Asianet Suvarna News Asianet Suvarna News

Kodagu: ದೇವಾಲಯದಲ್ಲಿ ಜಿಂಕೆ ಕೊಂಬು ಹಿಡಿದು ಭಕ್ತಾದಿಗಳ ನೃತ್ಯ, ಏನಿದು ಆಚರಣೆ.?

- ದೇವಾಲಯದಲ್ಲಿ ಜಿಂಕೆ ಕೊಂಬು ಹಿಡಿದು ಭಕ್ತಾದಿಗಳ ನೃತ್ಯ

- ಚೇರಳ ಗ್ರಾಮದ ಭಗವತಿ ದೇವಾಲಯದಲ್ಲಿನ  ಹಬ್ಬದ ದೃಶ್ಯ

- ಪುರಾತನ ಕಾಲದಲ್ಲಿಯೇ ಸಂಗ್ರಹ ಮಾಡಿಟ್ಟಿರುವ ಕೊಂಬುಗಳು

- ದೇವಾಲಯದಲ್ಲಿ  ಸುಮಾರು 150 ಕ್ಕೂ ಹೆಚ್ಚು ಜಿಂಕೆ ಕೊಂಬುಗಳು

First Published Mar 18, 2022, 10:53 AM IST | Last Updated Mar 18, 2022, 10:53 AM IST

ಕೊಡಗು (ಮಾ. 18): ದೇವಾಲಯಕ್ಕೆ ಮೆರಗು ತರುವ ನೂರಾರು ಜಿಂಕೆ ಕೊಂಬುಗಳು, ಗ್ರಾಮದ ಮಧ್ಯೆ ಇರುವ ಪುಟ್ಟ ದೇವಾಸ್ಥಾನ. ದೇವಾಲಯದ ಸುತ್ತಲೂ ಜಿಂಕೆಯ ಕೊಂಬನ್ನು ಹಿಡಿದು ನೃತ್ಯ ಮಾಡುತ್ತಿರುವ ಗ್ರಾಮಸ್ಥರು. ವಿಭಿನ್ನ ಆಚರಣೆಯನ್ನು  ನೋಡಲು ನೆರೆದಿರುವ  ಭಕ್ತಾಧಿಗಳು. ಇದೇನಪ್ಪಾ ಇಷ್ಟೊಂದು ಜಿಂಕೆ ಕೊಂಬನ್ನು ಹಿಡಿದು ಡಾನ್ಸ್ ಮಾಡುತ್ತಿದ್ದಾರೆಂದು ಆಶ್ಚರ್ಯ ಆಗುತ್ತಿದೆಯಲ್ಲಾ!  ಅಚ್ಚರಿಯಾದರೂ ಇದು ಸತ್ಯ..!

ಇದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಸಮೀಪದ ಚೇರಳ ಗ್ರಾಮದ ಭಗವತಿ ದೇವಾಲಯದಲ್ಲಿನ  ಹಬ್ಬದ ದೃಶ್ಯ. ಈ ವಿಶಿಷ್ಟ ಉತ್ಸವಕ್ಕೆ ಸುಮಾರು 350 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಜಿಂಕೆಯ ಕೊಂಬನ್ನು ಹಿಡಿದು ಮಾಡುವ ನೃತ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗಾದರೆ ಈ ದೇವಾಲಯಕ್ಕೆ ಇಷ್ಟೊಂದು ಜಿಂಕೆಯ ಕೊಂಬುಗಳು ಹೇಗೆ ಬಂತು ಎಂಬ ಪ್ರಶ್ನೆ ಏಳುವುದು ಸಹಜ. ಇವುಗಳೆಲ್ಲಾ ಪುರಾತನ ಕಾಲದಲ್ಲಿಯೇ ದೇವಾಲಯಗಳಲ್ಲಿ ಸಂಗ್ರಹ ಮಾಡಿಟ್ಟಿರುವ ಕೊಂಬುಗಳು. ಈಗ ಬೇಟೆಯಾಡುವುದು ನಿಷಿದ್ದವಾದರಿಂದ ಯಾವುದೇ ಹೊಸ ಕೊಂಬುಗಳು ಇಲ್ಲಿ ಬಳಕೆಯಾಗುತ್ತಿಲ್ಲ.ಕೊಡಗು ಜಿಲ್ಲೆಯ ಕೆಲವೇ ಕೆಲವು ದೇವಾಲಯಗಳಲ್ಲಿ ಇಂತಹ ವಿಶೇಷವಾದ ಆಚರಣೆಗಳನ್ನು ನೋಡಬಹುದಾಗಿದೆ.

ಹಿಂದಿನ ಕಾಲದಲ್ಲಿ ಈ ಗ್ರಾಮದ ಸುತ್ತಮುತ್ತಲೂ ಯಥೇಚ್ಚವಾಗಿ ಜಿಂಕೆಗಳು ಕಾಣಿಸಿಕೊಳ್ಳುತ್ತಿದ್ದವು. ಅವುಗಳನ್ನು ಬೇಟೆಯಾಡಿದ ನಂತರ ಕೊಂಬುಗಳನ್ನು ಗ್ರಾಮದ ದೇವರಿಗೆ ಒಪ್ಪಿಸಲಾಗುತ್ತಿತ್ತು. ತಪ್ಪು ಮಾಡಿದರೆ ಕ್ಷಮಿಸಿ ಎಂದು  ಈ ರೀತಿ ನೃತ್ಯ ಮಾಡುವ ಮೂಲಕ ದೇವರನ್ನು ಸಂತೃಪ್ತಿಗೊಳಿಸಲಾಗುತ್ತದೆ. ಇದರಲ್ಲಿ ಸುಮಾರು 18 ಬಗೆ ಬಗೆಯ ನೃತ್ಯಗಳಿವೆ. ಪುರಾತನ ಕಾಲದಿಂದಲೂ ಈ ಆಚರಣೆಯನ್ನು ಗ್ರಾಮದ ಜನತೆ ಒಂದಾಗಿ ಚಾಚುತಪ್ಪದೆ ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ಸುಮಾರು 150 ಕ್ಕೂ ಹೆಚ್ಚು ಜಿಂಕೆ ಕೊಂಬುಗಳು ಇಲ್ಲಿದೆ. ಇನ್ನೂ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವಕ್ಕೆ ಆಗಮಿಸುತ್ತಾರೆ.

ಏನೇ ಆದರೂ ಕೊಡಗು ಜಿಲ್ಲೆಯ ಹಲವು ದೇವಾಲಯಗಳಲ್ಲಿ ಇಂತಹ ವಿಭಿನ್ನ  ಆಚರಣೆಗಳನ್ನು  ಇಂದಿಗೂ ಉಳಿಸಿಕೊಂಡು  ಬರಲಾಗಿದೆ.ವೃದ್ದರಿಂದ ಹಿಡಿದು ಪುಟ್ಟ ಮಕ್ಕಳು ಕೂಡ ಈ ಆಚರಣೆಯಲ್ಲಿ ಭಾಗಿಯಾಗುತ್ತಿರುವುದು ವಿಶೇಷ