Kodagu: ಕೆಂಪು ಹರಳು ಕಲ್ಲು ದಂಧೆ, ಉನ್ನತ ಮಟ್ಟದ ತನಿಖೆಗೆ ಆಗ್ರಹ

 ಕೆಂಪು ಹರಳು ಕಲ್ಲು ಕೊಡಗಿನ (Kodagu) ಪಟ್ಟಿಘಾಟ್ ಬೆಟ್ಟ ಸಾಲುಗಳ ಒಡಲಲ್ಲಿ ಹುದುಗಿರೋ ಅತ್ಯಮೂಲ್ಯ ಸಂಪತ್ತು. ಆಭರಣ ತಯಾರಿಕಾ ಉದ್ದಿಮೆಯಲ್ಲಿ ಈ ಹರಳು ಕಲ್ಲುಗಳು ನೂರಾರು ಕೋಟಿ ರೂ ಬೆಲೆ ಬಾಳುತ್ತವೆ. 

First Published Feb 14, 2022, 7:13 PM IST | Last Updated Feb 14, 2022, 7:13 PM IST

ಮಡಿಕೇರಿ (ಫೆ.14): ಕೆಂಪು ಹರಳು ಕಲ್ಲು ಕೊಡಗಿನ ಪಟ್ಟಿಘಾಟ್ ಬೆಟ್ಟ ಸಾಲುಗಳ ಒಡಲಲ್ಲಿ ಹುದುಗಿರೋ ಅತ್ಯಮೂಲ್ಯ ಸಂಪತ್ತು. ಆಭರಣ ತಯಾರಿಕಾ ಉದ್ದಿಮೆಯಲ್ಲಿ ಈ ಹರಳು ಕಲ್ಲುಗಳು ನೂರಾರು ಕೋಟಿ ರೂ ಬೆಲೆ ಬಾಳುತ್ತವೆ. ಕಳೆದ 15 ವರ್ಷಗಳಿಂದಲೇ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ತಣ್ಣಿಮಾನಿ, ಕಡಮಕಲ್ಲು, ಎರಡನೇ ಮೊಣ್ಣಂಗೇರಿ, ಬಿಳೆಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂ ಒಡಲನ್ನ ಬಗೆದು ನೂರಾರು ಕೋಟಿ ರೂ ಮೌಲ್ಯದ ಹರಳು ಕಲ್ಲುಗಳನ್ನ ಲೂಟಿ ಮಾಡಲಾಗಿದೆ.

ಮೊನ್ನೆ ಮೊನ್ನೆ ಕೂಡ ತಣ್ಣಿಮಾನಿ ಬಳಿ ಅರಣ್ಯ ಇಲಾಖೆಯ ಕಾವಲು ಶಿಬಿರದ ಬುಡದಲ್ಲೇ ಭಾರೀ ಪ್ರಮಾಣದ ಸುರಂಗ ಪತ್ತೆಯಾಗಿತ್ತು. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಈ ಹಗರಣದಲ್ಲಿ ನೇರ ಶಾಮೀಲಾಗಿರುವುದು ಬೆಳಕಿಗೆ ಬಂದಿತ್ತು. ಆದ್ರೆ ಪ್ರಕರಣ ಬಯಲಾಗಿ ಒಂದು ತಿಂಗಳು ಕಳೆದ್ರೂ,ಕೇವಲ ಇಬ್ಬರು ಗಾರ್ಡ್​ಗಳನ್ನ ಮಾತ್ರ ಅಮಾನತು ಮಾಡಿದ್ದು ಬಿಟ್ರೆ, ಬೇರೆ ಏನೂ ಪ್ರಗತಿಯಾಗಿಲ್ಲ. ಇಬ್ಬರು ಚಿಲ್ಲರೆ ದಂಧೆಕೋರರನ್ನ ಅರೆಸ್ಟ್​ ಮಾಡಿ ಅರಣ್ಯ ಇಲಾಖೆ ಕೈತೊಳೆದುಕೊಂಡಿದೆ. ವಿಪರ್ಯಾಸ ಅಂದ್ರೆ ಹಗರಣದಲ್ಲಿ ಭಾಗಿಯಾಗಿರೋ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳೇ ಇದರ ತನಿಖಾ ತಂಡದಲ್ಲಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಕೆಜಿ ಬೋಪಯ್ಯ, ಪ್ರಕರಣವನ್ನ ಸಿಒಡಿ ತನಿಖೆಗೆ ಒಪ್ಪಿಸಿ ಅಂತ ಹೇಳಿ ಅವರೂ ಕೂಡ ಕೈತೊಳೆದುಕೊಂಡಿದ್ದಾರೆ. ವಾಸ್ತವವಾಗಿ ಶಾಸಕರಾಗಿ ಸರ್ಕಾರ ಮಟ್ಟದಲ್ಲಿ ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿದೆ.

ಜನ ಸಾಮಾನ್ಯರು ಅರಣ್ಯದಲ್ಲಿ ಒಂದು ಮರ ಕಡಿದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಆ ಜನರನ್ನು ಹಿಂಸಿಸಿ ಇನ್ನಿಲ್ಲದ ಶಿಕ್ಷೆ ಕೊಡ್ತಾರೆ. ಅದೇ ಅರಣ್ಯ ಇಲಾಖೆ ಸಿಬ್ಬಂದಿಯೇ ತನ್ನ ಹೊಲವನ್ನ ತಾನೇ ಮೇಯ್ದೆರೆ ಕೇಳುವವರು ಮಾತ್ರ ಯಾರೂ ಇಲ್ಲ. ಹಾಗಾ ಕೊಡಗಿನ ಜನರಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಬೇಸರ ಮೂಡಿದೆ. ಇದರಿಂದಾಗಿಯೇ ಕೊಡಗಿನ ಬೆಟ್ಟ ಪ್ರದೇಶಗಳಲ್ಲಿ ಭೀಕರ ಭೂ ಕುಸಿತಗಳು ಸಂಭವಿಸುತ್ತಿವೆ ಅಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.