ಜನಾಶೀರ್ವಾದ ಯಾತ್ರೆಯನ್ನು ಜನಜಾತ್ರೆಗಷ್ಟೆ ಸೀಮಿತ ಮಾಡದ ಕೇಂದ್ರ ಸಚಿವ!
ತಿಂಗಳ ಹಿಂದೆ ಆರು ಜಿಲ್ಲೆಗಳಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ವೇಳೆ ರಾಜ್ಯದಲ್ಲಿ ಇಂಟರ್ನೆಟ್ ವೇಗ ಹೆಚ್ಚಳವೂ ಸೇರಿದಂತೆ ವಿವಿಧ ವಿಚಾರವಾಗಿ ಕೇಳಿಬಂದ ಆಗ್ರಹಕ್ಕೆ ಸಂಬಂಧಿಸಿ ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ತ್ವರಿತವಾಗಿ ಸ್ಪಂದಿಸಿದ್ದಾರೆ.
ಹುಬ್ಬಳ್ಳಿ(ಸೆ.09): ತಿಂಗಳ ಹಿಂದೆ ಆರು ಜಿಲ್ಲೆಗಳಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ವೇಳೆ ರಾಜ್ಯದಲ್ಲಿ ಇಂಟರ್ನೆಟ್ ವೇಗ ಹೆಚ್ಚಳವೂ ಸೇರಿದಂತೆ ವಿವಿಧ ವಿಚಾರವಾಗಿ ಕೇಳಿಬಂದ ಆಗ್ರಹಕ್ಕೆ ಸಂಬಂಧಿಸಿ ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ತ್ವರಿತವಾಗಿ ಸ್ಪಂದಿಸಿದ್ದಾರೆ.
ದೆಹಲಿಗೆ ತೆರಳಿದ ಬೆನ್ನಲ್ಲೇ ಇಂಟರ್ನೆಟ್ ಸ್ಪೀಡ್ ಹೆಚ್ಚಳವೂ ಸೇರಿದಂತೆ ರಾಜ್ಯದ ಬೇಡಿಕೆಗಳ ಪರಿಶೀಲನೆಗೆ ಕಾರ್ಯಪಡೆ (ಟಾಸ್ಕ್‌ಪೋರ್ಸ್)ವೊಂದನ್ನು ರಚಿಸಿದ್ದು, ಆ ತಂಡವೀಗ ಬುಧವಾರ ಹುಬ್ಬಳ್ಳಿಗೆ ಭೇಟಿ ನೀಡಿ ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿದೆ. ಸಾರ್ವಜನಿಕರ ಬೇಡಿಕೆಗೆ ಕೇಂದ್ರ ಒಂದೇ ತಿಂಗಳಲ್ಲಿ ಸ್ಪಂದಿಸಿ ಕಾರ್ಯೋನ್ಮುಖರಾಗಿರುವುದು ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯಕ್ಕೆ ಕೊಟ್ಟ ಭರವಸೆ ಒಂದೇ ತಿಂಗಳಲ್ಲಿ ಈಡೇರಿಸಲು ಮುಂದಾದ ರಾಜೀವ್ ಚಂದ್ರಶೇಖರ್!
ತಿಂಗಳ ಹಿಂದೆ ಹುಬ್ಬಳ್ಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಸೇರಿ ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮುಂದೆ ರಾಜ್ಯದಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸುವ ಕುರಿತು ದೊಡ್ಡಮಟ್ಟದಲ್ಲಿ ಆಗ್ರಹ ಕೇಳಿಬಂದಿತ್ತು. ಇದರ ಜತೆಗೆ ಕೌಶಲ್ಯಾಭಿವೃದ್ಧಿ ಕೇಂದ್ರ, ಐಟಿ ಹಬ್‌ಗಳನ್ನು ತೆರೆಯುವ ಬೇಡಿಕೆಯೂ ಬಂದಿತ್ತು. ಈ ಬೇಡಿಕೆಗಳ ಪರಿಶೀಲನೆಗೆ ಟಾಸ್ಕ್‌ಫೋರ್ಸ್‌ವೊಂದನ್ನು ರಚಿಸುವ ಭರವಸೆಯನ್ನು ಆಗ ರಾಜೀವ್ ಚಂದ್ರಶೇಖರ್ ನೀಡಿದ್ದರು.