ರೋಹಿತ್, ಕೊಹ್ಲಿ ಪಾಲಾದ ICC ಪ್ರತಿಷ್ಠಿತ ಪ್ರಶಸ್ತಿಗಳು

ರೋಹಿತ್, ಕೊಹ್ಲಿ ಪಾಲಾದ ICC ಪ್ರತಿಷ್ಠಿತ ಪ್ರಶಸ್ತಿಗಳು

ದುಬೈ(ಜ.15): 2019ನೇ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ಜಯಿಸಿದರೆ, ರೋಹಿತ್ ಶರ್ಮಾ ವರ್ಷದ ಏಕದಿನ ಬ್ಯಾಟ್ಸ್‌ಮನ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. 

ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ ಐಸಿಸಿ ವರ್ಷದ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತಂಡವನ್ನು ರೋಚಕವಾಗಿ ಸ್ಟೋಕ್ಸ್ ಗೆಲ್ಲಿಸಿಕೊಟ್ಟಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಆಷಸ್ ಸರಣಿಯಲ್ಲೂ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲ್ಲಿಸಿದ್ದರು. ಹೀಗಾಗಿ ಸ್ಟೋಕ್ಸ್ ಐಸಿಸಿ ವರ್ಷದ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.  

ಟಿ20 ವಿಶ್ವಕಪ್ ಟೂರ್ನಿಗೆ 20 ತಂಡಗಳಿಗೆ ಅವಕಾಶ..?

ವಿಶ್ವ ಟೆಸ್ಟ್ ನಂ.1 ಬೌಲರ್ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ವರ್ಷದ ಟೆಸ್ಟ್ ಆಟಗಾರ ಎನ್ನುವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ರನ್ ಮಷೀನ್ ಎಂದೇ ಕರೆಸಿಕೊಳ್ಳುತ್ತಿರುವ ಮಾರ್ನಸ್ ಲಬುಶೇನ್ ಐಸಿಸಿ ವರ್ಷದ ಉದಯೋನ್ಮುಕ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನುಳಿದಂತೆ ಕನ್ನಡಿಗ ಮಯಾಂಕ್ ಅಗರ್‌ವಾಲ್ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಸಿಸಿ ಟೆಸ್ಟ್ ತಂಡದಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದು, ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಇನ್ನು ಈ ತಂಡದಲ್ಲಿರುವ ಮತ್ತೊಬ್ಬ ಭಾರತೀಯ ಆಟಗಾರನೆಂದರೆ ಅದು ಕನ್ನಡಿಗ ಮಯಾಂಕ್ ಅಗರ್‌ವಾಲ್.

ಇನ್ನು ಐಸಿಸಿ ಏಕದಿನ ತಂಡದಲ್ಲಿ ನಾಲ್ವರು ಸ್ಥಾನ ಪಡೆದಿದ್ದು, ಏಕದಿನ ತಂಡಕ್ಕೂ ಕೊಹ್ಲಿಯೇ ನಾಯಕರಾಗಿದ್ದಾರೆ. ಇನ್ನುಳಿದಂತೆ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಭಾರತೀಯ ಕ್ರಿಕೆಟಿಗರೆನಿಸಿದ್ದಾರೆ.  ಆದರೆ ಏಕದಿನ ತಂಡದಲ್ಲಿ ಜಸ್ಪ್ರೀತ್ ಬುಮ್ರಾಗೆ ಅವಕಾಶ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.

2019ರ ಐಸಿಸಿ ವಿಶ್ವಕಪ್‌ನ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರು ಸ್ಟೀವ್ ಸ್ಮಿತ್ ಅವರನ್ನು ಬಾಲ್ ಟ್ಯಾಂಪರಿಂಗ್ ವಿಚಾರದಲ್ಲಿ ಕೆಣಕ್ಕಿದನ್ನು ಮೈದಾನದಲ್ಲಿದ್ದ ವಿರಾಟ್ ಖಂಡಿಸಿದ್ದರು. ಮಾತ್ರವಲ್ಲ ಅವರೆಲ್ಲರಿಗೂ ಸ್ಮಿತ್‌ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಲು ಮನವಿ ಮಾಡಿದ್ದರು. ಇದು ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಹೃದಯಗೆದ್ದಿತ್ತು.

ರೋಹಿತ್ ಶರ್ಮಾ:  2019ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ 5 ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಇನ್ನು ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೂ ಹಿಟ್‌ಮ್ಯಾನ್ ಭಾಜನರಾಗಿದ್ದರು. 2019ರಲ್ಲೇ ರೋಹಿತ್ 7 ಏಕದಿನ ಶತಕ ಬಾರಿಸಿದ್ದರು.

READ SOURCE