Kodagu: 4 ಕೋಟಿ ರೂಪಾಯಿ ಖರ್ಚಾದ್ರೂ ಪೂರ್ಣವಾಗದ ಮಡಿಕೇರಿ ಸ್ಕ್ವೇರ್
ಕಳೆದ ನಾಲ್ಕು ವರ್ಷಗಳಿಂದ ಭೀಕರ ಪ್ರವಾಹ (Flood) ಮತ್ತು ಭೂಕುಸಿತದಿಂದ (Land Slide) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಇದೇ ಪ್ರವಾಹ ಪರಿಸ್ಥಿತಿ ನಮ್ಮ ಅಧಿಕಾರಿಗಳು ಜನ ಪ್ರತಿನಿಧಿಗಳ ಪಾಲಿಗೆ ಹಬ್ಬವಾಗಿದೆ.
ಕೊಡಗು (ಮಾ. 28): ಕಳೆದ ನಾಲ್ಕು ವರ್ಷಗಳಿಂದ ಭೀಕರ ಪ್ರವಾಹ (Flood) ಮತ್ತು ಭೂಕುಸಿತದಿಂದ (Land Slide) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಇದೇ ಪ್ರವಾಹ ಪರಿಸ್ಥಿತಿ ನಮ್ಮ ಅಧಿಕಾರಿಗಳು ಜನ ಪ್ರತಿನಿಧಿಗಳ ಪಾಲಿಗೆ ಹಬ್ಬವಾಗಿದೆ. ಯಾಕಂದ್ರೆ ಪರಿಹಾರ ಕಾಮಗಾರಿಗಳ ಇಂದಿನ ಪರಿಸ್ಥಿತಿ, ಮತ್ತು ಹಣದ ಪೋಲು ನೋಡಿದಾಗ ನಾವೆಂಥ ಭ್ರಷ್ಟರ ವ್ಯವಸ್ಥೆಯಲ್ಲಿದ್ದೇವೆ ಅಂತ ಜನರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ನೀವೊಮ್ಮೆ ಮಡಿಕೇರಿ (Madikeri)ನಗರದ ಹೃದಯ ಭಾಗಕ್ಕೆ ಎಂಟ್ರಿ ಕೊಟ್ಟರೆ ಒಮ್ಮೆಗೇ ಗಾಬರಿ ಬೀಳ್ತೀರಾ. ಯಾಕಂದ್ರೆ ಹೃದಯ ಭಾಗದಲ್ಲಿರೋ ಸಿಮೆಂಟಿನ ರಕ್ಕಸ ಕಟ್ಟೆಯೊಂದು ಮುಖಕ್ಕೆ ರಾಚುವಂತಿದೆ. ಯಾವುದೋ ಬೃಹತ್ ಅಣೆಕಟ್ಟಿನ ಮಾದರಿ ಇದು ಎಂಬಂತೆ ಗೋಚರಿಸುತ್ತಿದೆ. ಇಡೀ ನಗರವನ್ನೇ ವಿಕಾರ ಮಾಡಿರೋ ಈ ಕಟ್ಟಡ ಬೇರೇನೂ ಅಲ್ಲ, ಬಹುಕೋಟಿ ವೆಚ್ಚದ ತಡೆ ಗೋಡೆ. ಹೌದು, ಈ ಹಿಂದೆ ಇಲ್ಲಿ ಖಾಸಗಿ ಬಸ್ ನಿಲ್ದಾಣವಿತ್ತು. ಆದ್ರೆ 2018ರಲ್ಲಿ ಇಲ್ಲಿ ಭೂ ಕುಸಿತವಾಗಿ ಅನಾಹುತ ಸಂಭವಿಸಿತ್ತು. ಹಾಗಾಗಿ ಬಸ್ ನಿಲ್ದಾಣ ತೆರವುಗೊಳಿಸಿ ಇಲ್ಲಿ ತಡೆಗೋಡೆ ಮಾಡಲು ನಿರ್ಧರಿಸಲಾಯಿತು.
ತಡೆ ಗೋಡೆ ಜೊತೆಗೆ ಇಲ್ಲೊಂದು ಮಡಿಕೇರಿ ಸ್ಕ್ವೇರ್ ಹೆಸರಲ್ಲಿ ಆಕರ್ಷಕ ಪ್ರವಾಸೀ ತಾಣ ಮಾಡಲೂ ಯೋಜನೆ ಹಾಕಿ ಇದಕ್ಕಾಗಿ ಒಂದು ಕೋಟಿ ರೂ ಬಿಡುಗಡೆಯೂ ಆಯಿತು. ಆದ್ರೆ ಕಾಮಗಾರಿ ಮಾತ್ರ ಕಳೆದ ಮೂರು ವರ್ಷಗಳಿಂದ ನಡೆಯುತ್ತಲೇ ಇದೆ. ಒಂದು ಕೋಟಿ ರೂಪಾಯಿ ಇದ್ದ ಕಾಮಗಾರಿ ವೆಚ್ಚ ಇದೀಗ 4 ಕೋಟಿ 30 ಲಕ್ಷ ರೂಪಾಯಿಗೆ ಏರಿದೆ. ಆದ್ರೂ ತಡೆಗೋಡೆ ಸಂಪೂರ್ಣವಾಗಿಲ್ಲ. ಸಾರ್ವಜನಿಕರ ತೆರಿಗೆ ಹಣ ನೀರಿನಂತೆ ಇಲ್ಲಿ ಪೋಲಾಗುತ್ತಿದೆ. ಇದನ್ನು ಕೇಳುವವರು ಮಾಡುವವರು ಇಲ್ಲವಾಗಿದ್ದಾರೆ.
ವಿಪರ್ಯಾಸ ಅಂದ್ರೆ ಮಳೆ ಹಾನಿ ಕಾಮಗಾರಿ ಹೆಸರಿನಲ್ಲಿ 4 ಕೋಟಿ ರೂಪಾಯಿ ಖರ್ಚಾದ್ರೂ ಮಡಿಕೇರಿ ಸ್ಕ್ವೇರ್ ಸಂಪೂರ್ಣವಾಗಿಲ್ಲ. ಅದರ ಬದಲು ಇದನ್ನು ಮಡಿಕೇರಿ ಸ್ಕ್ವೇರ್ ಮಾಡುವ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಇನ್ನೇನಿದ್ದರೂ ಇದು ವಿಕಾರ ತಡೆಗೋಡೆಯಾಗಿ ಹಾಗೇ ಉಳಿಯಲಿದೆ. ಇದರ ಉಸ್ತುವಾರಿ ಹೊತ್ತಿರೋ ಮಡಿಕೇರಿ ನಗರ ಸಭೆ ಅಧಿಕಾರಿಗಳಿಗೂ ಕೂಡ ಇಲ್ಲಿ ಏನು ನಡೆಯುತ್ತಿದೆ ಅನ್ನೋದು ತಿಳಿಯುತ್ತಿಲ್ಲವಂತೆ. ಹೀಗಾಗಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಈ ಸ್ಥಳದ ಸೌಂದರ್ಯ ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಒಂದು ಸರಳವಾದ ಮಹತ್ವಾಕಾಂಕ್ಷಿ ಯೋಜನೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಮಾತ್ರವಲ್ಲ, ಜನರು ಕಷ್ಟಪಟ್ಟು ಸಂಪಾದಿಸಿ ತೆರಿಗೆ ನೀಡಿದ ಹಣ ಈ ಭ್ರಷ್ಟರ ಹೊಟ್ಟೆಯನ್ನ ಹೇಗೆ ತುಂಬಿಸುತ್ತದೆ ಅನ್ನೋದಕ್ಕೂ ಇದೊಂದು ಉತ್ತಮ ಉದಾಹರಣೆಯಾಗಿದೆ ಅಂತ ನಾಗರಿಕರು ವಿಷಾದ ವ್ಯಕ್ತಪಡಿಸುತ್ತಾರೆ.