ತಾಪಂ ಇಒಯಿಂದ 40% ಕಮಿಷನ್ ಬೇಡಿಕೆ: ದಯಾಮರಣ ಕೋರಿದ ಗುತ್ತಿಗೆದಾರ
ಕಮಿಷನ್ ಕಿರುಕುಳದಿಂದ ಬೇಸತ್ತು, ಹುಬ್ಬಳ್ಳಿಯ ಗುತ್ತಿಗೆದಾರರು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ.
ಎ. ಬಸವರಾಜ್ ಎಂಬ ಗುತ್ತಿಗೆದಾರ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಗೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು. ಮೂಡಗೆರಿ ತಾಲೂಕಿಗೆ 27ಲಕ್ಷ ರೂ. ಕಡೂರು ತಾಲೂಕಿಗೆ 85ಲಕ್ಷ ರೂ. ಪರಿಕರ ಪೂರೈಕೆ ಮಾಡಿದ್ದರು. 2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಪತ್ರದ ಅನುಸಾರ ಪರಿಕರ ಪೂರೈಕೆ ಮಾಡಿದ್ದು, ಸರಬರಾಜು ಮಾಡಿ 2 ವರ್ಷ ಗತಿಸಿದರೂ ತಾಪಂ ಇಒ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡಲು ಕಡೂರು ಇಒ ದೇವರಾಜ್ ನಾಯಕ್ 40%ಗಿಂತ ಹೆಚ್ಚು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದು, ಶಾಸಕರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. ಗುತ್ತಿಗೆದಾರ ಬಸವರಾಜ್ ಅವರಿಗೆ ಸಾಲಗಾರರ ಕಾಟ ಜಾಸ್ತಿಯಾಗಿ ಮಾನಸಿಕವಾಗಿ ನೊಂದು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.