Kodagu: 2 ವರ್ಷಗಳಿಂದ ಕಾಮಗಾರಿ, ಭಾಗಮಂಡಲ ಫ್ಲೈ ಓವರ್ ಅಪೂರ್ಣ
- ಮಳೆಗಾಲದಲ್ಲಿ ಮೊದಲು ಜಲಾವೃತವಾಗೋದೇ ಈ ಭಾಗಮಂಡಲ ಗ್ರಾಮ
- ಎಲ್ಲಾ ಬದಿಯ ಸಂಪರ್ಕ ಕಳೆದುಕೊಂಡು ದ್ವೀಪದಂತಾಗುವ ಭಾಗಮಂಡಲ
- ಫ್ಲೈಓವರ್ ನಿರ್ಮಿಸಲು ಎರಡು ವರ್ಷಗಳ ಹಿಂದಿನಿಂದಲೇ ಕಾಮಗಾರಿ ಆರಂಭ
- ನಿಧಾನ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಜನಪ್ರತಿನಿಧಿಗಳಿಗಿಲ್ಲ ಆಸಕ್ತಿ!
ಕೊಡಗು (ಏ. 15): ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ಆ ಉರಿನ ಜನರು ತಮ್ಮೂರಲ್ಲಿ ಫ್ಲೈ ಓವರ್ ನೋಡಿ ಅದಾಗಲೇ ಎರಡು ವರ್ಷ ಕಳೆಯಬೇಕಿತ್ತು. ಆದ್ರೆ ನಮ್ಮ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಿಮದಾಗಿ ಆ ಫ್ಲೈ ಓವರ್ ಇನ್ನೂ ಮುಗಿದಿಲ್ಲ. ಅಂದ ಹಾಗೆ ಇದು ಜೀವನದಿ ಕಾವೇರಿಯ ಹುಟ್ಟೂರಿನ ಕಥೆ ವ್ಯಥೆ.
ಕೊಡಗು ಜಿಲ್ಲೆಯಲ್ಲಿ ಜೋರು ಮಳೆಗಾಲ ಶುರುವಾಯ್ತು ಅಂದ್ರೆ ಮೊದಲು ಜಲಾವೃತವಾಗೋದೇ ಈ ಭಾಗಮಂಡಲ (Bhagamandala) ಗ್ರಾಮ. ಒಂದು ರೀತಿಯಲ್ಲಿ ಎಲ್ಲಾ ಬದಿಯ ಸಂಪರ್ಕ ಕಳೆದುಕೊಂಡು ಈ ಗ್ರಾಮ ದ್ವೀಪದಂತಾಗುತ್ತದೆ. ಮಳೆ ಹೆಚ್ಚಾದಾಗ ಇಲ್ಲಿನ ಜನರು ರಸ್ತೆ ದಾಟಲು ದೋಣಿಯ ಮೂಲಕವೇ ಹೋಗಬೇಕಿದೆ. ಹಾಗಾಗಿ ಈ ಗ್ರಾಮಕ್ಕೆ ಫ್ಲೈ ಓವರ್ (Flyover) ನಿರ್ಮಿಸಲು ಕಳೆದ ಎರಡು ವರ್ಷಗಳ ಹಿಂದಿನಿಂದಲೇ ಕಾಮಗಾರಿ ಆರಂಭಿಸಲಾಗಿದೆ.
ಆದ್ರೆ ಎರಡು ವರ್ಷವಾದ್ರೂ ಫ್ಲೈ ಓವರ್ ಮಾತ್ರ ಸಿದ್ಧವಾಗಿಲ್ಲ. ಭಾಗಮಂಡಲದಾಚೆ ಎಲ್ಲದ್ರೂ ಪ್ರಾಕೃತಿಕ ವಿಕೋಪ ಸಂಭವಿಸಿದ್ರೆ ರಕ್ಷಣಾ ಪಡೆಗಳು ಪ್ರವಾಹ ದಾಟಲೂ ಸಾಧ್ಯವಾಗುವುದಿಲ್ಲ. ಇನ್ನೂ ಕೂಡ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಲೇ ಇದೆ. ಈ ಭಾಗದಲ್ಲಿ ಮಳೆ ತೀವ್ರತೆ ಪಡೆದಿದ್ದು, ವಿಪರೀತ ಕೇಸರಿನಿಂದ ಭಾಗಮಂಡಲ ಜನತೆ ಕಂಗೆಟ್ಟಿದ್ದಾರೆ
ಹಲವು ದಶಕಗಳಿಂದಲೇ ಇಲ್ಲಿ ಪ್ರವಾಹ ಸಮಸ್ಯೆ ತಲೆದೂರುತ್ತಿದೆ. ಆದ್ರೂ ಮೇಲ್ಸೇತುವೆ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರಿಲ್ಲ. ಈ ಯೋಜನೆಗಾಗಿ ಈಗಾಗಲೇ ಭರ್ತಿ 30 ಕೋಟಿ ರೂ ವ್ಯಯಿಸಲಾಗಿದೆ. ಈ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಅದೂ ಅಲ್ಲದೆ ಭಾಗಮಂಡಲದಂತಹ ಸಣ್ಣ ಗ್ರಾಮಕ್ಕೆ ಈ ಯೋಜನೆಯೇ ಅವೈಜ್ಞಾನಿಕ ಎಂಬ ಆರೋಪವೂ ಕೇಳಿ ಬಂದಿದೆ. ಒಳಚರಂಡಿ ವ್ಯವಸ್ತೆಯನ್ನ ರಸ್ತೆಯ ಮಧ್ಯೆ ಮಾಡಿರುವುದು ಸರಿಯಲ್ಲ ಅಂತ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ನಿಧಾನ ಗತಿಯಲ್ಲಿ ಸಾಗುತ್ತಿರುವ ಈ ಕಾಮಗಾರಿಯ ಕುರಿತು ಸ್ಥಳೀಯ ಶಾಸಕರನ್ನ ಪ್ರಶ್ನಿಸಿದರೆ, ಕಾಮಗಾರಿ ವಿಳಂಬಕ್ಕೆ ಕೊರೊನಾ ಕಾರಣ ಮುಂದಿಟ್ಟಿದ್ದಾರೆ.
ಭಾಗಮಂಡಲದಲ್ಲಿ ವರ್ಷಕ್ಕೆ 3000 ಮಿಲಿಮೀಟರ್ ಮಳೆಯಾಗುತ್ತದೆ. ಈ ಸಂದರ್ಭ ಭಾಗಮಂಡಲ ದ್ವೀಪದಂತಾಗುತ್ತದೆ. ಕನಿಷ್ಟ ಮುಂದಿನ ಮಳೆಗಾಲಕ್ಕಾದ್ರೂ ಮೇಲ್ಸೇತುವೆ ಕಾಮಗಾರಿ ಮುಗಿಸಿಕೊಡಿ ಅಂತ ಭಾಗಮಂಡಲ ನಿವಾಸಿಗಳು ಆಗ್ರಹಿಸಿದ್ದಾರೆ.