ಬೆಳಗಾವಿ: ದೇಸೂರು ಐಟಿ ಪಾರ್ಕ್‌ಗೆ ಪಡೆದ ಜಮೀನು ವಾಪಸ್ ನೀಡಲು ರೈತರ ಆಗ್ರಹ
ಕುಂದಾನಗರಿ ಬೆಳಗಾವಿಯಲ್ಲಿ (Belagavi) ಸುಸಜ್ಜಿತ ಐಟಿ ಪಾರ್ಕ್ (IT Park) ಆಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಸದ್ಯ ಬೆಳಗಾವಿ ನಗರದ ಶ್ರೀನಗರ ಬಳಿ ಇರುವ 742 ಎಕರೆ ರಾಜ್ಯ ಸರ್ಕಾರದ ಜಮೀನು ರಕ್ಷಣಾ ಇಲಾಖೆ ವಶದಲ್ಲಿದ್ದು ಇದನ್ನ ಮರಳಿ ಪಡೆದು ಸುಸಜ್ಜಿತ ಐಟಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಶಾಸಕ ಅಭಯ್ ಪಾಟೀಲ್ ಶತಪ್ರಯತ್ನ ಪಡುತ್ತಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲಿ (Belagavi) ಸುಸಜ್ಜಿತ ಐಟಿ ಪಾರ್ಕ್ (IT Park) ಆಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಸದ್ಯ ಬೆಳಗಾವಿ ನಗರದ ಶ್ರೀನಗರ ಬಳಿ ಇರುವ 742 ಎಕರೆ ರಾಜ್ಯ ಸರ್ಕಾರದ ಜಮೀನು ರಕ್ಷಣಾ ಇಲಾಖೆ ವಶದಲ್ಲಿದ್ದು ಇದನ್ನ ಮರಳಿ ಪಡೆದು ಸುಸಜ್ಜಿತ ಐಟಿ ಪಾರ್ಕ್ ನಿರ್ಮಾಣ ಮಾಡಬೇಕೆಂದು ಶಾಸಕ ಅಭಯ್ ಪಾಟೀಲ್ ಶತಪ್ರಯತ್ನ ಪಡುತ್ತಿದ್ದಾರೆ.
ಈ ಮಧ್ಯೆ 2008-09ರಲ್ಲಿ ಬೆಳಗಾವಿ ನಗರದಿಂದ ಸುಮಾರು 16 ಕಿಮೀ ದೂರದ ದೇಸೂರು ಗ್ರಾಮದ ಬಳಿ 145 ಎಕರೆ ಜಮೀನು ವಶಕ್ಕೆ ಪಡೆದು ಐಟಿ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಇಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ 41 ಎಕರೆ 34 ಗುಂಟೆ ಜಾಗ ಅಭಿವೃದ್ಧಿ ಪಡಿಸಿ ಅಲ್ಲಿ 68 ಪ್ಲಾಟ್ ನಿರ್ಮಾಣ ಮಾಡಿದ್ದು 65 ಕಂಪನಿಗಳಿಗೆ ನೀಡಲಾಗಿದೆ. ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಸೇರಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಒಂದೇ ಒಂದು ಐಟಿ ಕಂಪನಿ ಬಂದಿಲ್ಲ. ಹೀಗಾಗಿ ಈ ಜಮೀನು ಇತರ ಕೈಗಾರಿಕೆಗೆ ನೀಡಲು ಕೆಎಸ್‌ಎಸ್ಐಡಿಸಿ ನಿರ್ಧರಿಸಿದ್ದು, ಕೆಲವೊಂದಿಷ್ಟು ಇತರ ಸಣ್ಣ ಕೈಗಾರಿಕೆಗಳು ಬಂದಿವೆ. ಉಳಿದಂತೆ ಎಲ್ಲಾ ಪ್ಲಾಟ್‌ಗಳು ಪಾಳು ಬಿದ್ದಿದ್ದು ರೈತರಿಂದ ಪಡೆದ ಜಮೀನು ಮರಳಿ ರೈತರಿಗೆ ನೀಡಿ ಇಲ್ಲವಾದ್ರೆ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಪ್ರಕಾಶ್ ನಾಯಕ್ ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಬರಲಿ ಹಾಡಹಗಲೇ ದರೋಡೆ ಮಾಡಲಾಗುತ್ತದೆ. ಎಲ್ಲಾ ಪಕ್ಷದ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡಿವೆ. ಫಲವತ್ತಾದ ಜಮೀನನ್ನು ರೈತರಿಂದ ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗೆ ಬಳಸಲಾಗುತ್ತಿದೆ. 2008-09ರಲ್ಲಿ ಕೆಂಪು ಮಣ್ಣು ಇರುವ ಫಲವತ್ತಾದ ಭೂಮಿ ಕಬ್ಬು, ರಸಾಳಿ, ಗೇರು ವಾಣಿಜ್ಯ ಬೆಳೆಯುವ ಸಾಮರ್ಥ್ಯ ಹೊಂದಿದೆ. ಡ್ಯಾಂ ನಿರ್ಮಾಣ ವೇಳೆ ಮುಳುಗಡೆಯಾದ ಜನರಿಗೆ ಪುನರ್ವಸತಿ ನೀಡಿದ ಜಾಗ ವಶಪಡಿಸಿಕೊಂಡಿದ್ದಾರೆ. ರೈತರಿಂದ ವಶಕ್ಕೆ ಪಡೆದ ಭೂಮಿ ಮರಳಿ ನೀಡಬೇಕು. ಹೆಚ್ಚಿನ ಪರಿಹಾರ ನೀಡಬೇಕು. ಐಟಿ ಪಾರ್ಕ್ ನಿರ್ಮಾಣ ಒಳ್ಳೆಯ ಯೋಜನೆಯಾಗಿತ್ತು. ಆದ್ರೆ 2008ರಲ್ಲಿ ವಶಕ್ಕೆ ಪಡೆದು ಈಗ 2022 ಆದರೂ ಪಾಳು ಬಿದ್ದಿದೆ. ರೈತರ ಬಳಿ ಇದ್ರೆ ಏನಾದರೂ ಬೆಳೆದು ಬದುಕು ಸಾಗಿಸುತ್ತಿದ್ದರು ಸರ್ಕಾರ ಬುದ್ದಿಭ್ರಮಣೆಯಾಗಿ ಭೂಮಿ ವಶಕ್ಕೆ ಪಡೆದುಕೊಂಡಿತ್ತಾ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.