ಗಡ್ಕರಿಗೆ ಬೆದರಿಕೆ ಪ್ರಕರಣದ ಆರೋಪಿ ಜಯೇಶ್ ಜೈಲಲ್ಲೇ ಆತ್ಮಹತ್ಯೆ ಯತ್ನ!
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಜೈಲು ಪಾಲಾಗಿರುವ ವ್ಯಕ್ತಿಯೊಬ್ಬರು ಜೈಲಿನಲ್ಲಿ ತನಗೆ ವಿಷ ಹಾಕಿ ಕೊಲ್ಲುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ತನಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಹಾಗೂ ತನ್ನ ವಕೀಲರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಆರೋಪದಲ್ಲಿ ಹಿಂಡಲಗಾ ಜೈಲು ಪಾಲಾಗಿರುವ ಜಯೇಶ್ ಪೂಜಾರಿ ಅಲಿಯಾಸ್ ಶಕೀಲ್ ಇಲ್ಲಿನ ಜೈಲು ಸಿಬ್ಬಂದಿ ತನಗೆ ಊಟದಲ್ಲಿ ವಿಷ ಹಾಕಿ ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಜೊತೆಗೆ, ತನಗೆ ಇಲ್ಲಿ ಜೀವಂತವಾಗಿ ಇರಲು ಬಿಡುತ್ತಿಲ್ಲ ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕುತ್ತಿಗೆಯನ್ನು ಕೊಯ್ದುಕೊಂಡಿದ್ದೇನೆ. ಆದರೆ, ನಾನು ಬದುಕುಳಿದೆ. ಆದರೂ, ಜೈಲಿನ ಸಿಬ್ಬಂದಿ ನನಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ.
ಇನ್ನು ನಾನು ಜಾಮೀನಿಗಾಗಿ ಹಾಗೂ ಇಲ್ಲಿನ ಭಯದ ವಾತಾವರಣಕ್ಕೆ ನಾನು ನಲುಗಿ ಹೋಗಿದ್ದು, ವಕೀಲರಿಗೆ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಆದರೂ, ಜೈಲು ಸಿಬ್ಬಂದಿ ನನ್ನ ಅರ್ಜಿಯನ್ನು ವಕೀಲರಿಗೆ ತಲುಪಿಸಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಬಗ್ಗೆ ಸ್ವತಃ ಜಯೇಶ್ ಪೂಜಾರಿಯೇ ಜೈಲಿನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ದೇಶದಾದ್ಯಂತ ಜೈಲಿನ ವ್ಯವಸ್ಥೆಗಳ ಬಗ್ಗೆ ಚರ್ಚೆ ಆಗುವಂತೆ ಮಾಡಿದ್ದಾನೆ.