ಸಿಟಿ ರವಿ ಬಿಡುಗಡೆಗೆ ಆದೇಶ: ಇದು ಕೈ ಸರ್ಕಾರಕ್ಕೆ ಹೈಕೋರ್ಟ್‌ನಿಂದ ಸಿಕ್ಕ ಕಪಾಳ ಮೋಕ್ಷ: ವಿಜಯೇಂದ್ರ
ಹೈಕೋರ್ಟ್ ಆದೇಶದ ಮೇರೆಗೆ ಸಿಟಿ ರವಿಯವರನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದು, ವಿಜಯೇಂದ್ರ ಇದನ್ನು ರಾಜಕೀಯ ಷಡ್ಯಂತ್ರ ಎಂದು ಕರೆದಿದ್ದಾರೆ.
ಸಿಟಿ ರವಿಯವರನ್ನು ಹೈಕೋರ್ಟ್ ಆದೇಶದಂತೆ ಕಡೆಗೂ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿಗೆ ಕರೆತರುತ್ತಿದ್ದ ವೇಳೆ ಹೈಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಅವರನ್ನು ದಾವಣಗೆರೆಯಲ್ಲಿಯೇ ಬಿಡುಗಡೆ ಮಾಡಲಾಗಿದ್ದು, ದಾವಣಗೆರೆ ಐಬಿಯಲ್ಲಿ ಸುದ್ದಿಗೋಷ್ಠಿ ಮಾಡಲಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಸಿಟಿ ರವಿಯವರ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿದ್ದು, ಹೈಕೋರ್ಟ್ ನೀಡಿದ ತೀರ್ಪು ಕಾಂಗ್ರೆಸ್ ಸರ್ಕಾರಕ್ಕೆ ಸಿಕ್ಕ ಕಪಾಳ ಮೋಕ್ಷವಾಗಿದೆ. ನೊಟೀಸ್ ನೀಡದೆಯೇ ಓರ್ವ ಜನಪ್ರತನಿಧಿಯನ್ನು ವಿಧಾನಪರಿಷತ್ ಸದಸ್ಯನನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಇದು ಸಂಪೂರ್ಣ ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ಹೈಕೋರ್ಟ್ ತೀರ್ಪಿನಿಂದ ಗೊತ್ತಾಗ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತನಿಧಿಗಳ ಸ್ಥಿತಿಯೇ ಹೀಗಾದ್ರೆ ಇನ್ನೂ ಜನ ಸಾಮಾನ್ಯರ ಕತೆ ಏನು? ಇದರಲ್ಲಿ ಸಂಪೂರ್ಣ ರಾಜಕೀಯ ಷಡ್ಯಂತ್ರ ಇದೆ. ಇದನ್ನು ತೀರ್ಪು ಧೃಡಪಡಿಸಿದೆ. ನೋಟಿಸ್ ಕೊಡದೇ ಶಾಸಕನನ್ನು ಬಂಧಿಸುವುದು ಅಕ್ಷಮ್ಯ ಅಪರಾಧ. ಪೊಲೀಸರು ಸಂಪೂರ್ಣವಾಗಿ ಆಡಳಿತ ಪಕ್ಷದ ಹಿಡಿತದಲ್ಲಿದ್ದಾರೆ. ಅವರು ಹೇಳಿದಂತೆ ಕೇಳ್ತಿದ್ದಾರೆ. ಸಿಟಿ ರವಿಯವರ ಮೇಲೆ ಮಾರಣಾಂತಿಕ ಹಲ್ಲೆಯಾದ್ರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.