Asianet Suvarna News Asianet Suvarna News

ರೈತ ಪ್ರತಿಭಟನೆ: ದೇಶಾದ್ಯಂತ 'ರೈಲ್ ರೋಕೋ'!

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಾಲ್ಕು ಗಂಟೆಗಳ ಕಾಲ ದೇಶಾದ್ಯಂತ ರೈಲು ರೋಕೋ ಚಳವಳಿಗೆ ಕರೆ ನೀಡಿವೆ.

ನವದೆಹಲಿ(ಫೆ.18) ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಾಲ್ಕು ಗಂಟೆಗಳ ಕಾಲ ದೇಶಾದ್ಯಂತ ರೈಲು ರೋಕೋ ಚಳವಳಿಗೆ ಕರೆ ನೀಡಿವೆ.

ಕಾಯ್ದೆಗಳ ವಿರುದ್ಧ ಹೆಚ್ಚು ವಿರೋಧ ವ್ಯಕ್ತವಾಗಿರುವ ಪಂಜಾಬ್‌, ಹರಾರ‍ಯಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಚಳವಳಿಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಸ್‌ಎಫ್‌)ಯ ಹೆಚ್ಚುವರಿ 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಆರ್‌ಪಿಎಸ್‌ಎಫ್‌ ಪ್ರಧಾನ ನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಈ ವಿವಾದಾತ್ಮಕ ಕಾಯ್ದೆಗಳ ವಾಪಸಾತಿಗೆ ಕೇಂದ್ರ ಸರ್ಕಾರ ಅಕ್ಟೋಬರ್‌ 2ವರೆಗೆ ಗಡುವು ನೀಡಿವೆ. ಆದರೆ ಈ ಕಾಯ್ದೆಗಳ ವಿರುದ್ಧ ಪಂಜಾಬ್‌, ಹರಾರ‍ಯಣ ಮತ್ತು ಉತ್ತರ ಪ್ರದೇಶಗಳಲ್ಲಿ ಮಹಾಪಂಚಾಯತ್‌ಗಳು ನಡೆಯುತ್ತಿವೆ. ಇದರ ಭಾಗವಾಗಿ ಗುರುವಾರ ದೇಶಾದ್ಯಂತ ನಾಲ್ಕು ಗಂಟೆಗಳ ಕಾಲ ರೈಲು ರೋಕೋ ಚಳವಳಿ ನಡೆಯಲಿದೆ.

Video Top Stories