Asianet Suvarna News Asianet Suvarna News

Kodagu: ಸಾಧಾರಣ ಮಳೆಗೆ ಕೊಚ್ಚಿ ಹೋಗುತ್ತಿರುವ ತಡೆಗೋಡೆಗಳು..!

*  ಪ್ರಾಕೃತಿಕ ವಿಕೋಪದ ಬಳಿಕ ರಸ್ತೆ ದುರಸ್ತಿಗೆ ನೂರಾರು ಕೋಟಿ
*  ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳೀಯರ ಆರೋಪ
*  ಪಶ್ಚಿಮ ಘಟ್ಟದ ಮಣ್ಣಿನ ಗುಣದ ಬಗ್ಗೆ ಇಂಜಿನಿಯರ್‌ಗಳಿಗೆ ಅಜ್ಞಾನ
 

ಕೊಡಗು(ಮೇ.24): ಒಂದು ಕಡೆ ಬೃಹತ್ ಬೆಟ್ಟ ಮತ್ತೊಂದು ಕಡೆ ಆಳ ಪ್ರಪಾತ ಮಧ್ಯದಲ್ಲಿ ಭಯಾನಕ ರಸ್ತೆ. ರಸ್ತೆ ಕುಸಿಯಬಾರದು ಅಂತ ಹೆಜ್ಜೆ ಹೆಜ್ಜೆಗೂ ತಡೆಗೋಡೆಗಳ ನಿರ್ಮಾಣ. ಅದೂ ಕೂಡ ಕಳೆದ ಮೂರು ವರ್ಷಗಳಿಂದ. ಮಳೆಗಾಲದ ವೇಳೆ ಇಲ್ಲೆಲ್ಲಾ ಭೂ ಕುಸಿತವಾಗಿ ರಸ್ತೆಗಳೇ ಕೊಚ್ಚಿ ಹೋಗಿದ್ದವು. ಇದೀಗ ಆ ರಸ್ತೆಗಳ ಮರು ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣದ ಜೊತೆಗೆ ಆ ರಸ್ತೆಗಳ ರಕ್ಷಣೆಯೂ ಆಗಬೇಕಿದೆ. ಹಾಗಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ರಸ್ತೆಗಳಿಗೆ ಬೃಹತ್ ತಡೆಗೋಡೆಗಳನ್ನ ರಚಿಸಲಾಗುತ್ತಿದೆ. ಆದ್ರೆ ಈ ತಡೆಗೋಡೆಗಳು ಮೇ ತಿಂಗಳ ಸಾಧಾರಣ ಮಳೆಗೇ ಕೊಚ್ಚಿ ಹೋಗುತ್ತಿವೆ. ಇದಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎನ್ನುತ್ತಿದ್ದಾರೆ ಸ್ಥಳೀಯರು

ವಿಪರ್ಯಾಸ ಅಂದ್ರೆ ರಸ್ತೆಯ ಒಂದು ಕಡೆ ಕಾಮಗಾರಿ ಮಾಡೋ ಎಂಜಿನಿಯರ್ಗಳು ಆ ಕಾಮಗಾರಿಗಾಗಿ ರಸ್ತೆಯ ಇನ್ನೊಂದು ಬದಿಯಿಂದ ಭಾರೀ ಪ್ರಮಾಣದಲ್ಲಿ ಬೆಟ್ಟ ಅಗೆದು ಮಣ್ಣು ತರುತ್ತಾರೆ. ಈ ರೀತಿ ಮಾಡುವುದರಿಂದಲೇ ರಸ್ತೆಗಳು ಕುಸಿಯುತ್ತಿವೆ. ಎಂಜಿನಿಯರ್ಗಳಿಗೆ ಪಶ್ಚಿಮ ಘಟ್ಟದ ಮಣ್ಣಿನ ಗುಣದ ಬಗ್ಗೆ ಇರೋ ಅಜ್ಞಾನ, ಯೋಜನೆ ರೂಪಿಸುವಲ್ಲಿ ಆಗೋ ಎಡವಟ್ಟುಗಳಿಂದಾಗಿ ಇಂದು ಜಿಲ್ಲೆಯ ಪುರಾತನ ರಸ್ತೆಯೊಂದು ಅವನತಿಯ ಹಾದಿಯಲ್ಲಿದೆ. ಅಧಿಕಾರಿಗಳ ಎಡವಟ್ಟಿನಿಂದಾಗಿ ಈ ಭಾಗದ ಜನರು, ಮತ್ತು ವಾಹನ ಸವಾರರು ಇನ್ನಿಲ್ಲದಂತೆ ಪರದಾಡುವಂತಾಗಿದೆ. ಎರಡು ತಾಲ್ಲೂಕು ಕೇಂದ್ರಗಳನ್ನ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. 

ಸೇತುವೆ ಕಾಮಗಾರಿ ಮುಗಿದು 2 ವರ್ಷವಾದ್ರೂ ಬ್ರಿಡ್ಜ್‌ಗಿಲ್ಲ ಸಂಪರ್ಕ ರಸ್ತೆ..!

ಇತ್ತ ಜಿಲ್ಲಾಡಳಿತವೂ ಒಂದು ರೀತಿಯಲ್ಲಿ ಅಸಹಾಯಕವಾಗುತ್ತಿದೆ. ಯಾಕಂದ್ರೆ ಕಳೆದ ಮೂರು ವರ್ಷಗಳಿಂದ  ತಡೆಗೋಡೆ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ. ಮಳೆ ಬಂದಾಗಲೆಲ್ಲಾ ಇದು ಕೊಚ್ಚಿ ಹೋಗುತ್ತಲೇ ಇದೆ. ಹಾಗಾಗಿ ರಸ್ತೆಗಳ ರಕ್ಷಣೆಗೆ ಏನು ಮಾಡಬೇಕು ಎಂಬ ಪರಿಹಾರವಿಲ್ಲದೆ ಅತಂತ್ರವಾಗಿದೆ. ಎಲ್ಲದಕ್ಕೂ ಅತಿಯಾದ ಮಳೆಯೇ ಕಾರಣ ಎನ್ನುತ್ತಿದೆ. ಎಲ್ಲದ್ದಕ್ಕೂ ಇನ್ನೆರಡು ತಿಂಗಳಲ್ಲಿ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಲಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ ಬಿಸಿ ಸತೀಶ್.

ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ಮಧ್ಯೆ ಹಾದು ಹೋಗುವ ಈ ರಸ್ತೆಯನ್ನ ಹಿಂದಿನ ಕಾಲದಲ್ಲಿ ಬ್ರಿಟಿಷರು ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ರು, ಎಲ್ಲೆಲ್ಲಿ ನೀರಿನ ಸೆಲೆ ಇರುವುದೊ ಅಲ್ಲೆಲ್ಲಾ ಮಲೆಗಾಲದಲ್ಲಿ ನೀರಿನ ಹರಿಯುವಿಕೆಗೆ ಸರಾಗ ಮಾರ್ಗ ಬಿಟ್ಟು ಕಾಮಗಾರಿ ನಡೆಯುತ್ತಿತ್ತು. ರಸ್ತೆಗೆ ತಡೆಗೋಡೆಗಳ ಅಗತ್ಯವೇ ಇರಲಿಲ್ಲ. ಆದ್ರೆ ಇಂದು ಕೆಲವು ಲಕ್ಷದಲ್ಲಿ ನಿರ್ಮಾಣವಾಗೋ ರಸ್ತೆಗೆ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಈ ರಸ್ತೆಗೆ ಮೂಗಿಗಿಂತ ಮೂಗುತಿ ಭಾರ ಅನ್ನೋ ಹಾಗಿದೆ.
 

Video Top Stories