‘ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೇ ಚಂದ..’ ಈ ಹಾಡು ಬಂದಾಗಲೆಲ್ಲ ಒಂದು ಬೆಚ್ಚನೆಯ ಚಳಿಗಾಲದ ಮುಂಜಾವು ನೆನಪಾಗುತ್ತದೆ. ಮುಂಜಾನೆ ಎದ್ದಾಗ ಮೈ ಮುರಿಯಲು ಬಿಡದ ಚಳಿಯನ್ನು ಹಳಿದುಕೊಳ್ಳುತ್ತ ಬೆಚ್ಚಗಿನ ಚಹಾ ಕುಡಿದು ಮತ್ತದೇ ಚಳಿಗೆ ಸ್ವರ್ಗದ ಹಿತ ನೀಡಿದ್ದಕ್ಕೆ ಧನ್ಯವಾದ ಹೇಳುತ್ತಾ ದಿನ ಶುರು ಮಾಡುತ್ತೇವೆ ಅಲ್ಲವೇ.. ಆದರೆ ಇದು ನಮ್ಮೂರಲ್ಲಿ ಮಾತ್ರ! ಎಲ್ಲ ಊರಿನ ಚಳಿಗಾಲಗಳು ಇಷ್ಟೇ ಮೋಹಕವಾಗಿ, ಬೆಚ್ಚನೆಯ ಭಾವ ಕೊಡುವುದಿಲ್ಲ.

ಉದಾಹರಣೆಗೆ ಈಗ ನಾವಿರುವ ಊರಿನ ಚಳಿಗಾಲವನ್ನೇ ತೆಗೆದುಕೊಳ್ಳಿ. ಬರಿ ಮೈಯಷ್ಟೇ ಅಲ್ಲ ನರನಾಡಿಗಳನ್ನು ಗಡಗಡ ನಡುಗಿಸುವ ಚಳಿಯದು. ದೇಹದೊಳಗಿನ ಬಿಸಿ ರಕ್ತ ಸಹ ಮಂಜುಗಟ್ಟುತ್ತಿದೆಯೇನೋ ಎಂದೆನಿಸುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ ಸೊನ್ನೆ ಮುಟ್ಟಿದರೇನೇ ತಡೆದುಕೊಳ್ಳಲು ಆಗುವುದಿಲ್ಲ. ಇನ್ನು ಇಲ್ಲಿ -15 ಡಿಗ್ರಿ, -20 ಡಿಗ್ರಿ ಸರ್ವೇಸಾಮಾನ್ಯವಾಗಿರುತ್ತದೆ. ಇಂತಹ ಚಳಿಯಲ್ಲಿ ಹಾಸಿಗೆ ಅಥವಾ ಸೋಫಾದಿಂದ ಎದ್ದು ನಿತ್ಯ ಕರ್ಮ, ಊಟಸಹ ಮಾಡಲಾಗದ ಮೈ ಭಾರ! ಇನ್ನು ಹೊರಗೆ ಸುತ್ತಾಡಲು ಹೋಗುವುದು ಅಥವಾ ಪ್ರವಾಸಕ್ಕೆ ಹೋಗುವುದೆಲ್ಲ ದೂರದ ಮಾತು. ಅಕ್ಟೋಬರ್‌ನಿಂದ ಸಣ್ಣಗೆ ಶುರುವಾಗುವ ಚಳಿ ನವೆಂಬರ್‌ ಮಧ್ಯದಲ್ಲಿ ಹೆಚ್ಚಾಗತೊಡಗಿ ಮುಂದಿನ ನಾಲ್ಕು ತಿಂಗಳು ಅಂದರೆ ಫೆಬ್ರವರಿಯವರೆಗೆ ಮೈನಸ್ನಲ್ಲಿಯೇ ಇರುತ್ತದೆ. ಮಾಚ್‌ರ್‍ ಬಂದಾಗ ಚಳಿಯ ಪ್ರಮಾಣ ಕಡಿಮೆಯಾಗತೊಡಗಿ ಅಂತೂ ಇಂತೂ ಏಪ್ರಿಲ್‌ನಲ್ಲಿ ಬೇಸಿಗೆ ಶುರುವಾಗುತ್ತದೆ. ಹಾಗಾಗಿ ಇಲ್ಲಿ ವಾಸಿಸುವರಿಗೆ ವರ್ಷದಲ್ಲಿ ನಾಲ್ಕರಿಂದ ಐದು ತಿಂಗಳು ಮನೆಯಲ್ಲೇ ಸೆರೆವಾಸ ಇದ್ದಂತೆ.

ಲಂಡನ್‌ನಲ್ಲಿ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ; ಕಲರ್‌ಫುಲ್‌ ಫೋಟೋಗಳು! 

2020ರ ಏಪ್ರಿಲ… ಬಂದಾಗ ಅಂತೂ ಇಂತೂ ಚಳಿ ಮುಗಿಯುತಲ್ಲ ಎಂದು ನಾವೆಲ್ಲಾ ಖುಷಿ ಪಟ್ಟರೂ ಈಗಲಾದರೂ ಹೊರಗೆ ಸುತ್ತಾಡಬಹುದಲ್ಲ ಎನ್ನುವ ನಮ್ಮ ಆಸೆ ಆಸೆಯಾಗಿಯೇ ಉಳಿಯಿತು. ಫೆಬ್ರವರಿಯಿಂದಲೇ ಶುರುವಾದ ಕೊರೋನಾ ಸೋಂಕು ನಮ್ಮ ಮನೆವಾಸವನ್ನು ಮುಂದುವರೆಸುವಂತೆ ಮಾಡಿತು. ಆಗಸ್ಟ್‌ ಬರುವಷ್ಟರಲ್ಲಿ ನಮ್ಮ ಮೈ ಮನಸುಗಳು ಜಡವಾಗಿಬಿಟ್ಟಿದ್ದವು. ಇನ್ನೆರಡು ತಿಂಗಳಲ್ಲಿ ಮತ್ತೆ ಚಳಿಯ ಆಗಮನವಾಗುತ್ತದೆ ಎನ್ನುವ ಕಲ್ಪನೆಯೇ ನಮ್ಮನ್ನು ನಡುಗಿಸಿಬಿಟ್ಟಿತ್ತು. ಆದರೇನು ಮಾಡುವುದು? ವಿಮಾನ ಪ್ರಯಾಣ ಮಾಡುವ ಹಾಗಿಲ್ಲ, ಹೋಟೆಲ್‌ಗಳಲ್ಲಿ ವಾಸಿಸುವ ಹಾಗಿಲ್ಲ, ಜನರ ಸಂಪರ್ಕಕ್ಕೆ ಬರುವ ಹಾಗಿಲ್ಲ, ಒಂದೇ ಎರಡೇ..

ಇದೇ ಕೊರಗಿನಲ್ಲಿ ದಿನ ಕಳೆಯುತ್ತಿದ್ದ ನಮಗೆ ಆಶಾಕಿರಣವಾಗಿ ಹೊಳೆದಿದ್ದು ‘ಆರ್‌ವಿ. ಪ್ರವಾಸ’. ಇಲ್ಲಿ ಅಮೆರಿಕದಲ್ಲಿ ಆರ್‌ವಿ ಎನ್ನುವ ಪ್ರವಾಸಾನುಕೂಲಿತ ವಾಹನಗಳು ಕಾಣಸಿಗುತ್ತವೆ. ನೋಡಲಿಕ್ಕೆ ನಮ್ಮೂರಿನ ಐರಾವತ ಬಸ್‌ ಅಥವಾ ದೊಡ್ಡ ಟೆಂಪೋಗಳಂತೆ ಕಾಣುವ ಈ ವಾಹನಗಳನ್ನು ಮೂವಿಂಗ್‌ ಹೋಂ (ಚಲಿಸುವ ಮನೆ) ಅಥವಾ ಹೋಂ ಆನ್‌ ವ್ಹೀಲ್ಸ್‌ (ಗಾಳಿ ಮೇಲಿನ ಮನೆ) ಎಂದೇ ಕರೆಯುತ್ತಾರೆ. ಈ ವಾಹನಗಳಲ್ಲಿ ನಿತ್ಯ ಜೀವನಕ್ಕೆ ಬೇಕಾದ ಎಲ್ಲ ಸವಲತ್ತುಗಳು ಇರುತ್ತವೆ. ಅಡುಗೆ ಮಾಡಿಕೊಳ್ಳಲು ಗ್ಯಾಸ್‌, ಸ್ಟವ್‌, ಫ್ರಿಡ್ಜ್‌, ಮೈಕ್ರೋ ಓವನ್‌, ಪಾತ್ರೆ ತೊಳೆಯಲು ಸಿಂಕ್‌, ನೀರಿನ ವ್ಯವಸ್ಥೆ, ಶೆಲ್ಫುಗಳು, ಚಳಿಗೆ ಹೀಟರ್‌, ಬೇಸಿಗೆಗೆ ಕೂಲರ್‌, ಸ್ನಾನಕ್ಕೆ ಮತ್ತು ನಿತ್ಯಕರ್ಮಕ್ಕೆ ಬಾತ್ರೂಮ…, ಮಲಗಲು ಬೆಡ್ರೂಮ…, ಬಟ್ಟೆಗಳನ್ನು ಇಟ್ಟುಕೊಳ್ಳಲು ಕಪಾಟುಗಳು, ಒಂದು ಇಡೀ ಕುಟುಂಬಕ್ಕೆ ಮಲಗಿಕೊಳ್ಳಲು ಸಾಧ್ಯವಾಗುವಂತೆ ಹಾಸಿಗೆಗಳು ಹೀಗೆ ಎಲ್ಲವೂ ಇರುತ್ತವೆ.

ನಮ್ಮಲ್ಲಿ (ನಮ್ಮೂರು ಧಾರವಾಡ) ಕಾರ್‌, ಬೈಕಗಳನ್ನು ಕೊಳ್ಳುವಂತೆ ಇಲ್ಲಿಯ ಜನರು ಆರ್‌ವಿ ಕೊಂಡುಕೊಳ್ಳುತ್ತಾರೆ. ತಮಗೆ ಬೇಕೆಂದಾಗಅದರಲ್ಲಿಯೇ ಪ್ರವಾಸಕ್ಕೆ ತೆರಳಿ ಹೋಟೆಲ…, ವಿಮಾನ ಇತ್ಯಾದಿಗಳ ಗೊಡವೆಯಿಲ್ಲದೆ ತಮಗೆ ಬೇಕೆಂದಂತೆ ವಿಹರಿಸುತ್ತಾರೆ. ನಮಗೆ ಇದರ ಬಗ್ಗೆ ಗೊತ್ತಿತ್ತಾದರೂ ಕೊರೋನಾ ಬರುವವರೆಗೂ ನಾವೂ ಆರ್‌ವಿ ಬಳಸಬಹುದಲ್ಲ ಎನ್ನುವ ವಿಚಾರವೇ ಬಂದಿರಲಿಲ್ಲ. ಈಗ ಆ ಯೋಚನೆ ಹೊಳೆದ ತಕ್ಷಣ ನಾವೆಲ್ಲಾ ಕಾರ್ಯಪ್ರವೃತ್ತರಾದೆವು. ಸಾಕಷ್ಟುಬ್ಲಾಗ್‌ಗಳನ್ನೂ, ಲೇಖನಗಳನ್ನು ಓದಿದ ಮೇಲೂ ನಮಗೆ ಧೈರ್ಯ ಬರಲಿಲ್ಲ. ಕಾರಣ ಅಷ್ಟುದೊಡ್ಡ ವಾಹನವನ್ನು ಓಡಿಸುವ ಅನುಭವ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಆರ್‌ವಿ ಓಡಿಸುವುದೆಂದರೆ ಒಂದು ಟ್ರಕ್‌ ಅಥವಾ ಬಸ್‌ ಓಡಿಸಿದಂತೆ. ಅದರ ಸುತ್ತಳತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ. ಅದೂ ಅಲ್ಲದೆ ನಾವು ಹೋಗಬೇಕೆಂದುಕೊಂಡಿದ್ದ ಯೆಲ್ಲೋಸ್ಟೋನ್‌ ನ್ಯಾಷನಲ… ಪಾರ್ಕ್ ನಾವು ಇರುವ ಊರಿನಿಂದ ಸುಮಾರು 24 ಗಂಟೆಯ ಹಾದಿ. ಪ್ರತಿದಿನ ಎಂಟು ಗಂಟೆಗಳ ಕಾಲ ಪ್ರಯಾಣ ಎಂದುಕೊಂಡರೂ ನಮಗೆ ಪಾರ್ಕ್ ತಲುಪಲು ಮೂರು ದಿನಗಳ ಅವಶ್ಯಕತೆಯಿತ್ತು!

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ! 

ಸಾಕಷ್ಟುವಿಡಿಯೋಗಳನ್ನು ನೋಡಿ ನಾವು ಆರ್‌ವಿ ಬಾಡಿಗೆಗೆ ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು. ನಾವು ಒಟ್ಟು 7 ಜನರಿದ್ದೆವು. ಅದರಲ್ಲಿ ನಾಲ್ಕು ಜನ ಆರ್‌ವಿ ಓಡಿಸುವ ಧೈರ್ಯ ಹೊಂದಿದವರು! ದಿನದ ಎಂಟು ಗಂಟೆಯಲ್ಲಿ ಒಬ್ಬೊಬ್ಬರಿಗೆ ಎರಡು ಗಂಟೆಗಳಷ್ಟುಡ್ರೈವಿಂಗ್‌ ಬರುತ್ತಿತ್ತು. ಹತ್ತು ದಿನಗಳ ಪ್ರವಾಸದ ಯೋಜನೆ ಜೊತೆಗೆ 10 ದಿನಗಳ ಕಾಲ ಊಟ ತಿಂಡಿಯ ವ್ಯವಸ್ಥೆಯೂ ಡಾಕ್ಯುಮೆಂಟಿನಲ್ಲಿ ಬಣ್ಣ ಬಣ್ಣದ ಧಿರಿಸು ಧರಿಸಿ ಕುಳಿತಿತು. ಕಿರಾಣಿ ಸಾಮಾನು, ತರಕಾರಿ, ಹಾಲು, ಚಹಾಪುಡಿ, ರೆಡಿಟು ಈಟ್‌ ತಿಂಡಿಗಳು, ರವಾ, ಅವಲಕ್ಕಿ ಹೀಗೆ ದೊಡ್ಡ ಪಟ್ಟಿಯೇ ಸಿದ್ಧವಾಯಿತು. ನಮ್ಮೆಲ್ಲರಿಗೂ ಇದು ಮೊದಲ ಬಾರಿಯಾದ್ದರಿಂದಎಲ್ಲರಿಗು ಕೊಂಚ ಅಧೈರ್ಯ, ಅವ್ಯಕ್ತ ಭಯ.

ಅಂತೂ ಇಂತೂ ನಮ್ಮ ಪ್ರವಾಸದ ದಿನ ಬಂದಿತು. ಮನೆಯ ಮುಂದೆ ದೈತ್ಯಾಕಾರದ ವಾಹನವೊಂದು ಬಂದು ನಿಂತಾಗ ನಮ್ಮೆಲ್ಲರಿಗೂ ಪುಳಕ. ಮೊದಮೊದಲು ಅದನ್ನು ಓಡಿಸುವಾಗ ತಿರುವಿನಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಓಡಿಸಿದಂತೆಲ್ಲ ಅಭ್ಯಾಸವಾಯಿತು. ಏಳು ಜನ ಅಷ್ಟುಇಕ್ಕಟ್ಟಾದ ಜಾಗದಲ್ಲಿ ವಾಸಿಸುವುದು ನಾವು ಅಂದುಕೊಂಡಷ್ಟುಸುಲಭವಾಗಿರಲಿಲ್ಲ. ಎಲ್ಲರಿಗು ಮಲಗಲು ಒಳ್ಳೆಯ ವ್ಯವಸ್ಥೆಯಿತ್ತಾದರೂ ಓಡಾಡುವಾಗ, ಅಡುಗೆ ಮಾಡುವಾಗ ಜಾಗ ಸಾಲದಾಗಿ ಒಬ್ಬರಿಗೊಬ್ಬರು ತಲೆ ಗುದ್ದಿಕೊಂಡಿದ್ದು, ಇರುವ ಒಂದೇ ಬಾತ್ರೂಮಿಗೆ ಏಳು ಜನರು ಸರತಿಗಾಗಿ ಕಾಯುತ್ತ ಅಂದುಕೊಂಡಿದ್ದ ವೇಳೆಗೆ ಸಿದ್ಧರಾಗದೇ ಇದ್ದದ್ದು ಹೀಗೆ ಒಂದಷ್ಟುಅಡೆತಡೆಗಳು ಉದ್ಭವಿಸಿದವಾದರೂ ಎಷ್ಟೇ ದಣಿವಾಗಿದ್ದರೂ ನಾವೇ ಅಡುಗೆ ಮಾಡಿ (ಪಾನಿಪುರಿ, ಭೇಲ… ಪುರಿಗಳನ್ನೂ ಮಾಡಿ!) ಹೊರಗಡೆ ಎಲ್ಲಿಯೂ ತಿನ್ನದೇ, ಜನರ ಸಂಪರ್ಕಕ್ಕೆ ಬರದೇ 10 ದಿನಗಳ ಪ್ರವಾಸದಲ್ಲಿ ಸಾವಿರಾರು ಮೈಲುಗಟ್ಟಲೆ ಹಬ್ಬಿಕೊಂಡಿರುವ ಯೆಲ್ಲೋಸ್ಟೋನ್‌ ಕಾಡನ್ನು, ರೋಡಿನಲ್ಲಿ ಅಚಾನಕ್ಕಾಗಿ ಎದುರಾಗುತ್ತಿದ್ದ ಕಾಡು ಪ್ರಾಣಿಗಳನ್ನು ನೋಡಿ ಖುಷಿ ಪಡುತ್ತಾ, ಹಿಮದಿಂದ ಆವರಿಸಿಕೊಂಡು ಸೂರ್ಯನ ಬಿಸಿಲಿಗೆ ಬೆಳ್ಳಿಯ ಪರ್ವತದಂತೆ ಹೊಳೆಯುತ್ತಿದ್ದ ಗ್ರಾಂಡ್ಟಿಟಾನಿನ ಪರ್ವತ ಶ್ರೇಣಿಗಳನ್ನು ನೋಡುತ್ತಾ ದಿನಗಳು ಹೇಗೆ ಕಳೆದವೆಂದು ಗೊತ್ತಾಗಲಿಲ್ಲ.

ಇಡೀ ಜೀವಮಾನದಲ್ಲಿಯೇ ಈ ಪ್ರವಾಸ ನಮ್ಮ ನೆನಪಿನಲ್ಲಿರುತ್ತದೆ. ಧೈರ್ಯ ಮಾಡಿ ಹೆಜ್ಜೆ ಮುಂದಿಟ್ಟಾಗಲೇ ಏಕತಾನತೆಯ ಜೀವನದಿಂದ ಹೊರಬಂದು ಸುಂದರ ನೆನಪುಗಳನ್ನು, ಅನುಭವಗಳನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಈ ಪ್ರವಾಸದಿಂದ ಮನದಟ್ಟಾಗಿದ್ದು ಸತ್ಯ.