ವಿಐಪಿ ಪಾಸ್ ಹೆಸರಲ್ಲಿ ತಿಮ್ಮಪ್ಪನ ಭಕ್ತರಿಗೆ ನಾಮ ಹಾಕುತ್ತಿದ್ದ ಖದೀಮನ ಬಂಧನ
ಗೃಹ ಸಚಿವ ಪರಮೇಶ್ವರ್ ಹೆಸರಲ್ಲಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಂಚಕನು ನಕಲಿ ಲೆಟರ್‌ಹೆಡ್ ಬಳಸಿ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದ.
ಗೃಹ ಸಚಿವ ಪರಮೇಶ್ವರ್ ಹೆಸರಲ್ಲಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಪಾಸ್ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಮೂಲದ ಮಾರುತಿ ಬಂಧೀತ ವ್ಯಕ್ತಿ. ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್ ಆಗಿರೋ ಮಾರುತಿ ಸಚಿವ ಜಿ. ಪರಮೇಶ್ವರ್ ಅವರ ನಕಲಿ ಲೆಟರ್‌ಹೆಡ್ ಬಳಸಿ ತಿಮ್ಮಪ್ಪನ ಭಕ್ತರಿಗೆ ನಾಮ ಹಾಕಲು ಯತ್ನಿಸಿದ್ದಾನೆ. ಭಕ್ತಾಧಿಗಳಿಂದ 6 ಸಾವಿರದಿಂದ 10 ಸಾವಿರದವರೆಗೆ ಹಣ ವಸೂಲಿ ಮಾಡಿದ್ದಲ್ಲದೇ ಆಂಧ್ರ ಸಿಎಂ ಕಚೇರಿಗೆ ನಕಲಿ ಲೆಟರ್ ಹೆಡ್, ಪರಮೇಶ್ವರ್ ಹೆಸರಲ್ಲಿ ಕಾಲ್ ಮಾಡಿದ್ದಾನೆ. ತಿಮ್ಮಪ್ಪನ ದರ್ಶನಕ್ಕೆ ಅನುವು ಮಾಡದಿದ್ದರೆ ಅಮಾನತು ಮಾಡಿಸ್ತೇನೆಂದು ಬೆದರಿಕೆ ಹಾಕಿದ್ದಾನೆ. ನಕಲಿ ಲೆಟರ್ ಬಗ್ಗೆ ಪರಮೇಶ್ವರ್ ಕಚೇರಿಯಲ್ಲಿ ಮರು ಪರಿಶೀಲನೆ ನಡೆಸಿದ ನಂತರ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ತುಮಕೂರು ನಗರ ಠಾಣೆಗೆ ದೂರು ನೀಡಿದ್ದರು. ನಾಗಣ್ಣ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಲಹಂಕ ನ್ಯೂಟೌನ್ ಬಳಿಯಿದ್ದ ಆರೋಪಿ ಮಾರುತಿಯನ್ನು ಬಂಧಿಸಿದ್ದಾರೆ.