ಗುರುಪ್ರಸಾಸ್ ಸಾವಿನ ತನಿಖೆಯಲ್ಲಿ ಬೆಚ್ಚಿಬೀಳಿಸೋ ವಿವರ; ಭಾರೀ ರಹಸ್ಯ ಬಯಲು!

ಗುರುಪ್ರಸಾದ್​ ಸದಾ ಲವಲವಿಕೆಯಿಂದ ಇರ್ತಿದ್ದ ವ್ಯಕ್ತಿ. ಸದಾ ಎಲ್ಲರನ್ನೂ ಕಾಲೆಳೀತಾ ತಮಾಷೆ ಮಾಡಿಕೊಂಡಿರ್ತಿದ್ದ ವ್ಯಕ್ತಿ ಹೀಗೆ ಆತ್ಮಹತ್ಯೆಯ ಮೊರೆ ಹೋಗಿದ್ದೇಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ನಡುವೆ...

First Published Dec 4, 2024, 2:18 PM IST | Last Updated Dec 4, 2024, 2:27 PM IST

ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಚಿತ್ರರಂಗಕ್ಕೆ ದೊಡ್ಡ ಶಾಕ್ ತಂದಿತ್ತು. ತನ್ನ ಬುದ್ದಿವಂತಿಕೆಯ ಮಾತುಗಳಿಂದ ಎಲ್ಲರ ಮೊಗದಲ್ಲಿ ನಗು ಮೂಡಿಸ್ತಾ ಇದ್ದ ಗುರು ಸೂಸೈಡ್​ ಮಾಡಿಕೊಂಡಿದ್ದು ಏಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿತ್ತು. ಪೊಲೀಸರು ಕೂಡ ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ರು. ಇದೀಗ ಪೊಲೀಸ್ ತನಿಖೆಯಲ್ಲಿ ಒಂದಿಷ್ಟು ಬೆಚ್ಚಿಬೀಳಿಸೋ ವಿವರಗಳು ಸಿಕ್ಕಿವೆ.

ಯೆಸ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್  ಕಳೆದ ತಿಂಗಳು  ಆತ್ಮಹತ್ಯೆಗೆ ಶರಣಾಗಿದ್ರು. ಮಾದನಾಯಕಹಳ್ಳಿಯ ಅಪಾರ್ಟ್​​ಮೆಂಟ್​​ನಲ್ಲಿ ಗುರುಪ್ರಸಾದ್ ಶವ ನೆಣಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎರಡು ದಿನ ಮೊದಲೇ ಸಾವನ್ನಪ್ಪಿದ್ದ ಗುರುಪ್ರಸಾದ್​​ ದೇಹ ಕೊಳೆತು ಹೋಗಿತ್ತು.

ಗುರುಪ್ರಸಾದ್​ ಸದಾ ಲವಲವಿಕೆಯಿಂದ ಇರ್ತಿದ್ದ ವ್ಯಕ್ತಿ. ಸದಾ ಎಲ್ಲರನ್ನೂ ಕಾಲೆಳೀತಾ ತಮಾಷೆ ಮಾಡಿಕೊಂಡಿರ್ತಿದ್ದ ವ್ಯಕ್ತಿ ಹೀಗೆ ಆತ್ಮಹತ್ಯೆಯ ಮೊರೆ ಹೋಗಿದ್ದೇಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಈ ನಡುವೆ ಗುರು ಎರಡನೇ ಪತ್ನಿ ಸುಮಿತ್ರಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.

ಸಾಲಗಾರರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಮಿತ್ರಾ ದೂರು ನೀಡಿದ್ರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಗುರುಪ್ರಸಾದ್ ಅವರ 4 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡು ಅವುಗಳಲ್ಲಿ ಆತ್ಮಹತ್ಯೆಗೆ ಕಾರಣವಾಗುವಂತಹ ಏನಾದರೂ ವಿಚಾರ ಇದೆಯಾ ಅನ್ನೋದ್ರ ತನಿಖೆಗೆ ಇಳಿದಿದ್ರು.

ಕೆಲವು, ಮೊಬೈಲ್ಗೆ ಸ್ಟ್ರಾಂಗ್ ಪಾಸ್ವರ್ಡ್ ಇದ್ದ ಕಾರಣ ಅವುಗಳನ್ನ ತಜ್ಞರಿಂದ ತೆಗೆಸಿ ನೋಡಿದ್ದರು. ಆದರೂ ಹೆಚ್ಚಿನ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಕೆಲವು ಮಾಹಿತಿಗಳನ್ನ ಡಿಲೀಟ್ ಮಾಡಿರಬಹುದು ಅಂತ ಮೊಬೈಲ್ ಗಳನ್ನ ಎಫ್ಎಸ್ಎಲ್ಗೆ ಕಳುಹಿಸಿ ರಿಟ್ರೈವ್ ಮಾಡಿಸಲಾಗಿದೆ. 

ಗುರು ಫೋನ್ ಕರೆಗಳ ಲಿಸ್ಟ್ನಲ್ಲಿ ಯಾರೂ ಅನುಮಾನಾಸ್ಪದವಾಗಿ ಮಾತನಾಡಿರುವ ಅಂಶಗಳು ಪತ್ತೆಯಾಗಿಲ್ಲ. ಸಿನಿಮಾಗೆ ಸಂಬಂಧಪಟ್ಟ ವಿಚಾರಗಳು, ಸಂಭಾಷಣೆಗಳು ಹಾಗೂ ಚಾಟಿಂಗ್ಗಳು ಮಾತ್ರ ಸಿಕ್ಕಿವೆ. ಆದ್ರೆ ಸಿನಿಮಾವನ್ನ ಹೊರತುಪಡಿಸಿ ಗುರುಗಿದ್ದ ಒಂದು ದೊಡ್ಡ ಚಟದ ವಿಚಾರ ಇದ್ರಲ್ಲಿ ಬಟಾಬಯಲಾಗಿದೆ.

ಹೌದು ಗುರುಪ್ರಸಾದ್ ಆನ್​ಲೈನ್​ನಲ್ಲಿ ತಮ್ಮಿ ಆಡುವ ಚಟಕ್ಕೆ ಬಿದ್ದಿದ್ರು. ರಮ್ಮಿಯಲ್ಲಿ ಹಣ ಮಾಡುವ ಹುಚ್ಚಿಗೆ ಬಿದ್ದಿದ್ದ ಗುರು, ಸಿನಿಮಾ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದನ್ನ ರಮ್ಮಿಗೆ ಬಳಕೆ ಮಾಡಿಕೊಂಡಿದ್ರು. ಕಡಿಮೆ ಅಂದ್ರೂ ರಮ್ಮಿನಲ್ಲಿ ಗುರುಪ್ರಸಾದ್ 1 ಕೋಟಿಗೂ ಹೆಚ್ಚು ಹಣ ಕಳೆದಿರೋದು ಬೆಳಕಿಕೆ ಬಂದಿದೆ.

ಗುರುಪ್ರಸಾದ್​ರ ಕೊನೆಯ ಚಿತ್ರ ರಂಗನಾಯಕ ಕೂಡ ಫ್ಲಾಪ್ ಆಗಿತ್ತು. ಸಿನಿಮಾಗಳ ಅವಕಾಶವೂ ಇಲ್ಲದಂತೆ ಆಗಿತ್ತು. ಸಾಲ ಕೊಟ್ಟವರು ಬೆನ್ನು ಬಿದ್ದಿದ್ರು. ರಮ್ಮಿನಲ್ಲೇ  ಗೆದ್ದು ಸಾಲ ತೀರಿಸ್ತಿನಿ ಅನ್ನೋ ಹುಚ್ಚಿಗೆ ಬಿದ್ದಿದ್ದ ಗುರು, ಸಿಕ್ಕ ಸಿಕ್ಕ ಕಡೆಯೆಲ್ಲಾ ಸಾಲ ಮಾಡಿ ಮತ್ತೆ ರಮ್ಮಿನಲ್ಲಿ ಹೂಡಿಕೆ ಮಾಡಿ ಮತ್ತೆ ಮತ್ತೆ ಕಳೆದುಕೊಂಡಿದ್ರು.

ಅಲ್ಲಿಗೆ ಗುರು ಸಾವಿಗೆ ಆನ್ ಲೈನ್ ಗೇಮಿಂಗ್ ಚಟವೇ ಕಾರಣ ಅನ್ನೋದು ಬಯಲಾಗಿದೆ. ಇತ್ತೀಚಿಗೆ ಇಂಥಾ ಆನ್ ಲೈನ್ ಜೂಜಿನ ಚಟಕ್ಕೆ ಬಿದ್ದು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಗುರುಪ್ರಸಾದ್​ರಂಥಾ ಪ್ರತಿಭಾನ್ವಿತ, ಬುದ್ದಿವಂತ ನಿರ್ದೇಶಕ ರಮ್ಮಿಗೆ ಬಲಿಯಾಗಿದ್ದು ನಿಜಕ್ಕೂ ದುರಂತವೇ ಸರಿ..!, ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ..