ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ನಿಮಗೆ ಗೊತ್ತು ತಾನೆ. ಬಾಲಿವುಡ್‌ ಶೆಹನ್‌ಶಾ ಅಮಿತಾಭ್‌ ಬಚ್ಚನ್‌ ನಡೆಸಿಕೊಡುತ್ತಿದ್ದ ಈ ಶೋ ತುಂಬಾ ಪಾಪ್ಯುಲರ್ ಆಗಿತ್ತು. ಈಗಲೂ ಬಚ್ಚನ್‌ ಅವರೇ ಅದನ್ನು ನಡೆಸಿಕೊಡುತ್ತಾರೆ ಹಾಗೂ ಶೋಗೆ 20 ವರ್ಷ ತುಂಬಿದೆ. 2000ನೇ ಇಸವಿಯಲ್ಲಿ ಆರಂಭವಾದ ಕೆಬಿಸಿಗೆ ಈ ವರ್ಷ ನಡೆಯುತ್ತಿರೋದು 20ನೇ ವರ್ಷ. ಇದರಲ್ಲಿ ಕೊನೇ ರೌಂಡ್‌ವರೆಗೂ ಹೋಗಿ ಒಂದು ಕೋಟಿ ರೂಪಾಯಿ ಗೆದ್ದವರು ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ಕೆಬಿಸಿಯ ಮೊದಲ ಸೀಸನ್‌ನಲ್ಲಿ ಮೊದಲ ಬಾರಿಗೆ ಕೋಟಿ ರೂಪಾಯಿ ಗೆದ್ದ ವ್ಯಕ್ತಿಯ ಕತೆ ಸ್ವಾರಸ್ಯಕರವಾಗಿದೆ.

ಅಂದಹಾಗೆ ಇವರ ಹೆಸರು ಹರ್ಷವರ್ಧನ ನವತೆ. ಮುಂಬಯಿಯವರು. ಇತ್ತೀಚಿನವರೆಗೂ ಮಹೀಂದ್ರ ಕಂಪನಿಯ ಗ್ರೂಪ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಹುದ್ದೆಯಲ್ಲಿ ಇದ್ದರು. ಈಗ ಅದನ್ನು ತೊರೆದು ಹೊಸ ಅವಕಾಶಗಳನ್ನು ಸೃಷ್ಟಿಸಲು ಹೊರಟಿದ್ದಾರೆ. ಮುದ್ದಾದ ಹೆಂಡತಿ ಹಾಗೂ ಮಕ್ಕಳು ಇದ್ದಾರೆ. ಅವರಿಗೀಗ 47 ವರ್ಷ. ಕರೋಡ್‌ಪತಿ ಸ್ಪರ್ಧೆಯಲ್ಲಿ ಗೆದ್ದ ನಂತರ ಅವರಿಗೆ ಹಲವು ವಿಚಿತ್ರ ಅನುಭವಗಳು ಆಗಿವೆ.

KBCಯಲ್ಲಿ 50 ಲಕ್ಷ ಗೆದ್ದ ಕರ್ನಾಟಕದ ವಿದ್ಯಾರ್ಥಿ ...

ಉಳಿದವರ್ಯಾರಾದರೂ ಆಗಿದ್ದರೆ ಒಂದು ಕೋಟಿ ರೂ., ಅದರಲ್ಲೂ 2000ನೇ ಇಸವಿಯಲ್ಲಿ ಗೆದ್ದರೆ, ಇದು ತನ್ನ ಒಂದು ಜನ್ಮಕ್ಕೆ ಸಾಕು ಅಂದುಕೊಂಡು ಒಂದು ಅಪಾರ್ಟ್‌ಮೆಂಟ್‌ ತಗೊಂಡು ಜಾಲಿಯಾಗಿ ಕಳೆದುಬಿಡುತ್ತಿದ್ದರೇನೋ. ಹಾಗೆ ಮಾಡಿದವರೂ ಇದ್ದಾರೆ. ರಿಯಾಲ್ಟಿಯಲ್ಲಿ ಇದ್ದಕ್ಕಿದ್ದಂತೆ ಹಣ ಬಂದವರು ಜಾಲಿಯಾಗಿ ಅದನ್ನು ಕಳೆದು ವೇಸ್ಟ್‌ ಬಾಡಿಗಳಾಗಿ ಹೋಗಿದ್ದಾರೆ. ಹರ್ಷವರ್ಧನ್‌ ಹಾಗೆ ಮಾಡಲಿಲ್ಲ. ತನಗೆ ದೊರೆತ ಹಣವನ್ನು ಎಚ್ಚರಿಕೆಯಿಂದ ವಿನಿಯೋಗಿಸಿದರು. ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟರು. ಹೆಚ್ಚಿನ ಕಲಿಕೆಗಾಗಿ ಇಂಗ್ಲೆಂಡ್‌ಗೆ ಹೋದರು. ಆದರೆ ಅವರು ಭಾರತದಲ್ಲಿ ಇದ್ದಷ್ಟು ಕಾಲವೂ ಜನತೆಯ ಕಣ್ಣು ಅವರನ್ನು ಹಿಂಬಾಲಿಸುತ್ತಿತ್ತು.

ಎಲ್ಲಿಯೇ ಹೋಗಲಿ, ತಮ್ಮ ವಿಸಿಟಿಂಗ್ ಕಾರ್ಡ್ ನೀಡಿದಾಗ, ಅವರ ಹೆಸರನ್ನು ಜನ ನೋಡಿದಾಗ, ಅವರು ಪ್ರತಿಕ್ರಿಯಿಸುತ್ತಿದ್ದ ರೀತಿ ವಿಶಿಷ್ಟವಾಗಿರುತ್ತಿತ್ತು. ಅವರ ದೃಷ್ಟಿಯಲ್ಲಿ ಒಂದು ಬಗೆಯ ಮೆಚ್ಚುಗೆ, ಅಸೂಯೆ ಕೂಡ ಇರುತ್ತಿತ್ತು. ಹರ್ಷವರ್ಧನ್‌ ಮೊದಲು ನಾಗರಿಕ ಸೇವಾ ಪರೀಕ್ಷೆ ಕಟ್ಟಬೇಕು ಎಂದುಕೊಂಡಿದ್ದರು. ಆದರೆ ಕೆಬಿಸಿ ನಂತರ ಅವರ ಚಟುವಟಿಕೆ ಹೆಚ್ಚಿದ್ದರಿಂದ ಅದನ್ನು ಮಾಡಲಾಗಲಿಲ್ಲ. ಅದಕ್ಕೆ ಬದಲು ಅವರು ಎಂಬಿಎ ಮಾಡಲು ಬಯಸಿದರು. ಇದಕ್ಕಾಗಿ ಇಂಗ್ಲೆಂಡ್‌ಗೆ ಹೋಗಬೇಕಾಯಿತು. ಅದಕ್ಕಾಗಿ ದೊಡ್ಡ ಪ್ರಮಾಣದ ಲೋನ್‌ ಮಾಡಬೇಕಿತ್ತು. ಆದರೆ ಕೆಬಿಸಿ ಹಣ ಬಂದುದರಿಂದ ಲೋನ್‌ ಮಾಡುವುದು ತಪ್ಪಿತು.

ಪ್ರೇಮಿಗಳಿಲ್ಲಿ ಕೇಳಿ, ಅಮಿತಾಭ್ ಕೊಟ್ರು ಲವ್ ಅಡ್ವೈಸ್ ...

ಹರ್ಷವರ್ಧನ್‌ಗೆ ಕೆಬಿಸಿ ಹಣ ಗೆದ್ದ ನಂತರ ಅವರಿಗೆ ಫ್ಯಾನ್‌ಗಳೂ ಹುಟ್ಟಿಕೊಂಡರು. ಬಹುಶಃ ಮತ್ಸರಿಗಳೂ, ಶತ್ರುಗಳೂ ಹುಟ್ಟಿಕೊಂಡಿರಬಹುದು. ಅವರು ಎಲ್ಲೇ ಹೋದರೂ ಜನ ಮುತ್ತಿಕೊಳ್ಳುತ್ತಿದ್ದರು. ತಳ್ಳಾಡುತ್ತಿದ್ದರು, ಮುಟ್ಟಲು ಬಯಸುತ್ತಿದ್ದರು. ಹೀಗೇ ಮುಂಬಯಿಯಲ್ಲಿ ಒಂದು ಕಡೆ ಅವರು ಹೋದಾಗ, ಜನರ ಗಮನ ಇವರತ್ತ ಹರಿಯಿತು. ಕ್ಷಣಾರ್ಧದಲ್ಲಿ ಅವರ ಸುತ್ತ ಜನ ಸೇರಿತು. ಅವರಿಂದ ಬಿಡಿಸಿಕೊಳ್ಳಲು ಹರ್ಷವರ್ಧನ್‌ ಕೊಸರಾಡಿದರು, ಗುಂಪಿನಿಂದ ಈಚೆ ಬಂದು ಗಮನಿಸಿದಾಗ ಅವರ ಕೈ ನರಗಳು ಕೊಯ್ದುಹೋಗಿದ್ದವು. ನೆತ್ತರು ಸುರಿಯುತ್ತಿತ್ತು. ಯಾರೋ ಹರಿತವಾದ ಬ್ಲೇಡಿನಿಂದ ಅವರ ಕೈಯನ್ನು ಕೊಯ್ದಿದ್ದರು. ಹರ್ಷ ಈ ಕುರಿತು ದೂರು ನೀಡಲಿಲ್ಲ. ಆದರೆ  ಬಳಿಕ ಎಚ್ಚರವಾಗಿದ್ದರು. ಹೆಚ್ಚು ಜನ ಸೇರುವಲ್ಲಿ ಅವರು ಹೋಗಲಿಲ್ಲ. 

ಹಾಗೇ ಇಂಗ್ಲೆಂಡ್‌ನಲ್ಲಿ ಎಂಬಿಎ ಮಾಡಿ ಬಂದ ಬಳಿಕ ಅವರು ಕಂಪನಿಗಳಿಗೆ ಇಂಟರ್‌ವ್ಯೂಗಳಿಗೆ ಹೋದರು. ಹಾಗೆ ಹೋದಾಗ ಅವರಿಗೆ ಆಗುತ್ತಿದ್ದ ಅನುಭವಗಳು ವಿಚಿತ್ರವಾಗಿರುತ್ತಿದ್ದವು. ಹೆಚ್ಚಾಗಿ ಅವರನ್ನು ಇಂಟರ್‌ವ್ಯೂ ಮಾಡುವವರು , ನೀವ್ಯಾಕೆ ಇಂಟರ್‌ವ್ಯೂಗೆ ಬಂದಿದ್ದೀರಿ ಎಂಬ ಧಾಟಿಯಲ್ಲಿ ಮಾತಾಡಿಸುತ್ತಿದ್ದರು. ಕೆಲವೊಬ್ಬರು ಅರೆ ಯಾರ್‌, ಒಂದು ಕೋಟಿ ಹಣ ಇಟ್ಟುಕೊಂಡು ಇಲ್ಯಾಕೆ ಜಾಬ್ ಮಾಡೋಕೆ ಬಂದಿದೀಯ. ಹೋಗು ಮಾಲ್ದೀವ್ಸ್‌ ಬೀಚಲ್ಲಿ ಮಜಾ ಮಾಡು ಎಂದುಬಿಟ್ಟಿದ್ದರಂತೆ. ಇಂಥ ಮಾತುಗಳನ್ನು ಹರ್ಷ ಬಹಳ ಕೇಳಿದ್ದಾರೆ. ಹಾಗಂತ ಒಳ್ಳೆಯ ಅನುಭವಗಳೂ ಆಗಿದ್ದು ಉಂಟು ಹರ್ಷವರ್ಧನ್‌ಗೆ.

#KBCಯಲ್ಲಿ 5 ಕೋಟಿ ರೂ. ಗೆದ್ದವನೀಗ ಜೀವನಕ್ಕಾಗಿ ದನ ಸಾಕಿದ್ದಾನೆ! ...

ಕೆಬಿಸಿಯಲ್ಲಿ ಅಮಿತಾಭ್‌ ಬಚ್ಚನ್‌ ನಡೆದುಕೊಂಡು ರೀತಿಯನ್ನಂತೂ ಹರ್ಷ ತುಂಬಾ ಪ್ರೀತಿಯಿಂದ ನೆನೆದುಕೊಳ್ಳುತ್ತಾರೆ. ಅವರ ಸಮ್ಮುಖದಲಿ ಒಂದಿಷ್ಟೂ ಮುಜುಗರ, ಅಂಜಿಕೆ ಆಗದಂತೆ ಬಚ್ಚನ್‌ ನಡೆದುಕೊಳ್ಳುತ್ತಿದ್ದರಂತೆ. ಒಂದು ಕೋಟಿ ರೂಪಾಯಿಯ ಕೊನೆ ಪ್ರಶ್ನೆಯನ್ನು ಹರ್ಷ ಉತ್ತರಿಸಿದಾಗ, ಆ ಕ್ಷಣ ಬಚ್ಚನ್‌ ಬ್ರೇಕ್‌ ಕೊಟ್ಟಿದ್ದರು. ಮೂವತ್ತು ಸೆಕೆಂಡ್‌ಗಳ ಆ ಬ್ರೇಕ್‌ನಲ್ಲಿ, ತಮ್ಮ ಪರ್ಸನಲ್‌ ಮೇಕಪ್‌ ಮ್ಯಾನ್‌ನನ್ನ ಕರೆದು, ಹರ್ಷನ ಮುಖಕ್ಕೆ ಒಂದು ಟಚ‌ಪ್ ಮಾಡುವಂತೆ ಹೇಳಿದ್ದರಂತೆ. ಹರ್ಷನಿಗೆ ಆ ಕ್ಷಣವೇ, ತಾನು ಗೆದ್ದಿದ್ದೆನೆ ಎಂದು ಗೊತ್ತಾಗಿತ್ತಂತೆ!