Asianet Suvarna News Asianet Suvarna News

ಕರ್ನಾಟಕದ ಮಿನಿ ಯುದ್ಧ ಗೆದ್ದರಷ್ಟೇ ಗಟ್ಟಿಯಾಗುತ್ತಾ ಸಿದ್ದು ಪಟ್ಟ?

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರತಿಷ್ಠೆಯ ಕಣವಾಗಿದೆ. ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರಗಳ ಗೆಲುವು-ಸೋಲುಗಳು ರಾಜ್ಯ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಲಿವೆ.

First Published Oct 18, 2024, 8:26 PM IST | Last Updated Oct 18, 2024, 8:26 PM IST

ಕರ್ನಾಟಕದಲ್ಲಿ ಮತ್ತೆ ಬಂದಿದೆ ಮಿನಿಯುದ್ಧ ಬಂದಿದೆ. ಈ ಅಖಾಡದಲ್ಲಿ ಅಡಗಿದೆ ಸಿಎಂ-ಡಿಸಿಎಂ ಪ್ರತಿಷ್ಠೆ. ರಾಜ್ಯದಲ್ಲಿ ಈಗಿರುವ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರ ಸಿಎಂ ಪಟ್ಟ ಇನ್ನೂ ಗಟ್ಟಿಯಾಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಅದರಲ್ಲಿಯೂ ಸಂಡೂರು ಕ್ಷೇತ್ರದ ಗೆಲುವು ಸ್ವತಃ ಸಿಎಂ ಪ್ರತಿಷ್ಠೆಯನ್ನು ಕಣಕ್ಕಿಟ್ಟು ನಡೆಸಲಾಗುವ ಚುನಾವಣೆ ಆಗಿದೆ.

ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌ಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗೆಲವು ಭಾರಿ ದೊಡ್ಡ ಸ್ಥಾನವನ್ನು ತಂದು ಕೊಡಲಿದೆ. ಈಗಾಗಲೇ ತಮ್ಮ ಸ್ವಂತ ಕ್ಷೇತ್ರದಲ್ಲಿಯೇ ಸಹೋದರ ಡಿ.ಕೆ. ಸುರೇಶ್ ಸೋತಿರುವ ಕಾರಣ ಹೆಡೆಯನ್ನು ತುಳಿದ ನಾಗರ ಹಾವಿನಂತೆ ಡಿ.ಕೆ. ಶಿವಕುಮಾರ್ ಕೆರಳಿದ್ದಾರೆ. ತಮ್ಮನ ಸೋಲಿಗೆ ಕಾರಣವಾಗಿ ಸಂಸದರಾದ ಡಾ.ಸಿ.ಎನ್. ಮಂಜುನಾಥ್ ಅವರ ಭಾಮೈದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗೆದ್ದ ಕ್ಷೇತ್ರವೂ ಆಗಿದೆ. ಚನ್ನಪಟ್ಟಣದಿಂದ ಗೆದ್ದು ಶಾಸಕರಾಗಿದ್ದ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಇದೀಗ ಕೆಂದ್ರ ಸಚಿವರಾಗಿದ್ದರಿಂದ ಚನ್ನಪಟ್ಟಣ ಕ್ಷೇತ್ರ ಖಾಲಿಯಾಗಿದೆ. ಇದೀಗ ಚನ್ನಪಟ್ಟಣ ಚುನಾವಣೆಗೆ ನ.13 ದಿನಾಂಕ ನಿಗದಿಯಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಆದರೆ, ಈ ಕ್ಷೇತ್ರವನ್ನು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದಾರೆ.

ಈವರೆಗೆ ಎರಡೂ ಕ್ಷೇತ್ರಗಳಿಂದ ಮಾತ್ರ ಅಭ್ಯರ್ಥಿ ಯಾರೆಂಬುದನ್ನು ನಿರ್ಧಾರ ಮಾಡಿಲ್ಲ. ಆದರೆ, ಯಾರೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೂ ಚದುರಂಗದ ಚೆಕ್ ಮೇಟ್‌ನಂತೆ ಸೈನಿಕ ಸಿ.ಪಿ. ಯೋಗೇಶ್ವರ್ ಕಾದು ಕುಳಿತಿದ್ದಾರೆ. ಹಾವೇರಿಯಿಂದ ಗೆದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗೆದ್ದು, ಸಂಸತ್ತಿಗೆ ಆಯ್ಕೆ ಆಗಿದ್ದರಿಂದ ಇನ್ನು ಶಿಗ್ಗಾವಿ ಕ್ಷೇತ್ರ ಖಾಲಿಯಾಗಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಪೈಪೋಟಿಗೆ ಇಳಿಯಲಿವೆ. ಆದರೆ, ಇದು ಮಾಜಿ ಸಿಎಂ ಬೊಮ್ಮಾಯಿ ಅವರ ಪ್ರತಿಷ್ಠೆಯ ಅಳಿವು ಉಳಿವಿನ ಕಣವಾಗಿದೆ.