Chikkamagaluru: ನೀರು ಕುಡಿಯಲು ಹೋಗಿ ಬಿಯರ್ ಬಾಟಲಿಯೊಳಗೆ ಸಿಕ್ಕಿಬಿದ್ದ ನಾಗಪ್ಪ

ನೀರು ಕುಡಿಯಲು ನಾಗರಹಾವು ಬಿಯರ್ ಬಾಟಲಿಯೊಳಗೆ, ತನ್ನ ತಲೆಯನ್ನು ಸಿಕ್ಕಿಸಿ ಕೊಂಡು, ಕೊನೆಗೆ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಟ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

First Published Mar 17, 2022, 3:48 PM IST | Last Updated Mar 17, 2022, 3:48 PM IST

ಚಿಕ್ಕಮಗಳೂರು (ಮಾ. 17): ನೀರು ಕುಡಿಯಲು ನಾಗರಹಾವು ಬಿಯರ್ ಬಾಟಲಿಯೊಳಗೆ, ತನ್ನ ತಲೆಯನ್ನು ಸಿಕ್ಕಿಸಿ ಕೊಂಡು, ಕೊನೆಗೆ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಟ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ಒಳಗೆ ನೀರು ಇರಬಹುದು ಎಂದು ತಿಳಿದು ಅದನ್ನು ಕುಡಿಯಲು ಹೋಗಿ ನಾಗರಹಾವು ತನ್ನ ತಲೆಯನ್ನು ಸಿಕ್ಕಿಸಿಕೊಂಡು ಜೀವ ಉಳಿಸಿಕೊಳ್ಳಲು ಪರದಾಟ ನಡೆಸಿದೆ. 

ಮಲೆನಾಡು ಭಾಗದಲ್ಲಿ ಬಿರು ಬೇಸಿಗೆ ವಾತಾವರಣವಿದ್ದು ನೀರಿಗಾಗಿ  ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಿಸಿ ಪ್ರಾಣಿಗಳಿಗೂ ತಟ್ಟಿದೆ. ನೀರು ಕುಡಿಯಲೆಂದು ನಾಗರಹಾವು ಬಿಯರ್ ಬಾಟಲಿ ಒಳಗೆ ಸಿಲುಕಿ ತನ್ನ ತಲೆಯನ್ನು ಸಿಕ್ಕಿಸಿಕೊಂಡಿದ್ದನ್ನು ನೋಡಿದಂತಹ ಕೆಲ ಸಾರ್ವಜನಿಕರು ಕೂಡಲೇ ಮೂಡಿಗೆರೆಯ ಉರಗ ತಜ್ಞ ಅರಿಫ್ ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ಅರಿಫ್ ಬಿಯರ್ ಬಾಟಲಿ ಒಳಗೆ ತಲೆಯನ್ನು ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ಐದು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದು ಬಿಯರ್ ಬಾಟಲಿಯಿಂದ ಹರ ಸಾಹಸ ಮಾಡಿ ಅದರ ತಲೆಯನ್ನು ಹೊರಗೆ ತೆಗೆದಿದ್ದಾರೆ. ಈ ಸಮಯದಲ್ಲಿ ನಾಗರಹಾವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಉರಗ ತಜ್ಞ ಅರಿಫ್ ಹಾವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಸುರಕ್ಷಿತವಾಗಿ ಚಾರ್ಮುಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.