Asianet Suvarna News Asianet Suvarna News

3 ವರ್ಷವಾದರೂ ಈಡೇರದ ಭರವಸೆ, ಕೊಡಗಿಗೆ ಹೈಟೆಕ್‌ ಆಸ್ಪತ್ರೆ ಇನ್ನೂ ಮರೀಚಿಕೆ!

- ಕೊಡಗು ಜಿಲ್ಲೆಗೊಂದು ಹೈಟೆಕ್‌ ಆಸ್ಪತ್ರೆ  ಕೊಡಗು ಜನರ ಬಹುಕಾಲದ ಬೇಡಿಕೆ

- ತುರ್ತು ಚಿಕಿತ್ಸೆಗೆ ದೂರದ ಮೈಸೂರು- ಮಂಗಳೂರಿಗೇ ಹೋಗ್ಬೇಕು!

- ನಾಗರಿಕರ ಅಭಿಯಾನಕ್ಕೆ ಸಿಕ್ಕಿತ್ತು ತಾರೆಯರ ಬೆಂಬಲ, ಸರ್ಕಾರದ ಆಶ್ವಾಸನೆ

- 3 ವರ್ಷವಾಗುತ್ತಾ ಬಂದರೂ ಆಶ್ವಾಸನೆಯಾಗಿಯೇ ಉಳಿದ ಸರ್ಕಾರದ ಮಾತು

ಕೊಡಗು (ಮೇ.11):  ಜಿಲ್ಲೆಯಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಕಾರಣ ಯಾವುದೇ ಅಪಘಾತಗಳು (Accident) ಸಂಭವಿಸಿದರೆ ಜಿಲ್ಲೆಯ ಜನತೆ  ತುರ್ತಾಗಿ ಮಂಗಳೂರು (Mangaluru) ಅಥವಾ ಮೈಸೂರಿಗೆ (Mysuru) ತೆರಳಬೇಕಾಗುತ್ತದೆ. ಎಮರ್ಜೆನ್ಸಿ ಸಂದರ್ಭದಲ್ಲಿ ಅಷ್ಟು ದೂರ ಸಾಗುವ ಮೊದಲೇ ಅದೆಷ್ಟೋ ಜೀವಗಳು ಬಲಿಯಾಗಿದೆ.

ಆದ್ದರಿಂದ ಜಿಲ್ಲೆಯಲ್ಲಿಯೇ ಒಂದು ಆಸ್ಪತ್ರೆ ನಿರ್ಮಾಣ ಮಾಡಿ ಎಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಒಂದು ಅಭಿಯಾನವನ್ನು ನಡೆಸಲಾಯಿತು. ಜಿಲ್ಲೆಯ ಜನರ ಸಮಸ್ಯೆಗಳನ್ನ ಮುಂದಿಡೋಕೆ ಸಿನಿ ತಾರೆಯರು ಸೇರಿ ಹಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.  ಈ ಅಭಿಯಾನದಲ್ಲಿ ಕೊಡಗಿನ ಯುವಪಡೆಯೊಂದು ಬೈಕ್ ರ್ಯಾಲಿ (Bike Rally) ನಡೆಸುವ ಮೂಲಕ ಗಮನ ಕೂಡ ಸೆಳೆದಿತ್ತು. 

ಆ ವೇಳೆ ಆರೋಗ್ಯ ಸಚಿವರಾಗಿದ್ದ ಶ್ರೀರಾಮಲು (Sriramulu) ಕೊಡವ ಭಾಷೆಯಲ್ಲಿ ಟ್ವೀಟ್ ಮಾಡಿ ಈ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ. ಮಡಿಕೇರಿಗೆ ಬಂದಾಗ ಆ ಬಗ್ಗೆ ಚರ್ಚೆ ಮಾಡೋಣ ಎಂದು 2019 ರ ಸೆಪ್ಟೆಂಬರ್ 26 ರಂದು ಟ್ವೀಟ್ ಕೂಡ ಮಾಡಿದ್ದರು. ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ವಾಸ್ತವ್ಯಕ್ಕಾಗಿ ಭೇಟಿ ನೀಡಿದ ಸಂದರ್ಭ ನಿಯೋಗವೊಂದು ಸಚಿವರಿಗೆ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಇದೀಗ ಮಡಿಕೇರಿ ಮೆಡಿಕಲ್‌ ಕಾಲೇಜು ಆಸ್ಪತ್ರೆ ಆವರಣದ ಎರಡು ಕಡೆ ಆರು ಅಂತಸ್ಥಿನ ಬೃಹತ್ ಕಟ್ಟಡ ನಿರ್ಮಾಣ ವಾಗುತ್ತಿದೆ. ಕೊನೆಗೂ ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಅಂತ ಜನರು ಖುಷಿಪಡುತ್ತಿದ್ದಾರೆ.‌ ಆದರೆ  ಆಸ್ಪತ್ರೆ ಡೀನ್ ಹೇಳೋದೇ ಬೇರೆ. ಇಲ್ಲಿ ಜಾಗದ ಕೊರತೆ ಇದೆ, ಹೊಸದಾಗಿ ಐಸಿಯು ಬೆಡ್,  OT, MBBS ವಿದ್ಯಾರ್ಥಿಗಳಿಗೆ ಟೀಚಿಂಗ್‌ಗಾಗಿ ಬೇರೆಬೇರೆ ರೂಮ್ಸ್, OPD ಬೆಡ್ ಸಪರೇಟ್ ಆಗಿ ಬರುತ್ತೆ ಎನ್ನುತ್ತಿದ್ದಾರೆ ಡೀನ್!

ಕೊಡಗಿನ‌ ಜನರು ಮಾತ್ರ ನಮ್ಮೂರಿಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಹೈಟೆಕ್ ಆಸ್ಪತ್ರೆ ಇಲ್ಲದೆ ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಳ್ಲುತ್ತಿರುವರ ಸಂಖ್ಯೆ ಏರುತ್ತಲೇ ಇದೆ. ಇನ್ನಾದ್ರೂ ಜಿಲ್ಲೆಯ ಶಾಸಕರು ಮತ್ತು ಸರ್ಕಾರ ಜಿಲ್ಲೆಗೊಂದು ಹೈಟೆಕ್ ಆಸ್ಪತ್ರೆ ಕೊಡಿ ಜನರ ಜೀವ ಉಳಿಸಿ ಅಂತ ಆಗ್ರಹಿಸುತ್ತಿದ್ದಾರೆ.
 

Video Top Stories