ನಿಜ ಭಕುತಿಯ ತೋರಿದ ಮಹಾ ಜಂಗಮ!

12ನೇ ಶತನಮಾನದ ಬಸವಣ್ಣನಂತೆ ಜಗತ್ತಿನ ಮೂಲೆ ಮೂಲೆಗೆ ಸಂಚರಿಸಿ ಜನರಲ್ಲಿದ್ದ ಮೌಢ್ಯತೆಯನ್ನು ತೊಲಗಿಸಿ ನಿಜ ಜೀವನದ ಮೌಲ್ಯಗಳನ್ನು ತಿಳಿಸಿದ ಪಂಚಾಗಣಾಧೀಶ್ವರರಲ್ಲಿ ಕೊಟ್ಟೂರಿನ ಶ್ರೀಗುರುಬಸವೇಶ್ವರರೂ ಒಬ್ಬರು.

 

Significance of Kuttur Sri Guru Basaveshwara

ತನ್ನ ಅದಮ್ಯ ಭಕ್ತಿ, ಸಮಾನತೆಯ ಆಶಯಗಳನೊತ್ತ ಕೊಟ್ಟೂರಿನ ಶ್ರೀಗುರು ಬಸವೇಶ್ವರರು ಶೋಷಿತರ ಧ್ವನಿಯಾಗಿ ಸಾಮಾಜಿಕ ಹರಿಕಾರನಾಗಿ, ಡಾಂಬಿಕ ಭಕ್ತಿ, ಮೂಢನಂಬಿಕೆಯನ್ನು ತನ್ನ ಜೀವನ ದರ್ಶನದ ಮೂಲಕ ಸಾಮಾನ್ಯ ಜನತೆಗೆ ಮನಸ್ಸಿನಿಂದ ಕಿತ್ತೊಗೆದು ಮಾನವೀಯತೆಯ ಬೀಜ ಬಿತ್ತಿದ ಮಹಾಶರಣರು. 12ನೇ ಶತನಮಾನದ ಬಸವಣ್ಣನಂತೆ ಪಂಚಗಣಾಧೀಶ್ವರರು ಕೂಡ ಜಗತ್ತಿನ ಮೂಲೆ ಮೂಲೆಗೆ ಸಂಚರಿಸಿ ಜನತೆಯಲ್ಲಿದ್ದ ಮೌಢ್ಯತೆಯನ್ನು ತೊಲಗಿಸಿ ನಿಜ ಜೀವನದ ಮೌಲ್ಯಗಳನ್ನು ತಿಳಿಸಿದವರು. ಕೊಟ್ಟೂರಿನ ಗುರುಬಸವೇಶ್ವರ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಹರಪನಹಳ್ಳಿಯ ಕೆಂಪಯ್ಯ, ಅರಸೀಕೆರೆಯ ಕೋಲಶಾಂತೇಶ್ವರ, ಕೂಲಹಳ್ಳಿಯ ಮದ್ದಾನಸ್ವಾಮಿ ತಮ್ಮ ಜೀವನದ ಮೂಲಕ ಆದರ್ಶಗಳ ಮೂಲಕ ಅಂದು ಸಮಾಜದಲ್ಲಿ ಮನೆಮಾಡಿದ್ದ ಡಾಂಬಿಕ ಭಕ್ತಿಯನ್ನು ಖಂಡಿಸಿ ಸಮಸಮಾಜ ಕಟ್ಟುವಲ್ಲಿ ಶ್ರಮಿಸಿದ ದಾರ್ಶನಿಕರಾದರು.

ಪಂಚಗಣಾಧೀಶ್ವರರಲ್ಲಿ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ಪ್ರಮುಖರಾಗಿದ್ದು, ತನ್ನ ಇಚ್ಛಾಶಕ್ತಿ, ಮೌಲಿಕ ಜೀವನದ ಮೂಲಕ ಬದುಕಿನ ವಿವಿಧ ಆಯಾಮಗಳನ್ನು ಜನತೆಗೆ ತೋರಿಸಿಕೊಟ್ಟರೆ ಈತನ ದಿಟ್ಟ ನಿಲುವುಗಳು ಜನತೆಗೆ ಪವಾಡಗಳಂತೆ ಗೋಚರಿಸಿದವು. ಮನುಷ್ಯನಲ್ಲಿ ಇಚ್ಛಾಶಕ್ತಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಶ್ರೀ ಗುರು ಬಸವೇಶ್ವರ ಸಾಕ್ಷಿಯಾಗಿದ್ದಾನೆ. ಕೊಟ್ಟೂರಿನ ಮೊದಲ ಹೆಸರು ಶಿಖಾಪುರ ಎಂದು ಕರೆಯುತ್ತಿದ್ದು ಶ್ರೀ ಗುರು ಬಸವೇಶ್ವರ ಭಕ್ತರಿಗೆ ವರವನ್ನು ಕೊಟ್ಟು ಹರಸಿದ್ದರಿಂದ ಶಿಖಾಪುರ ಕೊಟ್ಟೂರು ಎಂದು ಬದಲಾಯಿತು ಎಂದು ಪುರಾಣಗಳಿಂದ ಜನಪದ ದಾಖಲೆಗಳ ಮೂಲಕ ತಿಳಿದು ಬರುತ್ತದೆ. ಶ್ರೀ ಗುರುಬಸವೇಶ್ವರ ಎನ್ನುವ ಶರಣ ಕೊಟ್ಟೂರಿನಲ್ಲಿ ನೆಲೆಸಿದ್ದರಿಂದ ಕೊಟ್ಟೂರಿನ ಈಶನಾದನು ನಂತರ ಕೊಟ್ಟೂರೇಶ, ಕೊಟ್ಟೂರೇಶ್ವರನಾಗಿ ಈಗ ರಾಜ್ಯ, ದೇಶಾದ್ಯಂತ ಶರಣನೊಬ್ಬ ಭಕ್ತರ ಆರಾಧ್ಯದೇವನಾಗಿ ೪ ಮಠಗಳಲ್ಲಿ ಪೂಜಿಸಲ್ಪಡುತ್ತಿದ್ದಾನೆ.

ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ?

ಅಂದಿನ ಶಿಖಾಪುರ ಅಂದರೆ ಈಗಿನ ಕೊಟ್ಟೂರಿನಲ್ಲಿ ಹುಚ್ಚನ ವೇಷಧರಿಸಿ ಅಂದು ಮಹಿಳೆಯರ ಮೇಲೆ, ಶೋಷಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸಿ ಜಗದ ಹುಚ್ಚನ್ನು ಬಿಡಿಸಿದ ಎಷ್ಟೋ ನಿದರ್ಶನಗಳನ್ನು ನಾವು ಕಾಣಬಹುದು. ಬಟ್ಟೆಯಿಲ್ಲದೇ ಶಿಖಾಪುರದಲ್ಲಿ ತಿರುಗುತ್ತಿದ್ದಾಗ ಇಲ್ಲಿಯ ಕೆಲವು ಸ್ತ್ರೀಯರು ನಾಚಿಕೆ ಇಲ್ಲದ ಭಂಡ ಜಂಗಮ ಎಂದು ಮೂದಲಿಸಿದರು. ಆದರೆ ಸೋಮವ್ವ ಎಂಬ ಸಾಮಾನ್ಯ ಮಹಿಳೆ ತನ್ನ ಸೀರೆ ಸೆರಗನ್ನೇ ಹರಿದು ಜಂಗಮ ವೇಷಧಾರಿ ಬಸವೇಶ್ವರನಿಗೆ ಕೊಟ್ಟಳು. ಸೋಮವ್ವನ ಪತಿ ನಿನಗೆ ಬಡಜಂಗಮಗೆ ಏನು ಸಂಬಂಧ ಎಂದು ಹೊಡೆಯಲು ಮುಂದಾದಾಗ ಸೋಮವ್ವನ ಪತಿಗೆ ಪತ್ನಿಯ ನಿಜ ಭಕ್ತಿ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಬಡಜಂಗಮ ಮುಂದೆ ನಂಬಿಯಕ್ಕ ಎನ್ನುವ ಶಿವಶರಣೆಯರ ಮನೆಯಲ್ಲಿ ದನಗಾಹಿಯಾಗಿ ಸೇರಿಕೊಂಡು ಅಲ್ಲಿಯೂ ಕೂಡ ತನ್ನ ನಿಜಭಕ್ತಿಯಿಂದ ನಂಬಿಯಕ್ಕನನ್ನು ಅಚ್ಚರಿಗೊಳಿಸಿದ. ಈಗೇ ಇಂತಹ ನೂರಾರು ಬದುಕಿನ ವಿಸ್ಮಯಗಳನ್ನು ತೋರಿಸಿಕೊಡುವುದರ ಮೂಲಕ ಇಲ್ಲಿಯ ಜನತೆಗೆ ಭಕ್ತಿ, ನಿಜಜೀವನದ ಮೌಲ್ಯಗಳನ್ನು ಬಿತ್ತುವಲ್ಲಿ ಯಶಸ್ವಿಯಾದನು.

ದಿಲ್ಲಿಯ ರಾಜ ಅಕ್ಬರ್‌ನಿಗೆ ಅಚ್ಚರಿ ಮೂಡಿಸಿದ ಬಸವೇಶ್ವರ : ಮೊಗಲರ ದೊರೆ ಅಕ್ಬರ ಬಾದಶಹನ ಆಸ್ಥಾನಕ್ಕೆ ನಿರಾಕಾರ ರೂಪನಾಗಿ ರಾಣಿಯರ ಅಂತಃಪುರ ಪ್ರವೇಶಿಸಿದನು ಇದರಿಂದ ಕುಪಿತನಾದ ಅಕ್ಬರ ದೊರೆ ಜಂಗಮನ ಮೇಲೆ ಖಡ್ಗವನ್ನು ಎತ್ತಲು ಹೋದಾಗ ಅಕ್ಬರ್‌ನಿಗೆ ಅಲ್ಲಿ ನಿಜಭಕ್ತಿಯ ದರ್ಶನವಾಗಿದೆ ಈಗಾಗಿ ಅಕ್ಬರ್ ಕೂಡಲೇ ಶ್ರೀಗುರು ಬಸವೇಶ್ವರನ ಪಾದಕ್ಕೆ ಎರಗಿದನು. ನಂತರ ಬಸವೇಶ್ವರ ಪವಡಿಸಿದ ಅಕ್ಬರ್‌ನ ಮಣಿಮಂಚವನ್ನು ತನ್ನ ರಾಣಿಯರು, ಸ್ನೇಹಿತರೊಡಗೂಡಿ ಶಿಖಾಪುರ ಈಗಿರುವ ಕೊಟ್ಟೂರಿಗೆ ಬಂದು ಶ್ರೀಗುರು ಬಸವೇಶ್ವರನಿಗೆ ಅರ್ಪಿಸಿದ ಪ್ರಸಂಗ ನಡೆಸಿದ್ದು ಇಂದಿಗೂ ಕೂಡ ಕೊಟ್ಟೂರಿನ ಶ್ರೀ ಗುರು ಬಸವೇಶ್ವರ ದೇವಾಲಯದಲ್ಲಿ ಅಕ್ಬರನು ನೀಡಿದ ಮಣಿಮಂಚವನ್ನು ಕಾಣಬಹುದು. ಶ್ರೀಗುರು ಬಸವೇಶ್ವರನ ಜೀವನ ಮೌಲ್ಯಗಳು ಮೇಲ್ನೋಟಕ್ಕೆ ಪವಾಡಗಳಂತೆ ಪುರಾಣಗಳಲ್ಲಿ ಬಿಂಬಿಸಿದ್ದರೂ ಧಾರ್ಮಿಕ ಮತ್ತು ಐತಿಹಾಸಿಕವಾಗಿಯೂ ಕೆಲವೊಂದು ಸ್ಪಷ್ಟ ದಾಖಲೆಗಳು ಐತಿಹ್ಯಗಳು ದೊರೆಯುತ್ತವೆ. ಇಲ್ಲಿಯ ಜನಪದರ ಮುತ್ತಿಗೆ ಪದಗಳಲ್ಲಿಯೂ ಕೂಡ ಶ್ರೀ ಗುರು ಬಸವೇಶ್ವರನ ಸಮ ಸಮಾಜ ಹಾಗೂ ಅಸ್ಪಶ್ಯತೆಯ ವಿರುದ್ಧ ಹೋರಾಟ ಮಾಡಿದ ನೂರಾರು ಘಟನೆಗಳು ಸಿಗುತ್ತವೆ. ಸ್ಥಳೀಯ ಕುಟುಂಬಗಳ ಹೆಸರಗಳು ಕೂಡ ದಾಖಲಾಗಿವೆ.

ಪಾಳೇಗಾರರಿಗೂ ವರದೇವನಾದ ಶ್ರೀ ಗುರು ಬಸವೇಶ್ವರ: ಪಾಳೇಗಾರರ ಕಾಲದಲ್ಲಿ ಕೊಟ್ಟೂರು ಹರಪನಹಳ್ಳಿ ಪಾಳೇಗಾರರ ವ್ಯಾಪ್ತಿಯಲ್ಲಿತ್ತು ಎಂಬುದಕ್ಕೆ ಹರಪನಹಳ್ಳಿ ಸೋಮಶೇಖರ ರಾಜ ಇತಿಹಾಸ ತೆಗೆದರೆ ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಅಲ್ಲಿ ಪ್ರಮುಖಪಾತ್ರ ವಹಿಸುತ್ತಾನೆ. ಚಿತ್ರದುರ್ಗದ ಪಾಳೇಗಾರರಾದ ಸಿದ್ದೋಜಿ, ಮುರಾರಿ ಕೊಟ್ಟೂರು ಪಟ್ಟಣದ ಮೇಲೆ ದಂಡೆತ್ತಿ ಬಂದಾಗ ಹರನಪಹಳ್ಳಿ ರಾಜ ಸೋಮಶೇಖರ ಶ್ರೀಗುರು ಬಸವೇಶ್ವರನ ಮೊರೆ ಹೋಗಿ ಬೇಡಿಕೊಂಡಾಗ ಚಿತ್ರದುರ್ಗದ ಪಾಳೇಗಾರರು ಕೊಟ್ಟೂರನ್ನು ವಶಕ್ಕೆ ಪಡೆಯದೇ ಶ್ರೀಗುರು ಬಸವೇಶ್ವರನ ದರ್ಶನ, ವಿಸ್ಮಯಗಳಿಗೆ ಬೆರಾಗಾಗಿ ಹಾಗೇಯೇ ವಾಪಾಸ್ಸು ಹೋದ ಪ್ರಸಂಗವನ್ನು ಇಲ್ಲಿಯ ಜನಪದ ಬಾಯಿಂದ ಬಂದ ಮುತ್ತಿಗೆ ಪದಗಳ ಮೂಲಕ ಸ್ಪಷ್ಟವಾಗಿ ತಿಳಿಯುತ್ತದೆ. ಈಗೇ ಒಂದು ಕಡೆ ಜನತೆಯನ್ನು ಎಚ್ಚರಿಸುವ ಕಾಯಕವನ್ನೇ ಮಾಡಿಕೊಂಡ ಬಂದ ಬಸವೇಶ್ವರ ಮತ್ತೊಂದು ಕಡೆ ಸಾಮಾನ್ಯ ಜನತೆಗೆ ಈತನ ನಿಜಜೀವನ ಪವಾಡಗಳೆಂಬಂತೆ ಕಂಡು ದೇವಮಾನವನಾಗಿ ರೂಪುಗೊಂಡ ಬಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

 

Latest Videos
Follow Us:
Download App:
  • android
  • ios