ರಸ್ತೆ ಮಾಡಿಸಿ ಕೊಡಿ ಮೋದಿ ಜೀ: ಉತ್ತರದ ನಿರೀಕ್ಷೆಯಲ್ಲಿ ಮೇಘಾನೆ ಗ್ರಾಮಸ್ಥರು!
ಒಂದೊಳ್ಳೆ ರಸ್ತೆಗಾಗಿ ಸರ್ಕಾರದ ಮುಂದೆ ಅಂಗಲಾಚುವ ಪರಿಸ್ಥಿತಿ| ಆಕ್ರೋಶಿತ ಯುವ ಸಮುದಾಯದಲ್ಲಿ ವ್ಯವಸ್ಥೆಯ ವಿರುದ್ಧ ಕಿಚ್ಚು| ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮೇಘಾನೆ ಗ್ರಾಮ| ಉತ್ತಮ ರಸ್ತೆಗಾಗಿ ಸರ್ಕಾರಕ್ಕೆ ಆಗ್ರಹಿಸಿ ಸುಸ್ತಾದ ಗ್ರಾಮಸ್ಥರು| ಕಾಯ್ದಿಟ್ಟ ಅರಣ್ಯ ಪ್ರದೇಶದ ನೆಪ ಹೇಳಿ ರಸ್ತೆ ನಿರ್ಮಾಣಕ್ಕೆ ನಿರಾಕರಣೆ| ಪ್ರಧಾನಿ ಮೋದಿಗೆ ಪತ್ರ ಬರೆದ ಗ್ರಾಮದ ಯುವತಿ ವಿಭಶ್ರೀ ಶೆಟ್ಟಿ| 5 ಕಿ.ಮೀ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿ ವಿಭಶ್ರೀ ಪತ್ರ|
ಸಾಗರ(ಜ.04): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮೇಘಾನೆ ಗ್ರಾಮದ ಜನರ ವ್ಯಥೆ ಕೇಳಲು ರಾಜ್ಯ ಸರ್ಕಾರದ ಬಳಿ ಸಮಯವಿಲ್ಲ. ಅಷ್ಟಕ್ಕೂ ಸರ್ಕಾರದಿಂದ ಇವರೇನು ಇಂದ್ರ ಚಂದ್ರರನ್ನು ಕೇಳಿದವರಲ್ಲ. ಬದುಕಿನ ಬಂಡಿ ಸಾಗಿಸಲು ಕೇವಲ 5 ಕಿ.ಮೀ ಉತ್ತಮ ರಸ್ತೆಯನ್ನಷ್ಟೇ ಕೇಳಿದ ಸ್ವಾಭಿಮಾನಿಗಳು.
ಆದರೆ ಇದುವರೆಗೂ ಯಾವುದೇ ಸರ್ಕಾರ ಇವರ ಕೋರಿಕೆಯತ್ತ ಗಮನ ಹರಿಸಿಲ್ಲ. ಕೇಳಿದರೆ ನೀತಿ-ನಿಯಮ ಕಾನೂನು ಅಂತೆಲ್ಲಾ ಹೇಳಿ ಇವರ ಕೋರಿಕೆಯನ್ನು ತಳ್ಳಿ ಹಾಕುವುದನ್ನಷ್ಟೇ ಸರ್ಕಾರ ಇದುವರೆಗೂ ಮಾಡಿದ ಕೆಲಸ.
ಆದರೆ ತಮ್ಮೂರಿಗೆ ಉತ್ತಮ ರಸ್ತೆಯ ಕನಸು ಕಾಣುತ್ತಿರುವ ಗ್ರಾಮದ ಯುವ ಸಮುದಾಯ ಮಾತ್ರ ಆಸೆ ಬಿಟ್ಟಿಲ್ಲ. ತಮ್ಮ ಗ್ರಾಮಕ್ಕೆ ರಸ್ತೆಯನ್ನು ಮಾಡಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಇಲ್ಲಿನ ಯುವತಿ ವಿಭಶ್ರೀ ಆರ್. ಶೆಟ್ಟಿ, ನೇರವಾಗಿ ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ.
ಈ ಹಿಂದೆಯೂ ಇದೇ ವಿಷಯವಾಗಿ ತಾವು ಪ್ರಧಾನಿ ಕಚೇರಿಗೆ ಮನವಿ ಪತ್ರ ರವಾನಿಸಿದ್ದಾಗಿ ಹೇಳಿರುವ ವಿಭಶ್ರೀ, ಇದುವರೆಗೂ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕಾರಣಕ್ಕೆ ಮತ್ತೊಮ್ಮೆ ಪ್ರಧಾನಿಗೆ ಮನವಿ ಮಾಡಿಕೊಂಡಿರುವ ವಿಭಶ್ರೀ, ಗ್ರಾಮದ ಬೇಡಿಕೆಯನ್ನು ಪ್ರಧಾನಿ ಈಡೇರಿಸುತ್ತಾರೆಂಬ ಭರವಸೆ ಇದೆ ಎನ್ನುತ್ತಾರೆ.