ಮದರಸಾಗಳಿಗೆ ಮೂಗುದಾರ ತೊಡಿಸಲು ಸರ್ಕಾರದಿಂದ ಸಿದ್ಧತೆ!
ರಾಜ್ಯ ಸರ್ಕಾರ ಮದರಸಾಗಳಿಗೆ ಮೂಗುದಾರ ಹಾಕಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮಾದರಿಯಲ್ಲಿ ಮಂಡಳಿ ರಚಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಮದರಸಾಗಳ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಈ ಮೂಲಕ ಮದರಸಾಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮಾದರಿಯಲ್ಲಿ ಮಂಡಳಿ ರಚಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದು, ರಾಜ್ಯದಲ್ಲಿರುವ ನೊಂದಾಯಿತ 966 ಮದರಾಸಗಳನ್ನ ಈ ಮಂಡಳಿ ವ್ಯಾಪ್ತಿಗೆ ತರಲು ಪ್ರಕ್ರಿಯೆ ಆರಂಭವಾಗಿದ್ದು, ನೊಂದಾಯಿಸಿಕೊಳ್ಳದ ಮದರಸಾಗಳಿಗೂ ನೊಂದಣಿ ಕಡ್ಡಾಯಗೊಳಿಸಲಾಗುವುದು ಎಂದು ತಿಳಿದುಬಂದಿದೆ. ಇಸ್ಲಾಂ ಧಾರ್ಮಿಕತೆ ಬೋಧಿಸುವ ಜೊತೆ ಜೊತೆಗೆ ಸಾಮಾನ್ಯ ಶಾಲೆಗಳಲ್ಲಿನ ಔಪಚಾರಿಕ ಶಿಕ್ಷಣ ನೀಡಲು ಯೋಜನೆ ಹಮ್ಮಿಕೊಂಡಿದ್ದು, ಸಾಮಾನ್ಯ ಶಾಲೆಗಳಂತೆ ನಿತ್ಯ ರಾಷ್ಟ್ರಗೀತೆ ಹಾಡಿಸುವುದನ್ನು ಈ ಮಂಡಳಿಯು ಮದರಸಾಗಳಲ್ಲಿ ಜಾರಿಗೆ ತರಲಿದೆ. ಹಾಗೆ, ಪ್ರತಿ ಮದರಸಾಗೂ ಹಿಪ್ತ್ (ಕುರಾನ್ ಕಂಠ ಪಟಣ) ಹಾಗೂ ನಾಜಿಯ (ಧಾರ್ಮಿಕ ವಿಧಿ ಬೋಧನ) ನೇಮಿಸಲು ಸಿದ್ಧತೆ ನಡೆದಿದೆ. ಇದರ ಜೊತೆಗೆ ಮದರಸಾಗಳಲ್ಲಿನ ಮೂಲ ಸೌಕರ್ಯ, ಕಟ್ಟಡ ಅಭಿವೃದ್ದಿಗೂ ಮಂಡಳಿ ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾಗಿರುವ 50 ಕೋಟಿ ರೂಪಾಯಿಯನ್ನು ಬಳಸಲು ಈಗ ಬೊಮ್ಮಾಯಿ ಸರ್ಕಾರ ಅನುಮತಿಸಿದೆ. ಈ ಪೈಕಿ ಪ್ರತಿ ನೊಂದಾಯಿತ ಮದರಸಾ ಮೂಲಸೌಕರ್ಯ ಅಭಿವೃದ್ದಿಗೆ 10 ಲಕ್ಷ ರೂಪಾಯಿ ನಿಗದಿ ಮಾಡಿ ಅನುದಾನ ಬಳಕೆಗೆ ಸರ್ಕಾರ ಆದೇಶಿಸಿದೆ ಎಮದೂ ತಿಳಿದುಬಂದಿದೆ.