ನಮ್ಮ ಬಕೆಟ್ ಲಿಸ್ಟ್‌ನಲ್ಲಿ, ಕನಸಿನ ನಾಳೆಗಳಲ್ಲಿ ಟ್ರಾವೆಲ್ ಎಂಬುದು  ಇದ್ದೇ ಇರುತ್ತದೆ. ಎಷ್ಟಾಗುತ್ತದೋ ಅಷ್ಟು ಸುತ್ತಬೇಕು. ತಿಳಿಯಬೇಕು, ನೋಡಬೇಕು ಇತ್ಯಾದಿ ಎಲ್ಲರ ಬಯಕೆ. ಆದರೆ ನಮ್ಮ ಕನಸಿನ ಟ್ರಿಪ್‌ಗಳು ಈ ಗ್ರಹದ ಮೇಲೆ ಎಷ್ಟೊಂದು ದುಷ್ಟ ಪರಿಣಾಮಗಳನ್ನು ಬೀರುತ್ತಲಿವೆ ಎಂಬ ಬಗ್ಗೆ ಮಾತ್ರ ನಾವು ಕಿಂಚಿತ್ತೂ ಯೋಚಿಸುವುದಿಲ್ಲ.

ವರ್ಲ್ಡ್ ಮೀಟಿಯೋರೋಲಾಜಿಕಲ್ ಸಂಸ್ಥೆಯ ವರದಿಯಂತೆ, 2014ರಿಂದ 2019 ಮಾನವಸಂಕುಲ ಕಂಡ ಹಾಟೆಸ್ಟ್ ವರ್ಷಗಳು. ಹೀಗೆ ತಾಪಮಾನ ಏರಿಕೆಯಲ್ಲಿ ಬೇಜವಾಬ್ದಾರಿ ಪ್ರವಾಸಿಗರ ಕೊಡುಗೆಯೂ ಇದೆ. ಹಾಗಾಗಿ ನೈತಿಕ ಪ್ರವಾಸಿಗರಾಗಿ ಪ್ರಕೃತಿಯ ರಕ್ಷಣೆಗೆ ಪಣ ತೊಡುವುದು  ಇಂದಿನ ತುರ್ತು. 

ಲಿಮಿಟೆಡ್ ಬಜೆಟ್‌ನಲ್ಲಿ ವಿಶ್ವ ಪರ್ಯಟನೆ ಮಾಡುವುದು ಹೇಗೆ?

ಪ್ರವಾಸದಲ್ಲಿ ನೈತಿಕ ಪ್ರಜ್ಞೆ ಮೆರೆಯಲು ನೀವೇನೇನು ಮಾಡಬಹುದು?

1. ಪುನರ್ಬಳಕೆಯ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ.

ಪ್ರವಾಸಕ್ಕೆ ಹೋದಾಗ ಶಾಪಿಂಗ್ ಮಾಡದವರಾರಿದ್ದಾರೆ? ಆದರೆ ಪ್ರವಾಸಕ್ಕೆ ಹೋಗುವ ಮುಂಚೆಯೇ ಒಂದಿಷ್ಟು ಕ್ಯಾರಿಬ್ಯಾಗ್ ತೆಗೆದುಕೊಂಡು ಹೋಗಲು ಮಾತ್ರ ಬಹುತೇಕರಿಗೆ ನೆನಪಾಗುವುದಿಲ್ಲ. ಎಲ್ಲವನ್ನೂ ತುಂಬಿಕೊಳ್ಳಲು ಪ್ಲ್ಯಾಸ್ಟಿಕ್ ಬ್ಯಾಗನ್ನು ತೆಗೆದುಕೊಂಡು ನಂತರ ಅದನ್ನು ಎಲ್ಲೆಂದರಲ್ಲಿ ಎಸೆದು ಖುಷಿಯಾಗಿ ಮನೆಗೆ ಮರಳುತ್ತಾರೆ. ಆದರೆ, ಪ್ಲ್ಯಾಸ್ಟಿಕ್ ಈ ಮಣ್ಣಿನಲ್ಲಿ ಮಣ್ಣಾಗಲು 10ರಿಂದ 1000 ವರ್ಷಗಳಷ್ಟು ಸಮಯ ಬೇಕು ಎಂಬುದು ನಿಮಗೆ ಗೊತ್ತೇ? ಮುಂದಿನ ಬಾರಿಯಿಂದ ಎಲ್ಲೇ ಪ್ರವಾಸ ಹೋಗುವುದಾದರೂ ಒಂದಿಷ್ಟು ಬಟ್ಟೆಯ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಿ. ಬಟ್ಟೆಯ ಬ್ಯಾಗ್‌ಗಳನ್ನು ಎಷ್ಟು ಬಾರಿ ಬೇಕಾದರೂ ಬಳಸಬಹುದಷ್ಟೇ ಅಲ್ಲ, ಅವು ಪರಿಸರಸ್ನೀಹಿ ಕೂಡಾ. 

2. ಮರುಬಳಕೆಯ ಬಾಟಲ್

ಮೇಲಿನ ಈ ನಿಯಮ ಪ್ಲ್ಯಾಸ್ಟಿಕ್ ನೀರಿನ ಬಾಟಲ್‌ಗಳಿಗೂ ಅನ್ವಯಿಸುತ್ತದೆ. ಪ್ಲ್ಯಾಸ್ಟಿಕ್ ಬಾಟಲ್ ಡಿಕಂಪೋಸ್ ಆಗಲು ಸುಮಾರು 450 ವರ್ಷಗಳು ಬೇಕಾಗುತ್ತದೆ. ಹೋದಲ್ಲೆಲ್ಲ ಒಂದು ನೀರಿನ ಬಾಟಲ್ ಕೊಳ್ಳುವ ಬದಲು, ಮನೆಯಿಂದಲೇ ಒಂದು ರಿಯುಸೇಬಲ್ ಬಾಟಲ್ ತೆಗೆದುಕೊಂಡು ಹೋಗಿ. ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಲ್ಲಿ ಶುದ್ಧೀಕರಿಸಿದ ನೀರು ಸಿಗುತ್ತದೋ ಅಲ್ಲೆಲ್ಲ ತುಂಬಿಸಿಕೊಳ್ಳಿ. ಇದರಿಂದ ಪರಿಸರಕ್ಕೆ ಒಳ್ಳೆಯದಷ್ಟೇ ಅಲ್ಲ, ನಿಮ್ಮ ಜೇಬಿಗೂ ಒಳ್ಳೆಯದೇ. 

3. ಪರಿಸರಸ್ನೇಹಿ ವಸತಿ

ಎಕೋಫ್ರೆಂಡ್ಲಿ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಹೋಟೆಲ್, ರೆಸಾರ್ಟ್‌ಗಳಲ್ಲಿ ಉಳಿಯುವ ಅಭ್ಯಾಸ ಮಾಡಿಕೊಳ್ಳಿ. ಜೈವಿಕ ವಸ್ತುಗಳ ಬಳಕೆ, ಪುನರ್ಬಳಕೆಯ ಶಕ್ತಿ, ರಿಸೈಕಲ್ ವ್ಯವಸ್ಥೆ ಅಳವಡಿಸಿಕೊಂಡಿರುವ ಹೋಟೆಲ್‌ಗಳನ್ನು ವಸತಿಗಾಗಿ ಆಯ್ಕೆ ಮಾಡಿಕೊಳ್ಳಿ. 

ಮಡಗಾಸ್ಕರ ದ್ವೀಪಕ್ಕೂ ಉಡುಪಿಯ ಸೈಂಟ್‌ ಮೇರಿಸ್‌ಗೂ ಏನು ಸಂಬಂಧ!

4. ಸಾರ್ವಜನಿಕ ವಾಹನ ಬಳಕೆ

ಬಹಳ ಹೊತ್ತಿನ ಫ್ಲೈಟ್ ಜರ್ನಿಯ ಬಳಿಕ ಕ್ಯಾಬ್ ಹತ್ತಿ ಮನೆಗೆ ಹೋಗಿ ಬಿಡೋಣ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ, ನಿಮ್ಮ ಕಾರ್ಬನ್ ಫೂಟ್‌ಪ್ರಿಂಟ್ ಕಡಿಮೆಗೊಳಿಸಲು ಇರುವ ಒಂದು ದಾರಿಯೆಂದರೆ ಸಾರ್ವಜನಿಕ ಸಾರಿಗೆಗಳ ಬಳಕೆ. ಇದರಿಂದ ಖರ್ಚೂ ಕಡಿಮೆಯಾಗುತ್ತದೆ. ಫ್ಯುಯೆಲ್ ಬಳಕೆಯೂ ಕಡಿಮೆಯಾಗುತ್ತದೆ. ಅಲ್ಪಸ್ವಲ್ಪ ದೂರ ಹೋಗುವಾಗಲೆಲ್ಲ ವಾಕ್ ಮಾಡುವುದು ಉತ್ತಮ. ಇದು ಸ್ಥಳವನ್ನು ಚೆನ್ನಾಗಿ ಪರಿಚಯಿಸುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. 

5. ಪ್ರತಿದಿನ ಫ್ರೆಶ್ ಲೆನಿನ್ ಬೇಕಿಲ್ಲ

ಒಳ್ಳೆಯ ಹೋಟೆಲ್‌ಗಳಲ್ಲಿ ಪ್ರತಿದಿನ ಟವೆಲ್, ಹಾಸುವ ಬಟ್ಟೆಗಳು, ಮ್ಯಾಟ್‌ಗಳು ಎಲ್ಲವನ್ನೂ ಬದಲಿಸಿ ಹೊಸತು ಕೊಡುತ್ತಾರೆ. ನಮಗೆ ಕೂಡಾ ಫ್ರೆಶ್ ಲಾಂಡ್ರಿ ಇಷ್ಟ. ಹಾಗಂಥ ಪ್ರತಿದಿನ ಇವನ್ನು ಬದಲಿಸಬೇಕಿಲ್ಲ. ಬಟ್ಟೆ ಪೂರ್ತಿ ಕೊಳೆಯಾಗಿದ್ದರೆ ಮಾತ್ರ ಲಾಂಡ್ರಿಗೆ ಕಳುಹಿಸಿ. ಇಲ್ಲದಿದ್ದಲ್ಲಿ ಮೂರ್ನಾಲ್ಕು ದಿನಗಳವರೆಗೆ ಅದನ್ನು ಬಳಸಬಹುದು. ಹೀಗೆ ಲಾಂಡ್ರಿ ಲೋಡ್ ಕಡಿಮೆ ಮಾಡುವುದರಿಂದ ಹೋಟೆಲ್ ಬಳಸುವ ವಸ್ತುಗಳನ್ನು ಕಡಿಮೆ ಮಾಡಬಹುದು. ಜೊತೆಗೆ, ವಿದ್ಯುತ್ ಉಳಿತಾಯವೂ ಆಗುತ್ತದೆ. 

ಏರ್‌ಲೈನ್ಸ್‌ನಲ್ಲಿ ಬಿಕಿನಿ ಬೆಡಗಿಯರು; ನಗ್ನರಾಗೋಕೆ ಇಲ್ಲಿದೆ ಸ್ವಾತಂತ್ರ್ಯ!

6. ಸ್ಥಳೀಯ ವಸ್ತುಗಳ ಶಾಪಿಂಗ್

ಪ್ರವಾಸ ಹೋದಾಗ ಶಾಪಿಂಗ್ ಮಾಡಲೇಬೇಕಿದ್ದರೆ ಸ್ಥಳೀಯ ಜನರು ತಯಾರಿಸಿದ ಕರಕುಶಲ ವಸ್ತುಗಳು, ಸ್ಥಳೀಯವಾಗಿ ಬೆಳೆದ ಹಣ್ಣುತರಕಾರಿಗಳನ್ನು ಖರೀದಿಸಿ. ಇದರಿಂದ ಸ್ಥಳೀಯ ಬದುಕಿನ ಮೇಲೆ ಪಾಸಿಟಿವ್ ಪರಿಣಾಮ ಬೀರುವ ಜೊತೆಗೆ ನಿಮಗೂ ಫ್ರೆಶ್ ಇರುವ, ಪ್ರಾದೇಶಿಕ ಸೊಗಡು ಹೊಂದಿರುವ ವಸ್ತುಗಳು ದೊರೆಯುತ್ತವೆ. 

7. ನಿಮ್ಮ ಟ್ರೇಸ್ ಉಳಿಸಬೇಡಿ

ಎಲ್ಲಿಯೇ ಹೋದರೂ ಏನೆಲ್ಲ ತೆಗೆದುಕೊಂಡು ಹೋಗಿರುತ್ತೀರೋ ಅವನ್ನು ನಿಮ್ಮೊಂದಿಗೆ ತನ್ನಿ. ಕಾಡುಗಳಲ್ಲಿ, ಸುಂದರ ಪ್ರದೇಶಗಳಲ್ಲಿ ಯಾವ ವಸ್ತುಗಳನ್ನೂ ಬಿಟ್ಟು ಬರಬೇಡಿ. ಕಾಡಿನಲ್ಲಿ ಶೌಚ ಮಾಡಬೇಕಾಗಿ ಬಂದರೆ ನೀರಿನ ಮೂಲದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ಮಣ್ಣನ್ನು ಅಗೆದು ಬಳಸಿ, ಮುಚ್ಚಿಹಾಕಿ. ಕಾಡುಪ್ರಾಣಿಗಳಿಗೆ ಆಹಾರ ನೀಡುವುದು, ಇರುವ ದಾರಿ ಬಿಟ್ಟು ಬೇರೆ ಹಾದಿಯಲ್ಲಿ ಸಾಗುವುದು ಒಳ್ಳೆಯ ಅಭ್ಯಾಸವಲ್ಲ.