BIG 3: ಹಕ್ಕು ಪತ್ರಕ್ಕಾಗಿ 3 ದಶಕಗಳಿಂದ ಹೋರಾಟ: ಕಡಲಿನ ಮಕ್ಕಳ ಗೋಳು ಕೇಳುವವರು ಯಾರು?
ಮಲ್ಪೆ ಸಮೀಪದ ಪಡುಕೆರೆ, ಶಾಂತಿನಗರ, ಮಲ್ಪೆ ಸೆಂಟ್ರಲ್, ಕೊಳ ವಾರ್ಡ್ ಜನರು ಹಕ್ಕು ಪತ್ರವಿಲ್ಲದೆ ದಶಕಗಳಿಂದ ಒದ್ದಾಡುತ್ತಿರುವ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ಮಲ್ಪೆ ಭಾಗದ ಸುಮಾರು 200 ಮನೆಗಳಿಗೆ ಶಾಸಕ ರಘುಪತಿ ಭಟ್ ಹಕ್ಕುಪತ್ರ ಮಾಡಿಸಿಕೊಟ್ಟಿದ್ದರು. ಇದೀಗ ಎರಡನೇ ಹಂತದಲ್ಲಿ ಆದ್ಯತೆಯ ಮೇರೆಗೆ 143 ಮನೆಯವರು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಪಡುಕೆರೆ ಶಾಂತಿನಗರದಲ್ಲಿ ಒಂದು ಕಡೆ ಸಮುದ್ರ, ಮತ್ತೊಂದು ಕಡೆ ನದಿ ಹರಿಯುವ ಸುಂದರ ಭೂ ಪ್ರದೇಶವಿದೆ. ಇಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮಂದಿ ಮನೆಗಳ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ನದಿ ಮತ್ತು ಸಮುದ್ರದಲ್ಲಿ ಸಾಂಪ್ರದಾಯಿಕ ರೀತಿಯ ನಾಡದೋಣಿ ಹಾಗೂ ಕೈರಂಪಣಿ ಮೀನುಗಾರಿಕೆಯಿಂದಲೇ ಇವರ ಜೀವನ ನಡೆಯಬೇಕು. ಹಾಗಾಗಿ ವಾಸದ ಸ್ಥಳ ಬಿಟ್ಟು ಹೋಗಿ ಅಂದರೆ ಇವರಿಗೆ ಬೇರೆ ದಿಕ್ಕಿಲ್ಲ. ಮಾನವೀಯ ನೆಲೆಯಲ್ಲಿ ಮನೆ ಕಟ್ಟಿಕೊಂಡು, ವಿದ್ಯುತ್ ಸಂಪರ್ಕ ಪಡೆದು ಭಯದಲ್ಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಇವರದ್ದು. ಒಂದೊಮ್ಮೆ ಅಧಿಕಾರಿಗಳು ಬಂದು ಎದ್ದು ಹೋಗಿ ಎಂದರೆ ಸುತಾರಾಂ ಮಾತನಾಡದೆ ಹೋಗಬೇಕು. ಇನ್ನು ಬ್ಯಾಂಕ್ ಲೋನ್ ಅಂತೂ ಸಿಗುವುದೇ ಇಲ್ಲ. ತಮಗಾಗಿ ಹೋರಾಟ ನಡೆಸುವುದಕ್ಕೂ ಇವರಿಗೆ ಸಮಯವಿಲ್ಲ, ಮುಂಜಾನೆ ನಾಲ್ಕು ಗಂಟೆಗೆ ಎದ್ದು ನೀರಿಗಿಳಿದರೆ ಬಲೆಯಲ್ಲಿ ಮೀನು ಹಿಡಿದು ಬರುವಾಗ ಸಮಯ ಮೀರುತ್ತೆ. ಹಾಗೂ ಹೀಗೂ ಸಮಯ ಹೊಂದಿಸಿಕೊಂಡು ಆಯ್ಕೆಯಾದ ಜನಪ್ರತಿನಿಧಿಗಳ ಕಚೇರಿ ಬಾಗಿಲಿಗೆ ಸಾಕಷ್ಟು ಅಲೆದಿದ್ದಾರೆ. ಈಗ ಮತ್ತೊಂದು ಚುನಾವಣೆ ಬಂದಿದೆ, ಹಕ್ಕು ಪತ್ರದ ಆಸೆ ಮತ್ತೆ ಚಿಗುರಿದೆ. ಸ್ಥಳೀಯ ಶಾಸಕ ರಘುಪತಿ ಭಟ್ ಕೊಟ್ಟ ಭರವಸೆ ಈಡೇರಿಸುತ್ತಾರೆ ಎಂಬ ಆಶಾಭಾವ ಇದೆ. ಸಂತ್ರಸ್ಥರ ಇದೆ ಆಶಾಭಾವಕ್ಕೆ ಬಿಗ್ ತ್ರಿ ಬಲ ನೀಡುತ್ತಿದೆ.