ಕೊಣಾಜೆಕಲ್ಲು ಸಿದ್ದಾಶ್ರಮ ಮಠವನ್ನೊಮ್ಮೆ ರಾಜ್ಯ ಸರ್ಕಾರ ನೋಡಬಾರದೇಕೆ ?
ಕರ್ನಾಟಕ ರಾಜ್ಯ ಪ್ರವಾಸಿ ತಾಣಗಳಿಂದಲೇ ದೇಶಾದ್ಯಂತ ಹೆಚ್ಚು ಪ್ರಸಿದ್ಧಿಯಾಗಿದೆ. ಇಲ್ಲಿರುವ ಸುಂದರ ಟೂರಿಸ್ಟ್ ಸ್ಪಾಟ್‌ಗಳನ್ನು ನೋಡಿ ಪ್ರವಾಸಿಗರು ಅಚ್ಚರಿಗೊಳ್ಳುತ್ತಾರೆ. ಹಾಗೆಯೇ ರಾಜ್ಯದ ಹಲವೆಡೆ ಇನ್ನೂ ಅಭಿವೃದ್ಧಿಯಾಗದ ಕೆಲವೊಂದು ಪ್ರವಾಸಿ ತಾಣಗಳಿವೆ. ಅದರಲ್ಲೊಂದು ಕೊಣಾಜೆಕಲ್ಲು ಸಿದ್ದಾಶ್ರಮ ಮಠ. ಆ ಬಗ್ಗೆ ತಿಳಿಯೋಣ.
ವರದಿ: ರವಿ ಶಿವರಾಮ
ಕರಾವಳಿಯನ್ನು ಪರಶುರಾಮನ ಸೃಷ್ಟಿ ಎಂದು ನಂಬುತ್ತಾರೆ. ಪುರಾಣದ ಪ್ರಕಾರ ಅದು ನಿಜವೂ ಹೌದು. ಅಷ್ಟೇ ಅಲ್ಲ ಕರಾವಳಿಯನ್ನು (Dakshina kannada) ದೇವನಗರಿ ಎಂದು ಕರೆದರೂ ತಪ್ಪಾಗಲಾರದು. ವಿಶ್ವವಿಖ್ಯಾತ ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ, ಸೌತಡ್ಕ ಮಹಾಗಣಪತಿ, ಸೂರ್ಯ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಕುದ್ರೋಳ್ಳಿ, ಕದ್ರಿ ಹೀಗೆ ಸಾಲು ಸಾಲು ದೇವಸ್ಥಾನಗಳು (Temples) ದಕ್ಷಿಣ ಕನ್ನಡ ಜಿಲ್ಲೆಗೆ ಕಳಶ ಇದ್ದಂತೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯನ್ನು ಜೈನ ಕಾಶಿ ಎಂದೇ ಕರೆಯುತ್ತಾರೆ. ಅದೇ ಮೂಡಬಿದ್ರೆ ತಾಲೂಕಿನಲ್ಲಿರುವ ಇನ್ನೂ ಒಂದು ಪ್ರಸಿದ್ಧ ಕ್ಷೇತ್ರದ ಬಗ್ಗೆ ಮಾಹಿತಿ (Information) ನೀಡುವ ಪ್ರಯತ್ನವೇ ಕೊಣಾಜೆಕಲ್ಲು ಸಿದ್ದಾಶ್ರಮ ಮಠ.
ಕೊಣಾಜೆ ಕಲ್ಲು ಸಿದ್ದಾಶ್ರಮದ ಮಠದ ಹಿನ್ನಲೆ
ಕೊಣಾಜೆ ಕಲ್ಲು ಮಠ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರ (Height)ದಲ್ಲಿದೆ. ಈ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ನಂಬಲಾಗುತ್ತಿದೆ. ಬೆಟ್ಟದ ತುದಿಗೆ ಶಾಂತವಾಗಿ ಮಲಗಿರುವ ಬೃಹತ್ ಆಕಾರದ ಕಲ್ಲಿನ ಕೆಳಗೆ ವ್ಯಾಸ ಮಹರ್ಷಿಯ ಶಿಷ್ಯರಿಬ್ಬರ ಸಮಾಧಿ ಸೇರಿದಂತೆ, ಭೃಗಂಡ ಮಹರ್ಷಿ, ತಾಯಿ ಗುರುಮಾತಾ ಹಾಗೂ ಭೃಗ ಮಹರ್ಷಿ ಸೇರಿ ಒಟ್ಟು ಐದು ಮಹರ್ಷಿಗಳ ಸಮಾದಿ ಇದೆ. 1947ರಲ್ಲಿ ಶಾರದಾ ದಾಸ ಸ್ವಾಮಿಜಿಗಳು ಕೇರಳದ ಕಣ್ಣೂರಿನಿಂದ ಕರ್ನಾಟಕಕ್ಕೆ ಬರುತ್ತಾರೆ.
ನವರಾತ್ರಿಯ ಸಂಭ್ರಮ ಹೆಚ್ಚಿಸಲು ಒಮ್ಮೆಯಾದರೂ ಈ ಅದ್ಭುತ ನಗರಗಳಿಗೆ ಹೋಗ್ಲೇ ಬೇಕು
ಕರ್ನಾಟಕಕ್ಕೆ ಬಂದಾಗ ಕಾರ್ಕಳದ ಕಾಡೊಂದರಲ್ಲಿ ತಪಸ್ಸಿಗೆ ಕುಳಿತಿದ್ದಾಗ ಶಾರದ ದಾಸ ಸ್ವಾಮಿಗಳಿಗೆ ಜ್ಯೋತಿಯ ದರ್ಶನವಾಗುತ್ತದಂತೆ. ಆ ಜ್ಯೋತಿಯ ದರ್ಶನ ಪಡೆದು ಅದೇ ಹಾದಿಯಲ್ಲಿ ನಡೆದು ಬಂದಾಗ ಮೊದಲು ಶಾರದಾ ದಾಸ ಸ್ವಾಮಿಜಿಗಳಿಗೆ ಹುತ್ತವೊಂದು ಕಾಣುತ್ತದೆ. ಅಲ್ಲೇ ಪಕ್ಕದಲ್ಲಿ ಸಮಾಧಿಯೂ ಕಾಣುತ್ತದೆ. ಅಲ್ಲಿಂದ ಶಾರದಾ ದಾಸ ಸ್ವಾಮಿಜಿಗಳು ಈ ಕ್ಷೇತ್ರದಲ್ಲೇ ಉಳಿದು ಮುನ್ನಲೆಗೆ ತಂದಿರುತ್ತಾರೆ ಎನ್ನುವ ಮಾಹಿತಿ ಸಿಗುತ್ತದೆ. ಸದ್ಯ ಈ ಅತ್ಯದ್ಭುತ ತಾಣವನ್ನು ಗಣೇಶ ಗುರೂಜಿ ನಿರ್ವಹಣೆ ಮಾಡುತ್ತಿದ್ದಾರೆ.
ಪರಶುರಾಮ ತಪ್ಪಸ್ಸು ಮಾಡಿದ್ದ ಜಾಗವೇ ?
ಶಿವನ ಭಕ್ತ, ಬೃಹ್ಮನ ವಂಶಸ್ಥ ಪರಶುರಾಮ ಇದೇ ಸ್ಥಳದಲ್ಲಿ ತಪಸ್ಸು ಮಾಡಿದ್ದ ಎಂದು ನಂಬಲಾಗಿದೆ. ಬೃಹದ್ ಆಕಾರದ ಒಂಟಿ ಕಲ್ಲಿನ ಕೆಳಗೆ ಭೃಗು ಮಹರ್ಷಿಗಳ ಸಮಾದಿ ಇದೆ. ಅದೇ ಕಲ್ಲಿನ ಮೇಲೆ ಬೆಟ್ಟದ ತುದಿಯಲ್ಲಿ ಪರಶುರಾಮ ತಪಸ್ಸು ಮಾಡಿದ್ದನೆಂದು ಹೇಳಲಾಗಿದೆ. ಅಲ್ಲಿ ಒಂದು ಬಾವಿಯಿದೆ. ಅಷ್ಟು ಎತ್ತರದ ಪ್ರದೇಶವಾದರೂ ವರ್ಷವಿಡಿ ನೀರು ಇರುತ್ತದೆ. ಇನ್ನು ಆಶ್ರಮದ ಕೆಳ ಭಾಗ ಬಂದರೆ ರಾಜರಾಜೇಶ್ವರಿ ದೇವಸ್ಥಾನವೂ ಇದೆ. ಮಣ್ಣು ಸಡಿಲ ಆಗಿರುವ ಕಾರಣ ಅಲ್ಲಿ ಒಳಗೆ ಹೋಗಲು ಪ್ರವೇಶ ಇಲ್ಲ. ಅಲ್ಲಿಯ ಪ್ರತಿ ಜಾಗವನ್ನು ಶಬ್ದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಕಿಲೋಮೀಟರ್ ನಷ್ಟು ಅಗಲದ ಬಂಡೆ ಹಾಗೆ ನಿಂತಿರುವುದೇ ಒಂದು ಅಚ್ಚರಿಯಾದರೆ, ಹತ್ತಿರ ಹೋಗಿ ನೋಡಿದಾಗ ಗುಹೆಯ (Cave) ರೀತಿ ಭಾಸವಾಗುತ್ತದೆ.
ದುರ್ಗಮ ಕಾಲು ಹಾದಿ, ಅಭಿವೃದ್ಧಿಯಾದರೆ ಜಗತ್ತನ್ನು ಸೆಳೆಯಬಲ್ಲ ದೇವತಾಣ
ಮೂಡಬಿದ್ರೆಯಿಂದ ನಾಲ್ಕೈದು ಕಿಮೀ ದೂರದಲ್ಲಿರುವ ಕೊಣಜೆಕಲ್ಲು ಸುತ್ತ ಊರಿಗೆ ಕಾಣುತ್ತದೆ. ಬಹುಶಃ ಕಾರ್ಕಳದಲ್ಲಿ ನಿಂತು ನೋಡಿದರೂ ಬೆಟ್ಟದ ಮೇಲೆ ವಿಶ್ರಾಂತವಾಗಿರುವ ಈ ಕಲ್ಲು ಕಾಣುತ್ತದಂತೆ. ಆದರೆ ಬೆಟ್ಟವೇರಿ ಹತ್ತಿರ ಹೋದಾಗಲೇ ಪ್ರಕೃತಿಯ ಸೌಂದರ್ಯ ಸವಿಯುವ ಜೊತೆಗೆ, ದೇವರ ಸಾನಿಧ್ಯದಲ್ಲಿ ಧ್ಯಾನಸ್ತರಾಗಬಹುದು. ಆದರೆ ಈ ಬೆಟ್ಟ ಏರುವುದೇ ಒಂದು ಸಾಧನೆ. ಕಡಿದಾದ ಕಾಲು ಹಾದಿಗಳು, ಮಳೆಗಾಲದಲ್ಲಿ ಹರಿಯುವ ಕೋಡಿಗಳು, ಜಾರುವ ಬಂಡೆಗಳು ಇದರ ಮಧ್ಯೆ ಸುಮಾರು 1.5 ಯಿಂದ 2 ಕೀ.ಮಿ ಬೆಟ್ಟ ಏರಿದರೆ ನಿಮಗೆ ಈ ಜಾಗ ಸಿಗುತ್ತದೆ.
Travel Tips in Kannada: ಏಕಾಂಗಿ ಪ್ರಯಾಣ ಇಷ್ಟನಾ? ಕರ್ನಾಟಕದ ಈ ಸ್ಥಳಗಳಿಗೆ ಹೋಗಿ
ಇಲ್ಲಿ ವಾಹನ ಹೋಗುವಂತೆ ಮಾಡೋದು ಕಷ್ಟ ಸಾಧ್ಯ. ಆದರೆ ಕಾಲು ಹಾದಿಯನ್ನೇ (Path) ಒಂದಿಷ್ಟು ಅಭಿವೃದ್ಧಿ ಮಾಡಬಹುದಿತ್ತು. ಸ್ಟೆಪ್ಸ್ ಗಳನ್ನು ನಿರ್ಮಾಣ ಮಾಡಿದರೆ ಒಂದೆರಡು ಕೀ.ಮಿ ನಡೆಯೋದು ಕಷ್ಟವಾಗದು. ಆದರೆ ಅದ್ಯಾಕೋ ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನ ಹರಿಸಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟ ನಾಶ ಮಾಡಬೇಕಾಗುತ್ತದೆ ಎಂದೇನಿಲ್ಲ. ಐತಿಹಾಸಿಕ ತಾಣಕ್ಕೆ ಕನಿಷ್ಟ ಸೌಲಭ್ಯ ನೀಡಿದರೆ ಸಾಕಿತ್ತು. ಇದೊಂದು ಕರ್ನಾಟಕದ ಅದ್ಭುತಗಳಲ್ಲಿ ಒಂದು ಎಂದು ದಾಖಲಾಗುತ್ತಿತ್ತು.
ಜನ ಭೇಟಿ ವಿರಳ
ಇತ್ತಿಚಿಗಂತೂ ಈ ಪ್ರದೇಶಕ್ಕೆ ಜನ ಭೇಟಿ ನೀಡೋದೆ ಕಡಿಮೆ ಆಗಿದೆಯಂತೆ. ಹೊರ ರಾಜ್ಯದವರಿಗೆ ಬಿಡಿ, ಮೂಡಬಿದ್ರೆ ಸುತ್ತ ಮುತ್ತಲೇ ಇರುವ ಅನೇಕರಿಗೆ ಈ ತಾಣದ ಪರಿಚಯ ಇಲ್ಲ. ನೋಡಿದ್ರಾ ಎಂದು ಕೆಲವರಿಗೆ ಕೇಳಿದ್ರೆ ಅದು ಎಲ್ಲಿದೆ ಕೇಳುತ್ತಾರೆ. ಕಾರಣ ಪ್ರವಾಸೋದ್ಯಮ ಇಲಾಖೆ ಈ ತಾಣದ ಮೇಲೆ ಕಣ್ಣು ಹಾಯಿಸಿಲ್ಲ ಎನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಸ್ಥಳದ ಅಭಿವೃದ್ಧಿಗೆ ಹಿಂದೊಮ್ಮೆ ಸರಕಾರ ಹಣ ಬಿಡುಗಡೆ ಮಾಡಿತ್ತಂತೆ. ಆದರೆ ಹಣ ಖರ್ಚು ಮಾಡಲಿಲ್ಲ. ಕಾರಣ ಗೊತ್ತಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಇತ್ತ ಒಂದು ಚೂರು ಗಮನ ನೀಡಿದರೆ ಮೂಡಬಿದ್ರೆ ಕೀರ್ತಿಗೆ ಪಾತ್ರವಾಗುವುದರಲ್ಲಿ ಸಂದೇಹವೇ ಬೇಡ.