Plight of Coolies: ಇತ್ತ ತೆರವಿನ ಭಯ, ಅತ್ತ ಕರೆಂಟ್ ಕಟ್, ಕತ್ತಲೆಯಲ್ಲಿ ಬದುಕು, ಬೇಕಿದೆ ಸೂರು

- ಬಾದಾಮಿಯ ಎಪಿಎಂಸಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿರೋ ಕುಟುಂಬಗಳು

- ತೆರವುಗೊಳಿಸುವ ಭಯದಲ್ಲಿ 200ಕ್ಕೂ ಅಧಿಕ ಕುಟುಂಬಗಳ ಬದುಕು ಅತಂತ್ರ

- ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯಗೂ ಮಹಿಳೆಯರಿಂದ ಮನವಿ

 

First Published Dec 17, 2021, 5:01 PM IST | Last Updated Dec 17, 2021, 5:01 PM IST

ಬಾಗಲಕೋಟೆ (ಡಿ. 17): ಬಾದಾಮಿ (Badami) ನಗರದ ಹೊರವಲಯದ ಗುಡ್ಡಕ್ಕೆ ಹೊಂದಿಕೊಂಡಂತೆ ಎಪಿಎಂಸಿ (APMC)  ಜಾಗದಲ್ಲಿ ಕಳೆದ 20 ವರ್ಷಗಳಿಂದ ಜನರು ತಗಡಿನ ಶೆಡ್‌ಗಳನ್ನ ಹಾಕಿಕೊಂಡು ಜೀವನ ಮಾಡ್ತಿದ್ದಾರೆ. ನಿತ್ಯ ಕೂಲಿ (Coolie)  ನಾಲಿ ಮಾಡಿಕೊಂಡು ಬದುಕು ಇಲ್ಲಿನ ಜೀವಗಳಿಗೆ ಇದನ್ನ ಬಿಟ್ಟರೆ ಬೇರೆ ಜಾಗೆ ಇಲ್ಲ. ಇವುಗಳ ಮಧ್ಯೆ ಈಗ ಸ್ಥಳೀಯ ಆಡಳಿತ ಸಿಬ್ಬಂದಿ ಇಲ್ಲಿರೋ 200ಕ್ಕೂ ಅಧಿಕ ಮನೆಗಳನ್ನ ಖಾಲಿ ಮಾಡಬೇಕೆಂದು ಸೂಚನೆ ನೀಡಿವೆ. ಇದ್ರಿಂದ ಇಲ್ಲಿನ ನೊಂದ ಬಡ ಕಾರ್ಮಿಕರು ಇಲ್ಲಿ ಬಿಟ್ರೆ ನಾವು ಬೇರೆ ಹೋಗಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಎಲ್ಲಾದ್ರೂ ಆಶ್ರಯ ಮನೆಗಳನ್ನ ಕಟ್ಟಿಕೊಡಲಿ ಇಲ್ಲವೆ ಜಾಗೆ ತೋರಿಸಲಿ ಹೋಗುತ್ತೇವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. 

ಇನ್ನು ತೆರವು ಮಾಡಲು ಸೂಚನೆ ನೀಡಿರೋದು ಒಂದು ಭಾಗವಾದ್ರೆ, ಮತ್ತೊಂದೆಡೆ ಇಲ್ಲಿರೋ ಶೆಡ್‌ನ ಪ್ರತಿಯೊಂದು ಮನೆಯವರೂ ಸಹ ಕರೆಂಟ್ ಬಿಲ್ ಕಟ್ಟಿದ್ರೂ ಕೂಡ  ಕರೆಂಟ್ ಸಪ್ಲೈ ಕಟ್ ಮಾಡಿದ್ದಾರೆ. ಇದ್ರಿಂದ ಇಲ್ಲಿನ 200ಕ್ಕೂ ಅಧಿಕ ಕುಟುಂಬಗಳು ಕತ್ತಲಲ್ಲಿ ಬದುಕು ಸಾಗಿಸುವಂತಾಗಿದೆ. ಇತ್ತೀಚಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ  (Siddaramaiah)ಭೇಟಿ ಮಾಡಿ ತಮ್ಮ ಅಳಲು ಹೇಳಿಕೊಂಡ್ರು. ಹೇಗಾದ್ರೂ ಮಾಡಿ ನಮಗೆ ಇರಲು ಜಾಗೆ ಕೊಡಿಸಿ ಅಂತ ಗೋಗರೆದ್ರು. ಇದಕ್ಕೆ ಸ್ಪಂದಿಸಿರೋ ಸ್ವಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರಗೆ ಮಾತನಾಡಿ, ಈ ಕಾರ್ಮಿಕ ಕುಟುಂಬಗಳಿಗೆ ಬೇರೆಡೆ ಜಾಗೆ ನಿಯೋಜನೆ ಮಾಡೋವರೆಗೆ ತೆರವು ಮಾಡಕೂಡದಂತೆ ಸೂಚನೆ ನೀಡಿ, ಜೊತೆಗೆ ಕರೆಂಟ್ ಸಪ್ಲೈ ಕಟ್ ಮಾಡದೇ ಮುಂದುವರೆಸುವಂತೆ ಪೋನ್‌ ಮೂಲಕ ಸೂಚನೆ ನೀಡಿದ್ದಾರೆ.