ಸಿದ್ದು ತಂದ ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ತಂದ ಯಡಿಯೂರಪ್ಪ!

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆ ಇದೀಗ ಅಧಿಕೃತವಾಗಿ ಜಾರಿಗೊಂಡಿದ್ದು, ಆದೇಶ ಹೊರಬಿದ್ದಿದೆ.

First Published Jan 23, 2020, 2:10 PM IST | Last Updated Jan 23, 2020, 2:10 PM IST

ಬೆಂಗಳೂರು[ಜ.23]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆ ಇದೀಗ ಅಧಿಕೃತವಾಗಿ ಜಾರಿಗೊಂಡಿದ್ದು, ಆದೇಶ ಹೊರಬಿದ್ದಿದೆ.

ರಾಜ್ಯದಲ್ಲೀಗ ಬೆತ್ತಲೆ ಸೇವೆ ಸಂಪೂರ್ಣ ನಿಷಿದ್ಧ| ಮುಟ್ಟಾದವರನ್ನು ಊರ ಹೊರಗಿಡುವುದಕ್ಕೂ ನಿಷೇಧ

ಈ ತಿಂಗಳ 4ರಿಂದಲೇ ಜಾರಿಗೆ ಬಂದಿದೆ. ಕಾಯ್ದೆ ಜಾರಿಯಿಂದಾಗಿ ಬೆತ್ತಲೆ ಸೇವೆಗೆ ಸಂಪೂರ್ಣ ನಿಷೇಧ ಹೇರಿದಂತಾಗಿದೆ. ಮಡೆಸ್ನಾನ, ದೇವರ ಹೆಸರಲ್ಲಿ ಹಿಂಸೆಗೆ ಅವಕಾಶ ಇಲ್ಲ. ಋುತಿಮತಿಯಾದಾಗ, ಗರ್ಭಿಣಿಯಾದಾಗ ಊರ ಹೊರಗಿಡುವ ಪದ್ಧತಿ, ವಶೀಕರಣ, ವಾಮಾಚಾರದಂತಹ ಪದ್ಧತಿಯನ್ನು ಕಾಯ್ದೆಯಲ್ಲಿ ನಿಷೇಧ ಮಾಡಲಾಗಿದೆ. ಜ್ಯೋತಿಷ್ಯ, ವಾಸ್ತುಶಾಸ್ತ್ರಕ್ಕೆ ಮಸೂದೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ.

ಮೂಢನಂಬಿಕೆ ಹೋಗಲಾಡಿಸುವುದು ಅಷ್ಟು ಸುಲಭವಲ್ಲ: ಡಿಸಿಎಂ ಕಾರಜೋಳ

ಸಮಾಜದಲ್ಲಿರುವ ಮೌಢ್ಯ ಮತ್ತು ಕಂದಾಚಾರ ನಿಗ್ರಹಕ್ಕೆ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಮೌಢ್ಯ ಪ್ರತಿಬಂಧಕ ಕಾಯ್ದೆಯು ತೀವ್ರ ಚರ್ಚೆಗೀಡಾಗಿ ವಿವಾದವನ್ನುಂಟು ಮಾಡಿತ್ತು. ಈ ಬಗ್ಗೆ ಶೀಘ್ರದಲ್ಲಿಯೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.