ಅಪ್ಪ-ಅಮ್ಮನ ಅತಿಯಾದ ನಿರೀಕ್ಷೆ, ಮಕ್ಕಳು ನೇಣಿಗೆ ಕೊರಳೊಡ್ಡುವವರೆಗೆ... ಡ್ರಾಮಾ ಜ್ಯೂನಿಯರ್ಸ್ ಪಾಠವಿದು...
ಮಕ್ಕಳ ಮೇಲೆ ಅಪ್ಪ-ಅಮ್ಮ ಇಟ್ಟುಕೊಳ್ಳುವ ಮಿತಿಮೀರಿದ ನಿರೀಕ್ಷೆ ಮಕ್ಕಳನ್ನು ಸಾವಿನ ಕೂಪಕ್ಕೆ ಹೇಗೆ ತಳ್ಳುತ್ತದೆ ಎನ್ನುವುದನ್ನು ಡ್ರಾಮಾ ಜ್ಯೂನಿಯರ್ಸ್ ತೋರಿಸಿಕೊಟ್ಟಿದೆ ನೋಡಿ...
ಮಕ್ಕಳ ಜೀವನದಲ್ಲಿ ಅಂಕವೇ ಎಲ್ಲವೂ ಅಲ್ಲ, ಫೇಲಾದ ವ್ಯಕ್ತಿಯೂ ಮಿಲೇನಿಯರ್ ಆಗಿರೋ ಬೇಕಾದಷ್ಟು ಉದಾಹರಣೆಗಳಿವೆ. ದೊಡ್ಡ ದೊಡ್ಡ ಕಂಪೆನಿಯನ್ನು ತೆರೆದಿರುವ, ಸಹಸ್ರಾರು ಮಂದಿಗೆ ಉದ್ಯೋಗ ನೀಡುತ್ತಿರುವ ಕೋಟ್ಯಧಿಪತಿಗಳ ಹಿನ್ನೆಲೆ ನೋಡಿದರೆ ಅವರು ಹೈಸ್ಕೂಲ್ ಮೆಟ್ಟಿಲು ಕೂಡ ಏರದವರು ಇದ್ದಾರೆ. ಅದೇ ಇನ್ನೊಂದೆಡೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಿಗ್ಗಜರ ಪೈಕಿ ಹಲವರಿಗೆ ಶಿಕ್ಷಣ ಎನ್ನುವುದು ಮರೀಚಿಕೆಯೇ ಆಗಿದ್ದಿದೆ, ಇನ್ನು ಕೆಲವರಿಗೆ ಶಿಕ್ಷಣ ತಲೆಗೆ ಹತ್ತದೇ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಧಿಸುವ ಛಲ, ಜೀವನದಲ್ಲಿ ಗುರಿ ಇದ್ದರೆ ಅಂಕವೆನ್ನುವುದು ಮಾತೇ ಅಲ್ಲ ಎನ್ನುವುದನ್ನು ಬಹುತೇಕ ಮಂದಿ ಸಾಬೀತು ಮಾಡಿದ್ದಾರೆ. ಇದೇನೇ ಇದ್ದರೂ, ಅಂಕವೆಂಬ ಮಹಾಭೂತ ಇಂದು ವಿದ್ಯಾರ್ಥಿಗಳ ತಲೆಯಲ್ಲಿ ಹೊಕ್ಕಿಬಿಟ್ಟಿದೆ. ಅದಕ್ಕೆ ತಕ್ಕಂತೆ ಇಂದಿನ ಶಿಕ್ಷಣ ಪದ್ಧತಿ ಇದ್ದರೆ, ಮನೆಯಲ್ಲಿ ಪಾಲಕರ ಒತ್ತಡ ಇನ್ನೊಂದೆಡೆ.
ಜೀವನವನ್ನು ಹೇಗೆ ಎದುರಿಸಬೇಕು ಎನ್ನುವ ತಿಳಿವಳಿಕೆ ನೀಡುವ ಶಾಲೆ-ಕಾಲೇಜುಗಳಂತೂ ಈಗ ಇಲ್ಲವೇ ಇಲ್ಲ ಎನ್ನಬಹುದು. ಶಿಕ್ಷಣ ಎನ್ನುವುದು ಈಗ ಏನಿದ್ದರೂ ಮಕ್ಕಳು ಅಂಕ ಗಳಿಸುವ ಯಂತ್ರಗಳಿಗಷ್ಟೇ ಸೀಮಿತ. ಪುಸ್ತಕದಲ್ಲಿ ಇದ್ದುದನ್ನು ಬಾಯಿಪಾಠ ಮಾಡಿಸಿ ಅವುಗಳನ್ನು ಪರೀಕ್ಷೆಯಲ್ಲಿ ಬರೆದು ರ್ಯಾಂಕ್ ಗಳಿಸಿಬಿಟ್ಟರೆ ಶಾಲೆಯ ಘನತೆಯೂ ಹೆಚ್ಚುತ್ತದೆ, ಇನ್ನೊಂದೆಡೆ ಮಕ್ಕಳ ಸಾಧನೆಯನ್ನು ಹಾಡಿ ಹೊಗಳುವುದೂ ಪಾಲಕರಿಗೆ ಬಹು ಖುಷಿಯಾಗುತ್ತದೆ. ಇದೇ ಕಾರಣಕ್ಕೆ ಇಂದಿನ ಹೆಚ್ಚಿನ ಮಕ್ಕಳ ಮನಸ್ಥಿತಿ ಹೇಗಿದೆ ಎಂದರೆ ಜೀವನದಲ್ಲಿ ಚಿಕ್ಕದೊಂದು ಸಮಸ್ಯೆ ಎದುರಾದರೂ ಅದನ್ನು ನಿಭಾಯಿಸುವ ಶಕ್ತಿಯೇ ಇಲ್ಲವಾಗಿದೆ. ಚಿಕ್ಕಪುಟ್ಟ ಸಮಸ್ಯೆಗೆ ಸಾವೇ ಅವರಿಗೆ ಉತ್ತರವಾಗುತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಖಿನ್ನತೆಗೆ ಜಾರುತ್ತಿರುವ ಮಕ್ಕಳು ಅದೆಷ್ಟು ಮಂದಿ? ಇದಕ್ಕೆ ಮುಖ್ಯ ಕಾರಣ, ಇಂದಿನ ಶಿಕ್ಷಣ ಪದ್ಧತಿ. ಇದಕ್ಕೆ ಪಾಲಕರ ಕೊಡುಗೆ ಕೂಡ ಹೆಚ್ಚಿದೆ.
100 ವರ್ಷದ ಹಳೆಯ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಡಾ.ಬ್ರೋ: ಕಾಬುಲ್ ಟೆಕ್ನಿಕ್ ವಿವರಿಸಿದ್ದು ಹೀಗೆ...
ಎಲ್ಲಾ ಮಕ್ಕಳ ಬುದ್ಧಿವಂತಿಕೆ ಒಂದೇ ರೀತಿ ಆಗಿರುವುದಿಲ್ಲ. ಅವರ ಐಕ್ಯೂ ಮಟ್ಟ ಒಂದೇ ರೀತಿ ಇರುವುದಿಲ್ಲ. ಆದರೆ ಬಹುತೇಕ ಪಾಲಕರು ಇದನ್ನು ತಿಳಿದುಕೊಳ್ಳುವುದೇ ಇಲ್ಲ. ಅಕ್ಕ-ಪಕ್ಕದ ಮಕ್ಕಳಿಗೆ ಹೋಲಿಕೆ ಮಾಡಿಯೋ, ಸಂಬಂಧಿಕರ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡೋ ಇಲ್ಲವೇ ತಮ್ಮ ಒಂದು ಮಗುವಿಗೆ ಇನ್ನೊಂದು ಮಗುವನ್ನು ಹೋಲಿಕೆ ಮಾಡಿ ಎಳೆ ಮನಸ್ಸುಗಳಲ್ಲಿ ವಿಷಬೀಜ ಬಿತ್ತುವುದು ಉಂಟು. ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ದೊಡ್ಡ ಹುದ್ದೆಯಲ್ಲಿ ಇರಬೇಕು ಎಂದು ಕನಸು ಕಾಣುವ ಪಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ ವಿನಾ ಮಕ್ಕಳು ಅವರಿಷ್ಟದಂತೆ ಏನಾದರೂ ಆಗಲಿ, ಉತ್ತಮ ಪ್ರಜೆಯಾಗಿರಲಿ, ಜೀವನವನ್ನು ಹೇಗೆ ಸಾಗಿಸಬೇಕು ಎಂಬ ತಿಳಿವಳಿಕೆ ಬಂದಿರಲಿ ಎಂದುಕೊಳ್ಳುವುದೇ ಇಲ್ಲ. ಇದಕ್ಕೆ ಕಾರಣ ಅವರ ಪ್ರತಿಷ್ಠೆ.
ಕೆಲವು ಮಕ್ಕಳು ಓದಿನಲ್ಲಿ ಮುಂದಿದ್ದರೂ ಅವರ ಕನಸೇ ಬೇರೆಯಾಗಿರುತ್ತದೆ, ಇನ್ನು ಕೆಲವು ಮಕ್ಕಳಿಗೆ ಸುಲಭದಲ್ಲಿ ಓದು ತಲೆಗೆ ಹತ್ತುವುದೇ ಇಲ್ಲ. ಅಪ್ಪ-ಅಮ್ಮ ತಮ್ಮ ಅತಿಯಾದ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳನ್ನು ಅಂಕ ತರುವ ಯಂತ್ರ ಮಾಡಿದರೆ ಏನಾಗುತ್ತದೆ? ಇಷ್ಟು ಅಂಕ ಬರದೇ ಹೋದರೆ ನಿನ್ನ ಕಥೆ ಅಷ್ಟೇ ಎಂದೋ, ಇಷ್ಟು ಅಂಕ ತರಲೇಬೇಕು... ನೀನು ಡಾಕ್ಟರ್ ಆಗಲೇ ಬೇಕು... ನೀನು ಎಂಜಿನಿಯರ್ ಆಗಲೇಬೇಕು... ಎಂದೆಲ್ಲಾ ಒತ್ತಡ ಹೇರಿದಾಗ ಆ ಮುಗ್ಧ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಡ್ರಾಮಾ ಜ್ಯೂನಿಯರ್ಸ್ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ತೋರಿಸಿದ್ದಾರೆ. ಅಪ್ಪ-ಅಮ್ಮ ಹೇಳಿದ ಅಂಕಕ್ಕಿಂತ ಕಡಿಮೆ ಬಂದಾಗ, ಮನೆಗೆ ಹೋದರೆ ಆಗುವ ಸ್ಥಿತಿಯನ್ನು ನೆನಪಿಸಿಕೊಂಡು ಅದಕ್ಕಿಂತ ಸಾಯುವುದೇ ಮೇಲು ಎಂದು ನೇಣಿಗೆ ಕೊರಳೊಡ್ಡುವ, ಬಾವಿ-ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಇಲ್ಲವೇ ವಿಷವನ್ನು ಸೇವಿಸಿ ಪ್ರಾಣ ಬಿಡುವ ಅದೆಷ್ಟೋ ಮಕ್ಕಳ ಸುದ್ದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಅದನ್ನು ನಾಟಕದ ಮೂಲಕ ತೋರಿಸಿದ್ದಾರೆ ಈ ಮಕ್ಕಳು. ಮಕ್ಕಳು ಅವರಿಷ್ಟದಂತೆ ಬಾಳಬೇಕೋ ಅಥವಾ ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಪ್ರತಿಷ್ಠೆಯನ್ನು ಕಾಪಾಡಬೇಕೋ... ಎನ್ನುವುದು ಈ ನಾಟಕದ ತಾತ್ಪರ್ಯವಾಗಿದೆ.
ಸರಿಗಮಪ ವೇದಿಕೆಯಲ್ಲಿ ಮೊದಲ ಬಾರಿಗೆ ಸಂಗೀತದಿಂದ 'ಕಾಂತಾರ' ದೈವದ ದರ್ಶನ!