ದೂರದಿಂದಲೇ ಜೀವ ಹಿಂಡುತಿದೆ ರೀಲ್ಸೂ ರಿಯಲ್ಸೂ: ದೂರಾಗುವುದೇ ಧಾರಾವಾಹಿ?
ಕಾಲ ಬದಲಾಗಿರಬಹುದು. ಗೋಡೆ ಮೇಲಿನ ಟಿವಿ ಅಂಗೈ ಫೋನಿಗೆ ಬಂದಿರಬಹುದು. ಬೇಕಾದಾಗ ಬೇಕೆಂದಲ್ಲಿ ಧಾರಾವಾಹಿ ನೋಡುವ ಸೌಕರ್ಯ ಒದಗಿರಬಹುದು. ಓಟಿಟಿ, ರೀಲ್ಸ್- ಹೀಗೆ ನೋಡುವುದಕ್ಕೆ ಸಾವಿರಾರು ಮನರಂಜನೆಯ ಆಪ್ಶನ್ ಗಳು ಹುಟ್ಟಿಕೊಂಡಿರಬಹುದು. ಆದರೆ ಧಾರಾವಾಹಿ ಧಾರಾವಾಹಿಯೇ. ವರ್ಷಗಟ್ಟಲೆ ನಡೆಯುತ್ತಿರುವ ಧಾರಾವಾಹಿಯ ಕತೆಗೂ ನಾಳೆಗೇನಾಗುತ್ತದೆ ಅನ್ನುವ ಕುತೂಹಲಕ್ಕೆ ಕೊನೆ ಇಲ್ಲ.
ವಿಕಾಸ್ ನೇಗಿಲೋಣಿ
‘ಪಾಪ ಕಣ್ರೀ, ಅವ್ಳಿಗೆ ಆಕ್ಸಿಡೆಂಟಾಯ್ತಂತೆ, ನಂಗಂತೂ ಊಟ ಮಾಡೋಕ್ಕೂ ಮನ್ಸಾಗ್ಲಿಲ್ಲ’‘ಅಲ್ರೀ ಈ ವಯಸ್ಸಲ್ಲಿ ಮದ್ವೆ ಸರಿ, ಅವ್ಳು ಈ ವಯಸ್ಸಲ್ಲಿ ಮಕ್ಳು ಮಾಡ್ಕೋತಾಳಲ್ರೀ’
‘ಅಲ್ರೀ, ಈ ಕಾಲದಲ್ಲಿ ಯಾವ ಹೆಂಡ್ತಿ ತಾನೇ ಗಂಡನ ಮುಂದೆ ಅಷ್ಟೊಂದು ಬಗ್ತಾರೆ, ಸುಮ್ನೇ ತಲೆಬುಡ ಇಲ್ಲ’.
‘ಹೊಡೀಲಿ, ಬಡೀಲಿ, ತ್ರಾಸು ಕೊಡ್ಲಿ, ಏನೇ ಆದ್ರೂ ಗಂಡ ತಾನೇ?
‘ಪಾಪ, ಹೆಂಡ್ತಿ ಕಳ್ಕೊಂಡ, ಇನ್ನೊಂದು ಮದ್ವೆ ಆಗ್ಬೇಕು!’
‘ಗಂಡ ಹೋದ, ಆದ್ರೆ ಅವ್ಳು ಇನ್ನೊಂದು ಮದ್ವೆ ಮಾತ್ರಾ ಆಗ್ಬಾರ್ದು, ಬೇಕಿದ್ರೆ ಅವ್ಳು ಬೇರೆ ಏನಾದ್ರೂ ಸಾಧನೆ ಮಾಡ್ಲಿ’
‘ಬರೀ ಎಳೀತಾರೆ ಹೋಗ್ರೀ, ಒಂದು ವಾರ ಆಯ್ತು ನೋಡದೇ, ಇವತ್ತು ಏನಾಯ್ತು ಅಂತ ನೋಡ್ಬೇಕು…’
‘ಅಲ್ರೀ, ನಮ್ಮನೇಲಿ ಕರೆಂಟೇ ಇಲ್ಲ... ನಿನ್ನೆ ಕತೆ ಏನಾಯ್ತೋ ಏನೋ?
-ಮನೆ ಮನೆಗಳಲ್ಲೂ ಈ ಥರದ ದೃಶ್ಯಗಳು ನಿಲ್ಲುವುದಿಲ್ಲ. ಹೆಣ್ಮಕ್ಕಳು ಒಟ್ಟಿಗೆ ಸೇರಿದಾಗ ಮಾತಾಡೋ ವಸ್ತು ಧಾರಾವಾಹಿ. ಬೈದುಕೊಳ್ಳೋಕ್ಕೆ ಸಿಗೋರು, ಜಡ್ಜ್ ಮೆಂಟ್ ಪಾಸ್ ಮಾಡುವುದಕ್ಕೆ ಸಿಗೋರು ಧಾರಾವಾಹಿಯ ಪಾತ್ರಗಳೇ. ನಾವು ಹೇಗೆ ಯೋಚನೆ ಮಾಡುತ್ತೇವೆ, ನಾವು ಸಮಾಜವನ್ನು ಹೇಗೆ ನೋಡುತ್ತೇವೆ, ಯಾರನ್ ಹೇಗೆ ಜಡ್ಜ್ ಮಾಡುತ್ತೇವೆ ಅಂತ ಅಳತೆ ಮಾಡುವುದಕ್ಕೆ ಸಿಗುವ ಮಾನದಂಡವೂ ಧಾರಾವಾಹಿಯೇ. ಪ್ರಪಂಚ ಬೇರೆ, ಧಾರಾವಾಹಿ ಪ್ರಪಂಚನೇ ಬೇರೆ ಅಂತ ಕಾಮೆಂಟು ಮಾಡುವವರಿಗೂ ಧಾರಾವಾಹಿಯೇ ಪ್ರಪಂಚ. ಪ್ರತಿನಿತ್ಯ ಆ ಕತೆ ಒಂದು ಏನಾಯ್ತೋ ಅಂತ ಧಾವಂತ; ಮತ್ತೇನಾಗತ್ತೆ, ಅಲ್ಲೇ ನಿಂತಿರತ್ತೆ ಅಂತ ವೇದಾಂತ. ಇದು ಒಂಥರ ಟಿವಿ ಧಾರಾವಾಹಿಗಳ ಜೊತೆ ಪ್ರೇಕ್ಷಕರದ್ದು ಲವ್ ಆಂಡ್ ಹೇಟ್ ರಿಲೇಶನ್ನು. ಇದಕ್ಕಿಲ್ಲ ರಿಸೆಶನ್ನು.
ರಾಜಮೌಳಿಯ ಈ ದೊಡ್ಡ ಸಿನಿಮಾವನ್ನ ಮಿಸ್ ಮಾಡ್ಕೊಂಡ್ರು ನಟ ಸೂರ್ಯ: ಅದೃಷ್ಟ ಒಲಿದಿದ್ದು ರಾಮ್ ಚರಣ್‌ಗೆ!
ದೃಶ್ಯ- 1: ಟಿವಿಯಲ್ಲಿ ಬರುತ್ತಿರುವ ಧಾರಾವಾಹಿಯೊದನ್ನು ನೋಡಿ, ಕೆಟ್ಟ ಪಾತ್ರಕ್ಕೆ ಹಿಡಿ ಶಾಪ ಹಾಕುತ್ತಿರುವ ಇಳಿ ವಯಸ್ಸಿನ ಹೆಂಗಸು.
ದೃಶ್ಯ-2: ದೇವಸ್ಥಾನಕ್ಕೆ ದರ್ಶನಕ್ಕೆಂದು ತೆರಳಿದ್ದ, ಜನಪ್ರಿಯ ಧಾರಾವಾಹಿಯೊಂದರ ಕೆಟ್ಟ ಪಾತ್ರದ ಪಾತ್ರಧಾರಿಯನ್ನು ಹಿಡಿದು ಕಪಾಳಕ್ಕೆ ಬಾರಿಸಿದ ಹೆಂಗಸು.
ದೃಶ್ಯ-3: ಊಟ ಬಡಿಸುತ್ತಿದ್ದ ಸೊಸೆಗೆ, ‘ಅಲ್ವೇ ಆ ಧಾರಾವಾಹಿಯಲ್ಲಿ ಅತ್ತೆಗೆ ವಿಷ ಹಾಕಿದ್ಳು ಸೊಸೆ, ನೀನು ನಂಗೆ ಈ ಊಟದಲ್ಲಿ ಏನೂ ಬೆರೆಸಿಲ್ಲ ತಾನೇ’ ಅಂತ ಕೇಳಿದ ಅತ್ತೆ!
ಧಾರಾವಾಹಿ ಹೀಗೇ. ಅದೊಂದು ಹ್ಯಾಬಿಟ್ಟು, ಅದೊಂದು ಜೀವನಕ್ರಮ, ಊಟದ ಮನೆಯಲ್ಲಿ ಬದುಕಿನ ಸಂಗಾತಿ, ಪ್ರತಿ ಪಾತ್ರಗಳ ಜೊತೆಗೂ ಬೇರೆಯದೇ ತೆರನಾದ ಸಂಬಂಧ, ಅನುಬಂಧ. ವರ್ಷಗಟ್ಟಲೆ ಒಂದು ಕತೆ, ಪಾತ್ರದ ಜೊತೆ ಭಾವನಾತ್ಮಕ ಒಡನಾಟ, ದಿನಗಟ್ಟಲೆ ಆ ವಿಷಯವಾಗೇ ತಿಕ್ಕಾಟ, ತಮ್ಮಿಷ್ಟದ ಪಾತ್ರ ನಕ್ಕರೆ ಉಕ್ಕೋ ಅಕ್ಕರೆ, ಪಾತ್ರ ಅತ್ತರೆ ನಿರ್ದೇಶಕ, ಬರಹಗಾರರಿಗೆ ಹಿಡಿ ಶಾಪದ ಹಾಲು ಸಕ್ಕರೆ. ಒಟ್ಟಿನಲ್ಲಿ ನಮಗೂ ನಿಮಗೂ ಅಂಟಿದ ನಂಟಿನ ಕೊನೆ ಯಾರಿಗೂ ಗೊತ್ತಿಲ್ಲ. ಒಂದು ಧಾರಾವಾಹಿ ನಿಂತುಹೋದಮೇಲೆ ಸ್ವಲ್ಪ ಬೇಸರದ ವಿರಾಮ, ಆಮೇಲೆ ಮತ್ತೊಂದು ಧಾರಾವಾಹಿ ಕಡೆ ಗರುಡಗಮನ.
ಈಗಲೂ ಪ್ರೀತಿ ಮತ್ತು ದ್ವೇಷ- ಇವೆರಡನ್ನೂ ಏಕಕಾಲಕ್ಕೆ ಪಡೆದುಕೊಳ್ಳುತ್ತಿರುವ ಮಾಧ್ಯಮ, ಧಾರಾವಾಹಿ. ಕಾಲ ಬದಲಾಗಿರಬಹುದು, ಗೋಡೆ ಮೇಲಿನ ಟಿವಿ ಅಂಗೈ ಫೋನಿಗೆ ಬಂದಿರಬಹುದು, ಬೇಕಾದಾಗ ಬೇಕೆಂದಲ್ಲಿ ಧಾರಾವಾಹಿ ನೋಡುವ ಸೌಕರ್ಯ ಒದಗಿರಬಹುದು. ಆದರೂ ಧಾರಾವಾಹಿ ಧಾರಾವಾಹಿಯೇ. ತಂತಮ್ಮ ದೈನಂದಿನ ಬದುಕಿನ ಸಂತೋಷ, ಸಂಕಟಗಳಿಗೂ ಸ್ಪಂದಿಸದವರು ಧಾರಾವಾಹಿಯೊಳಗಣ ಸಂತೋಷ/ ದುಃಖಕ್ಕೆ ಸ್ಪಂದಿಸುವ ಉತ್ಕಟ ರೀತಿಗೆ ಸಾವಿಲ್ಲ.
ಇಷ್ಟಾಗಿಯೂ ಒಂದು ಪ್ರಮುಖ ಪ್ರಶ್ನೆ- ಇಂಥ ಧಾರಾವಾಹಿಗಳಿಗೂ ಸಾವು ಹತ್ತಿರವಾಯಿತೇ? ಸುಮಾರು ಮೂವತ್ತು ವರ್ಷಗಳ ಹಿಂದಷ್ಟೇ ಶುರುವಾದ ದೈನಂದಿನ ಧಾರಾವಾಹಿ ಎಂಬ ಹ್ಯಾಬಿಟ್ ಅಥವಾ ಅಭಿರುಚಿ ಇವತ್ತು ಒಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆಯೇ? ರೀಲ್ಸು, ಓಟಿಟಿ, ವೆಬ್ ಸೀರೀಸು, ಕಂಟೆಂಟು, ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ಸ್- ಇತ್ಯಾದಿ ಅರ್ಥವಾಗದ ಪ್ರಸ್ತುತ ಕಾಲಘಟ್ಟದಲ್ಲಿ ಧಾರಾವಾಹಿ ಅಪ್ರಸ್ತುತವಾಗುತ್ತಿದೆಯಾ? ಇನ್ನು ಐದು ಅಥವಾ ಹತ್ತು ವರ್ಷಗಳಲ್ಲಿ ಧಾರಾವಾಹಿಗಳ ಅವಸಾನವಾಗುತ್ತದಾ?
ಉತ್ತರ- ಹೌದು ಅಥವಾ ಇಲ್ಲ! ಮೊದಲಿಗೆ ‘ಹೌದು’ ಹೇಗೆ ಅಂತ ನೋಡೋಣ. ಹೌದು, ಕಿರುತೆರೆ ಪ್ರೇಕ್ಷಕರ ಸಂಖ್ಯೆ ದಿನೇದಿನೇ ಕುಸಿಯುತ್ತಿರುವುದಕ್ಕೆ ಸ್ಪಷ್ಟ ಅಂಕಿಅಂಶಗಳು ಸಿಕ್ಕಿವೆ ಕೂಡ. ಕಳೆದ ಒಂದು ದಶಕಗಳಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಆದ ಕುಸಿತಕ್ಕಿಂತ ಕಳೆದ ನಾಲ್ಕು ವರ್ಷಗಳಲ್ಲಿ ಆದ ಕುಸಿತ ತೀವ್ರ ಅಂತ ಒಂದು ವರದಿ ಹೇಳುತ್ತದೆ.
ಈ ಕುಸಿತಕ್ಕೆ ಕಾರಣವೇನು
ನಮ್ಮೊಳಗಿನ ಶತ್ರುಗಳು: ನಾವು ಪ್ರೇಕ್ಷಕರು ಈಗ ಒಂದು ದೊಡ್ಡ ಪರ್ವಕಾಲದಲ್ಲಿದ್ದೇವೆ. ನಾವು ಎಷ್ಟು ಕೊಟ್ಟರೂ ಸಾಲದೆನ್ನುವ ಮನರಂಜನೆಯ ಹಪಾಹಪಿಗೆ ಬಿದ್ದಿದ್ದೇವೆ. ಅದಕ್ಕೆ ಮಾರುಕಟ್ಟೆಯಲ್ಲಿ ಕಂಟೆಂಟು ಕನ್ಸಂಪ್ಶನ್, ವ್ಯೂವಿಂಗ್ ಹ್ಯಾಬಿಟ್ಟು, ಅಟೆನ್ಶನ್ ಸ್ಪ್ಯಾಮ್ ಎಂಬಿತ್ಯಾದಿ ಬೀಕರ ಪದಗಳಿವೆ. ನಮಗೆ ತುಂಬಾ ಮನರಂಜನೆ ಏನೋ ಬೇಕು, ಆದರೆ ಅದಕ್ಕೆ ಬೇಕಾದ ತಾಳ್ಮೆ ಇಲ್ಲ. ಹಾಗಾಗಿ ನಮ್ಮ ಅತಿಮನರಂಜನಾ ಹಸಿವಿಗೆ ಸಾಧಾರಣ ಕಂಟೆಂಟ್ ಗಳು ಏನೇನೂ ಸಾಲದು. ಜೊತೆಗೆ ಊಟ, ಕೆಲಸ, ನಿದ್ದೆ, ಶೌಚ ಇತ್ಯಾದಿ ವೈಯಕ್ತಿಕ ಸಮಯವನ್ನೂ ಮನರಂಜನೆಗೆ ಮೀಸಲಿಡುತ್ತಿದ್ದೇವೆ. ನೆಚ್ಚಿನ ಒಂದು ಶೋಗೋಸ್ಕರ ರಾತ್ರಿ ಹನ್ನೊಂದು ಕಾಲರವರೆಗೂ ನಾವು ಎದ್ದಿರಲು ಸಿದ್ಧ!
ಹೊರಗಿನ ಶತ್ರುಗಳು: ಇದಕ್ಕೆ ತಕ್ಕನಾಗಿ ಇವತ್ತು ಇಂಟರ್ನೆಟ್ ಭಾಗ್ಯದಿಂದಾಗಿ ನಿರಂತರವಾಗಿ ನಾವು ಫೋನ್ ಗೆ ಒಗ್ಗಿಕೊಳ್ಳುತ್ತಿದ್ದೇವೆ. ಅಲ್ಲಿ ನಮಗೆ ಹತ್ತರಿಂದ 60 ಸೆಂಕೆಂಡುಗಳಲ್ಲಿ (ಅದರ ಮಧ್ಯೆ ಮೂವತ್ತು ಎಲ್ಲರಿಗೂ ಅನುಕೂಲ) ಒಂದು ರೀಲ್ಸ್ ಬಂದು ಎಂಟರ್ ಟೈನ್ ಮಾಡುತ್ತಿದೆ. ದಿನದಲ್ಲಿ ಆರೇಳು ಗಂಟೆಯಷ್ಟು ನಮ್ಮ ವೈಯುಕ್ತಿಕ ಸಮಯವನ್ನು ಕೂಡ ನಾವು ರೀಲ್ಸ್ ನೋಡೋಕ್ಕೆ ಮೀಸಲಿಟ್ಟಿದ್ದೇವೆ. ಲಕ್ಷಾಂತರ ಖರ್ಚು ಮಾಡಿ ಶೂಟ್ ಮಾಡಿದ ನಾಲ್ಕು ನಿಮಿಷಗಳ ಒಂದು ಸೀನ್ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಲಾದ ಮೂವತ್ತು ಸೆಕೆಂಡುಗಳ ಒಂದು ರೀಲ್ಸ್ ಮಧ್ಯೆ ಇವತ್ತು ಸ್ಪರ್ಧೆ. ಅವನಿಗೆ ಇವತ್ತು ಮನರಂಜನೆಗೆ ಹಲವಾರು ದಾರಿಗಳು, ಅರ್ಥವಾಗದ ಭಾಷೆಯ ಒಂದು ಕ್ಲಿಪ್ ಕೂಡ ಇವತ್ತು ಅವನನ್ನು ಹಿಡಿದಿಟ್ಟುಕೊಳ್ಳಬಲ್ಲುದು. ಎಂಬಲ್ಲಿಗೆ ಇಡೀ ಜಗತ್ತೇ ಇವತ್ತು ಧಾರಾವಾಹಿಗೆ ಸ್ಪರ್ಧೆಯಾಗಿವೆ!
ವಿಚಿತ್ರ ಕಾಂಬಿನೇಶನ್ನು- ಧಾರಾವಾಹಿ: ನಮ್ಮ ಧಾರಾವಾಹಿ ಜಗತ್ತು ವಿಚಿತ್ರ ಕಲಸುಮೇಲೋಗರ. ಹೊರಗಿಂದ ನೋಡುವವರಿಗೆ ಇದೊಂದು ಭಯಂಕರ ರಿಗ್ರೆಸ್ಸಿವ್ ಥಾಟ್ ಇರುವ ಮಾಧ್ಯಮ. ಅಂದರೆ ಭಯಂಕರ ಸಂಪ್ರದಾಯಸ್ಥ ಮನಸ್ಥಿತಿಯ ಕತೆಗಳು. ತಾಳಿ ಶಾಶ್ವತ, ಗಂಡ ದೇವರು, ಅತ್ತೆಯ ಓಲೈಕೆ, ಒಳ್ಳೆ ಸೊಸೆ ಆಗುವ ಒತ್ತಡ, ಜಾತಕ ದೋಷ, ಮದುವೆಯೊಂದೇ ಪರಮಸತ್ಯ, ಸ್ವಾವಲಂಬನೆ ಕಾಸ್ಟ್ಲಿ, ವ್ರತ, ಕತೆಗಳು ನಿತ್ಯಸತ್ಯಗಳು- ಹೀಗೆ ಹಲವಾರು ಸಂಪ್ರದಾಯಸ್ಥ ಮನಸ್ಥಿತಿ ಬೆರೆತ ಕತೆಗಳ ಗುಚ್ಛ, ಧಾರಾವಾಹಿ.
ಹಾಗಂತ ಇದಕ್ಕೆ ಧಾರಾವಾಹಿಗೆ ಕತೆ ಮಾಡುವವರೇ ಕಾರಣವಲ್ಲ. ಇದನ್ನು ನೋಡುವವರ ಮನಸ್ಥಿತಿಯೇ ಕಾರಣ. ಇಂಥ ಸಂಪ್ರದಾಯಸ್ಥ ವಿಚಾರದಲ್ಲಿ ರಿಸ್ಕೇ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗದಷ್ಟು ದಿನೇದಿನೇ ಧಾರಾವಾಹಿ ನೋಡುಗರ ಮನಸ್ಥಿತಿ ರಿಜಿಡ್ ಆಗುತ್ತಿದೆ. ಇದಕ್ಕೆ ಮಾರ್ಕೇಟ್ ಭಾಷೆಯಲ್ಲಿ ಕೋರ್ ಆಡಿಯನ್ಸ್, ಟಿಜಿ (ಟಾರ್ಗೆಟ್ ಗ್ರೂಪ್) ಅನ್ನುತ್ತಾರೆ. ಅವರನ್ನು ಎದುರು ಹಾಕಿಕೊಂಡು ಕತೆ ಮಾಡುವುದು ಅಸಾಧ್ಯ. ಇದರಿಂದಾಗಿಯೇ ಧಾರಾವಾಹಿಗೆ ಹೊಸ ಪ್ರೇಕ್ಷಕರು, ಹೊಸ ತಲೆಮಾರಿನ ವೀಕ್ಷಕರು ಬರುತ್ತಿಲ್ಲ. ಹೊಸ ಪ್ರೇಕ್ಷಕರನ್ನು ಒಲಿಸಿಕೊಳ್ಳಬೇಕೋ, ಹಳೆ ಪ್ರೇಕ್ಷಕರನ್ನು ಉಳಿಸಿಕೊಳ್ಳಬೇಕೋ ಅನ್ನುವ ಸಂದಿಗ್ಧದಲ್ಲಿ ಟೆಲಿವಿಶನ್ ಇವತ್ತು ಇದೆ ಮತ್ತು ಈ ಸಮಸ್ಯೆ ಇಡೀ ದೇಶದ್ದು!
ಹೇಳುವ ರೀತಿಯೂ ಶತ್ರು: ಜೊತೆಗೆ ಧಾರಾವಾಹಿಯ ಕತೆ ಹೇಳುವ ಕ್ರಮ ಕೂಡ ಇವತ್ತು ಧಾರಾವಾಹಿಗಳನ್ನು ಔಟ್ ಡೇಟೆಡ್ ಮಾಡುತ್ತಿದೆ. ಒಂದು ಕಾಲಕ್ಕೆ ಜನಾನುರಾಗಿ ಆಗಿದ್ದ ಫಾರ್ಮುಲಾ, ಮೆಲೋಡ್ರಾಮಾಗಳು ಇವತ್ತು ಟ್ರೋಲ್ ಗೆ ದೊಡ್ಡ ಮಟ್ಟದಲ್ಲಿ ಆಹಾರ. ಮೆಲೋಡ್ರಾಮಾ, ಮನೆಯೊಳಗೇ ಶತ್ರುಗಳು, ಮನೆಯೊಳಗೊಂದಷ್ಟು ಸೀಕ್ರೇಟುಗಳು ಇವೆಲ್ಲಾ ಒಂದು ಕಾಲಕ್ಕೆ ಮನರಂಜನೆ ಆಗಿದ್ದು ಈಗ ಬಹುಬೇಗ ಸವಕಲಾಗಿವೆ, ಪ್ರಿಡಿಕ್ಟೆಬಲ್ ಆಗಿವೆ. ಹಾಗಂತ ಇವತ್ತಿನ ಓಟಿಟಿ, ವೆಬ್ ಸೀರೀಸ್ ಥರದ ಬಿಡು ಬೀಸಾದ ಕಥನ ಕ್ರಮವನ್ನೂ ಅಳವಡಿಸಿ, ಕತೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮತ್ತದೇ ಸಮಸ್ಯೆ- ಮನೆಗೊಂದೇ ಟೀವಿ, ಆದರೆ ಮನೆಯ ನಾಲ್ಕೈದು ಜನರ ಕೈಲೂ ನಾಲ್ಕೈದು ಫೋನುಗಳು. ಮನರಂಜನೆ ವಿಚಾರವಾಗಿ ಒಬ್ಬೊಬ್ಬೊರದೊಂದೊಂದು ಆದ್ಯತೆ, ಭಜನೆ ಮಾಡುವ ಅತ್ತೆಗೂ ರೀಲ್ಸ್ ಮಾಡುವ ಸೊಸೆಗೂ ಒಂದೇ ತೆರನಾದ ಮನರಂಜನೆ ಒದಗಿಸೋದು ಕಷ್ಟಕಷ್ಟ! -ಈಗ ಧಾರಾವಾಹಿಗಳ ಅವಸಾನ ‘ಆಗುವುದಿಲ್ಲ’ ಅನ್ನುವುದಕ್ಕೆ ಇರುವ ಕಾರಣಗಳನ್ನು ನೋಡೋಣ.
ಸ್ವಾಮಿನಿಷ್ಠ ಪ್ರೇಕ್ಷಕರು: ಒಂದು ಯೂಟ್ಯೂಬ್ ಚಾನಲ್, ಫಾಲೋ ಮಾಡೋ ಇನ್ ಸ್ಟಾಗ್ರಾಮ್/ ಎಫ್ ಬಿ ವ್ಯಕ್ತಿಯನ್ನು ನೀವು ನಾಳೆ ಅನ್ ಫಾಲೋ ಮಾಡಬಹುದು. ಆದರೆ ಟಿವಿ ಹಾಗಲ್ಲ, ಅದು ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಒಂದು ಹ್ಯಾಬಿಟ್ಟು. ಟಿವಿಗೇ ಕುಂಕುಮ ಇಟ್ಟು, ಆರತಿ ಬೆಳಗಿ ರಾಮಾಯಣ ನೋಡಿದ ಭಾರತೀಯ ಪರಂಪರೆ ನಮ್ಮದು. ಟಿವಿಯಲ್ಲಿ ನಡೆಯುವುದುದು ನಿಜ ಅಂತ ನಂಬಿ, ಟಿವಿ ಹೇಳಿದ್ದು ಸತ್ಯ ಅಂತ ಒಪ್ಪಿ, ಅಪ್ಪಿರುವವರು ನಮ್ಮ ನಿಮ್ಮ ಕುಟುಂಬದ ಮಂದಿ. ಹಾಗಾಗಿ ಒಬ್ಬ ಪ್ರಧಾನಿ ಇದೇ ವೇದಿಕೆ ಮೂಲಕ ಇಡೀ ದೇಶವನ್ನು ಉದ್ದೇಶಿಸಿ ಮಾತಾಡುತ್ತಾರೆ, ಒಂದು ಧಾರ್ಮಿಕ ಕಾರ್ಯಕ್ರಮದಿಂದ ಹಿಡಿದು ಒಂದು ಸಾಮಾಜಿಕ ಕಾರ್ಯಕ್ರಮದವರೆಗೆ ಎಲ್ಲವೂ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವಂಥ ಏಕೈಕ ಪ್ರಭಾವಿ ಮಾಧ್ಯಮ ಟೀವಿ. ಇಂಥ ಮಾಧ್ಯಮದ ಲಾಯಲ್ ಆಡಿಯನ್ಸ್ ಇರುವವರೆಗೂ ಧಾರಾವಾಹಿಗಳಿಗೆ ಸಾವಿಲ್ಲ!
ಗ್ರಾಮ ವಾಸ್ತವ: ಜೊತೆಗೆ, ಭಾರತ ಪ್ರಪಂಚದಲ್ಲೇ ಅತಿ ದೊಡ್ಡ ಗ್ರಾಮೀಣ ದೇಶ. ಗ್ರಾಮಗಳು ಇನ್ನೂ ಪೂರ್ತಿ ಡಿಜಿಟಲೈಸ್ ಆಗಿಲ್ಲ. ಹಾಗಾಗಿ ಡಿಜಿಟಲ್ ಕ್ರಾಂತಿ ಮೂಲಕ ಇವತ್ತೇನು ಕಂಟೆಂಟ್ ಜನರೇಟ್ ಆಗುತ್ತಿದೆಯೋ ಅದು ಎಲ್ಲರನ್ನೂ ತಲುಪಿ, ಅದೇ ಸಾರ್ವಜನಿಕ ಸತ್ಯ ಆಗುವುದಕ್ಕೆ ಇನ್ನೂ ಬಹಳ ಕಾಲ ಬೇಕಾಗುತ್ತದೆ. ಹಾಗಾಗಿ ಟಿವಿಯೇ ಪರಮಸತ್ಯ. ಜೊತೆಗೆ ಡಿಜಿಟಲ್ ಸಾಕ್ಷರತೆ. ಗ್ರಾಮೀಣ ಪ್ರದೇಶದ ಪ್ರೇಕ್ಷಕ ಇನ್ನೂ ಟಿವಿಯನ್ನು ಕೈಬಿಟ್ಟು, ಡಿಜಿಟಲ್ ಕಡೆಗೆ ಹೋಗಿಲ್ಲ. ಥ್ಯಾಂಕ್ಸ್ ಟು, ಅನಕ್ಷರತೆ. ಉದಾಹರಣೆಗೆ, ‘ಧಂಗಲ್’ ನಂಥ ಒಂದು ಸಬ್ ಸ್ಕ್ರಿಪ್ಶನ್ ಚಾನಲ್, ಭಾರತದಲ್ಲಿ ಮುಖ್ಯ ಪೇಯ್ಡ್ ಚಾನಲ್ ಗಳ ಜೊತೆಗೂ ಸ್ಪರ್ಧೆ ಒಡ್ಡಿ, ಗೆಲ್ಲುತ್ತಿರುವುದು ಗ್ರಾಮೀಣ ಭಾರತದ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಅದು ಸೃಷ್ಟಿಸುತ್ತಿರುವ ಕಂಟೆಂಟ್ ನಿಂದಾಗಿ. ಹಾಗಂತ, ನಮ್ಮೂರಿನ ಕೋಳಿಯಿಂದಲೇ ಬೆಳಗಾಗುತ್ತಿದೆ ಅಂತ ಕೂರುವಂತಿಲ್ಲ. ಕೋಳಿ ಕೂಗದೇ ಇದ್ದರೂ ಸೂರ್ಯ ಹುಟ್ಟುತ್ತಾನೆ, ಕಾಲ ಬದಲಾಗುತ್ತದೆ, ಹಳೆ ನೀರು ಹೋಗುತ್ತದೆ, ಹೊಸ ಫಸಲು ಬರುತ್ತದೆ. ಅದಕ್ಕಾಗಿ ಬದಲಾವಣೆಗಳನ್ನು ಟೆಲಿವಿಶನ್ ಅಳವಡಿಸಿಕೊಳ್ಳಬೇಕು, ಒಂದು ದಿವಿನಾದ ಆರ್ಕ್ ಶಿಫ್ಟ್ ಬೇಕು. ಹಾಗಂತ ಅದಕ್ಕೆ ಬೇಕಾದ ಸಣ್ಣ ಸಣ್ಣ ಬದಲಾವಣೆಗಳೂ ಆಗುತ್ತಿವೆ. ಮಟ್ಟದಲ್ಲಿ ಆಗುತ್ತಿದೆ ಕೂಡ.
ರೈತರ ವಿರುದ್ಧ ಕ್ರಮ ಜರುಗಿಸದೇ ವಕ್ಫ್ ನೋಟಿಸ್ ಪಡೆಯಲು ಸರ್ಕಾರ ಆದೇಶ!
ಏನಾಗಬೇಕು?: ಒಂದು ಸ್ಪಷ್ಟವಾದ ಸ್ವಿಚ್ ಬೇಕಿದೆ. ಹೊಸ ತಲೆಮಾರು ಬರುವಂತೆ ಮನರಂಜನೆಯ ಕ್ರಾಂತಿ ಆಗಬೇಕಿದೆ. ಈಗ್ಗೆ 10 ವರ್ಷಗಳ ಹಿಂದೆ ಭಾರತದ ಒಟ್ಟು ಕಿರುತೆರೆಯ ಕತೆ, ಕತೇತರ ವಿಭಾಗದಲ್ಲಾದ ಕ್ರಾಂತಿ ಇನ್ನೊಮ್ಮೆ ಆಗಬೇಕು. ಹತ್ತು ವರ್ಷಗಳ ಹಿಂದೆ ಒಂದು ಬಿಗ್ ಬಾಸ್ ಪರಿಕಲ್ಪನೆ ಪ್ರವೇಶವಾಗುತ್ತಲೇ ಅದು ಈ ಹತ್ತು ವರ್ಷಗಳ ಒಟ್ಟು ಟೀವಿ ಹಣೆಬರಹವನ್ನೇ ಬದಲಾಯಿಸಿತು. ಅಂಥದ್ದೊಂದು ಕಂಟೆಂಟ್ ಕ್ರಾಂತಿ ಆಗಬೇಕು, ಹೊಸ ತಲೆಮಾರು ಬಂದು, ಹೊಸದೊಂದು ಶಕೆಯನ್ನು ಪ್ರಾರಂಭಿಸಬೇಕು, ಬಹಳ ಮುಖ್ಯವಾಗಿ ಒಂದು ಕಾಂತಾರ ಸಿನಿಮಾ, ಅಪ್ಪಟ ಕನ್ನಡದ, ಗ್ರಾಮೀಣ ಭಾಗದ ಕಂಟೆಂಟನ್ನು ಸೃಷ್ಟಿ ಮಾಡಿಕೊಟ್ಟಿತೋ ಆ ರೀತಿಯ ಕ್ರಾಂತಿ ಟೆಲಿವಿಶನ್ ಗೂ ಬೇಕು. ಕೊನೆಗೂ ಅಪ್ಪಟ ಕಂಟೆಂಟ್ ಒಂದು ಮಾರುಕಟ್ಟೆಯ ಜೊತೆಗೆ ಕೂಡಿ, ಹುಟ್ಟಿಸಬೇಕಾಗಿರುವ ಬೆರಗಿನ ಶಿಶು ಆಗಿರಬೇಕು ಅದು!