ಕೆಲ ಊರುಗಳಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಿರಬಹುದು. ಆದರೆ, ಕೇವಲ ಸಸ್ಯಾಹಾರ ಮಾತ್ರ ಸೇವಿಸುವ ಒಂದಿಡೀ ನಗರ ಎಲ್ಲಾದರೂ ಸಿಗಬಹುದೇ? ಇಂಥ ವಿಶೇಷತೆ ಏನಾದರೂ ಸಿಕ್ಕರೆ ಅದು ಗುಜರಾತ್‌ನ ಪಲಿತಾನದಲ್ಲಿ ಮಾತ್ರ ಸಿಗಲು ಸಾಧ್ಯ. 

ಹೌದು, ಈ ನಗರದಲ್ಲಿ ಒಂದೇ ಒಂದು ಮಾಂಸದ ಅಂಗಡಿಗಳಿಲ್ಲ, ಯಾವ ಅಂಗಡಿಯಲ್ಲೂ ಮೊಟ್ಟೆ ಮಾರಾಟವಿಲ್ಲ, ಪ್ರಾಣಿಗಳನ್ನು ತಿನ್ನುವ ಸಲುವಾಗಿ ಕೊಲ್ಲುವುದಿಲ್ಲ. ಇದೇ ಜಗತ್ತಿನ ಏಕೈಕ ಸಸ್ಯಾಹಾರಿ ನಗರ ಪಲಿತಾನ. 

ಸ್ಮಶಾನದಲ್ಲಿರೋ 'ಲಕ್ಕಿ' ರೆಸ್ಟೋರೆಂಟ್ ಇದು!

ಪಲಿತಾನಾ ಎಲ್ಲಿದೆ?

ಗುಜರಾತ್‌ನ ಭವನಗರ ಜಿಲ್ಲಾಕೇಂದ್ರದಿಂದ 50 ಕಿಲೋಮೀಟರ್ ದೂರದಲ್ಲಿರುವ ಪಲಿತಾನದಲ್ಲಿ ಮಾಂಸ ಮಾರಾಟ ಹಾಗೂ ಸೇವನೆ ಕಾನೂನು ಬಾಹಿರ. ಈ ನಗರದಲ್ಲಿ ಪ್ರಾಣಿಹತ್ಯೆಯನ್ನು ಸರ್ಕಾರವೇ ನಿಷೇಧಿಸಿದೆ. ಕಾರಣ?  ಇದು ಅಪ್ಪಟ ಸಸ್ಯಾಹಾರ ರೂಢಿಸಿಕೊಂಡಿರುವ ಜೈನರಿಗೆ ಪವಿತ್ರ ಕ್ಷೇತ್ರ. ಪ್ರಮುಖ ಯಾತ್ರಾಸ್ಥಳ. ವಿಶ್ವದಲ್ಲಿ ಜೈನರ ಒಟ್ಟಾರೆ ಜನಸಂಖ್ಯೆ 50ರಿಂದ 60 ಲಕ್ಷವಷ್ಟೇ ಆದರೂ, ಪಲಿತಾನದಲ್ಲಿ ಅವರ ಸಂಖ್ಯೆ ಹೆಚ್ಚು. 900 ದೇವಾಲಯಗಳ ಗುಚ್ಛ ಹೊಂದಿದ ವಿಶ್ವದ ಏಕೈಕ ಪರ್ವತ ನಗರಿ ಎಂಬ ಹೆಗ್ಗಳಿಕೆಯಿಂದ ಕೂಡಿರುವ ಪಲಿತಾನವು, ಅತಿದೊಡ್ಡ ದೇವಾಲಯಗಳ ಸಂಕೀರ್ಣ ಹೊಂದಿದೆ ಎಂಬ ಹೆಮ್ಮೆಯೊಂದಿಗೆ ಬೀಗುತ್ತಿದೆ. 

ಯಾವಾಗಿಂದ ಮಾಂಸ ನಿಷೇಧ?

2014ರಲ್ಲಿ ಸುಮಾರು 200 ಜೈನ ಸನ್ಯಾಸಿಗಳು ಪ್ರಾಣಿಹತ್ಯೆಯನ್ನು ಈ ನಗರದಲ್ಲಿ ನಿಲ್ಲಿಸಬೇಕೆಂದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದರು. ತಮ್ಮ ಪವಿತ್ರ ನಗರದಲ್ಲಿ ಪ್ರಾಣಿಹತ್ಯೆ ಅಥವಾ ಸೇವನೆಯನ್ನು ಒಪ್ಪಿಕೊಳ್ಳುವುದಕ್ಕಿಂತ ಉಪವಾಸವಿದ್ದು ಸಾಯುವುದೇ ಮೇಲು, ಪ್ರಾಣಿ ಹತ್ಯೆ ಹಾಗೂ ಸೇವನೆ ತಮ್ಮ ನಂಬಿಕೆಗೆ ವಿರುದ್ಧವಾದುದು, ಇದನ್ನು ಗೌರವಿಸಬೇಕು ಎಂದು ಹಟ ಹಿಡಿದಿದ್ದರು. ಆ ಬಳಿಕ, ಅವರ ಬೇಡಿಕೆಗೆ ಸರ್ಕಾರ ಕಿವಿಗೊಟ್ಟಿತು. ನಗರದಲ್ಲಿ ಪ್ರಾಣಿಹತ್ಯೆಯನ್ನು ನಿಷೇಧಿಸಲಾಯಿತು. ಅಷ್ಟೇ ಅಲ್ಲ, ಸುಮಾರು 250ರಷ್ಟಿದ್ದ ಮಾಂಸದ ಅಂಗಡಿಗಳಿಗೆ ಪರಿಹಾರ ಒದಗಿಸಿ, ಮಾರಾಟಗಾರರ ಮನವೊಲಿಸಿ, ಬೇರೆ ಉದ್ಯಮ ಕೈಗೊಳ್ಳುವಂತೆ ನೋಡಿಕೊಳ್ಳಲಾಯಿತು. ಈಗ ಇಲ್ಲಿ ಮೊಟ್ಟೆ, ಮಾಂಸ ಮಾರುವುದು ಅಥವಾ ಪ್ರಾಣಿಗಳನ್ನು ಕಡಿಯುವುದರಲ್ಲಿ ಭಾಗಿಯಾಗುವುದು ಕಾನೂನುಬಾಹಿರವಾಗಿದೆ. ಹೀಗಾಗಿ, 2014ರ ಬಳಿಕ ಇಲ್ಲಿ ಒಂದೇ ಒಂದು ಸಣ್ಣ ಪ್ರಾಣಿಯ ಹತ್ಯೆಯೂ ನಡೆದಿಲ್ಲ. 

ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

ಕಾರಣ?

ಜೈನ ಸನ್ಯಾಸಿಗಳ ಈ ಸತ್ಯಾಗ್ರಹಕ್ಕೆ ಪ್ರಮುಖ ಕಾರಣ, ಮುಂಚೆಯೇ ಹೇಳಿದಂತೆ ನಗರದಲ್ಲಿ ಸಾವಿರಾರು ವರ್ಷ ಪುರಾತನ 1300ಕ್ಕೂ ಅಧಿಕ ಜೈನ ದೇವಾಲಯಗಳಿರುವುದು. ಅವರು ನಂಬಿರುವ ಆದಿನಾಥ ಪಲಿತಾನಾದ ಬೆಟ್ಟಗುಡ್ಡಗಳ ಮೇಲೆ ಓಡಾಡಿರುವುದರಿಂದ ಜೈನರಿಗೆ ಇದೊಂದು ಬಹಳ ಪವಿತ್ರ ಕ್ಷೇತ್ರ ಎನಿಸಿಕೊಂಡಿದೆ. ಇಲ್ಲಿನ ಶತೃಂಜಯ ಮಹಾತೀರ್ಥ ಬೆಟ್ಟದ ಮೇಲೆ ಕಲ್ಲಿನ ಜೈನ ದೇವಾಲಯಗಳಿವೆ. ಇಲ್ಲಿ ಜೈನ ತೀರ್ಥಂಕರ ಹಾಗೂ ಪಲಿತಗೆ ಮೀಸಲಿರುವ ಮುಖ್ಯ ದೇವಾಲಯಗಳಿವೆ. 591 ಮೀಟರ್ ಎತ್ತರದ ಶತೃಂಜಯ ಬೆಟ್ಟ ಹತ್ತಲು 4 ಕಿಲೋಮೀಟರ್ ಕ್ರಮಿಸಬೇಕು. ನಡೆಯಲು ಕಷ್ಟ ಎನ್ನುವವರಿಗಾಗಿ ಆನೆಗಳು, ಡೋಲಿ ಹಾಗೂ ಲಿಫ್ಟ್ ಚೇರ್‌ಗಳ ವ್ಯವಸ್ಥೆಯಿದೆ. ನಿಮ್ಮ ಆಹಾರ ಆಯ್ಕೆ ಏನೇ ಇರಲಿ, ಶಾಂತಿ ಹಾಗೂ ಪರಿಸರ ಪ್ರಿಯರು ಭೇಟಿ ನೀಡಲೇ ಬೇಕಾದ ನಗರ ಪಲಿತಾನಾ ವಾಗಿದೆ.

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಪಲಿತಾನಕ್ಕೆ ಸ್ಪರ್ಧೆ

ಪಲಿತಾನದ ಬಳಿಕ ಸಸ್ಯಾಹಾರಿ ನಗರ ಎಂಬ ಹೆಗ್ಗಳಿಕೆ ಇರುವುದು ಇಸ್ರೇಲಿನ ಟೆಲ್ ಅವೀವ್. ಇದು ಕೂಡಾ ಅತಿ ಹೆಚ್ಚು ವೆಜಿಟೇರಿಯನ್‌ಗಳನ್ನು ಹೊಂದಿದ ನಗರ. ಇನ್ನು ಇಂಗ್ಲೆಂಡ್‌ನ ಬ್ರಿಸ್ಟಾಲ್ ಅತಿ ಹೆಚ್ಚು ವೇಗನ್‌ಗಳನ್ನು ಹೊಂದಿದ ನಗರ. ಇಲ್ಲಿ ಪ್ರಾಣಿ ಹಕ್ಕುಗಳ ಜಾಗೃತಿ ತಂಡ ಜೋರಾಗಿ ಕೆಲಸ ಮಾಡುತ್ತದೆ. ಇಲ್ಲಿನ ನಾಲ್ವರಲ್ಲಿ 3 ಸಚಿವರು ತಾವು ವೇಗನ್ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಪೋರ್ಟ್‌ಲ್ಯಾಂಡ್‌ ಕೂಡಾ ವೇಗನ್ ಫ್ರೆಂಡ್ಲಿ ಸಿಟಿ ಎನಿಸಿಕೊಂಡಿದ್ದು, ಇಲ್ಲಿ ವೇಗನ್ ಸಮ್ಮರ್ ಕ್ಯಾಂಪ್, ವೇಗನ್ ಶಾಪಿಂಗ್ ಮಾಲ್ ವೇಗನ್ ಸ್ಟ್ರಿಪ್ ಕ್ಲಬ್‌ಗಳಿವೆ. ಭಾರತದ ವಿಷಯಕ್ಕೆ ಬಂದರೆ ಇಲ್ಲಿನ ಜನಸಂಖ್ಯೆಯಲ್ಲಿ ಶೇ.20ರಷ್ಟು ಸಸ್ಯಾಹಾರಿಗಳಿದ್ದು, ಇಂಡೋರ್(ಶೇ.49), ಮೀರತ್(ಶೇ.36), ದೆಲ್ಲಿ(ಶೇ.30)ಯಲ್ಲಿ ಹೆಚ್ಚು ಸಸ್ಯಾಹಾರಿಗಳಿದ್ದಾರೆ.