾಗಿದ್ದು, ಈ ನ್ಯಾಯಾಧೀಶರ  ಜೊತೆಗೆ ಸರ್ಕಾರದಿಂದ ಕಂದಾಯ ಇಲಾಖೆಯಲ್ಲಿ ಅನುಭವವುಳ್ಳ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗುತ್ತದೆ. ಜೊತೆಗೆ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರೊಬ್ಬರನ್ನು ನೇಮಿಸಲಾಗುತ್ತದೆ. ಆದರೆ, ಇದುವರೆಗೆ ಈ ನಾಲ್ಕು ಟ್ರಿಬ್ಯೂನಲ್‌ಗಳಲ್ಲಿ ಎರಡು ಟ್ರಿಬ್ಯೂನಲ್‌ಗಳಿಗೆ ಮಾತ್ರ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನೆರಡು ಟ್ರಿಬ್ಯೂನಲ್‌ಗಳಲ್ಲಿ ಅಧಿಕಾರಿಗಳನ್ನು ನೇಮಿಸಿಯೇ ಇಲ್ಲ ಎಂದು ಅವರು ಹೇಳಿದರು.