Asianet Suvarna News Asianet Suvarna News

ಎವರೆಸ್ಟ್‌ನಿಂದ ಹಿಂತಿರುಗಿ ಬರುವಾಗಲೇ ಸಾವು ಯಾಕೆ?

ರ್ವತಾರೋಹಿಯೊಬ್ಬನ ಜೀವಮಾನದ ಕನಸು - ವಿಶ್ವದ ಅತೀ ಎತ್ತರದ ಶಿಖರ ಚೊಮೊಲುಂಗ್ಮಾ ಅರ್ಥಾತ್ ಮೌಂಟ್ ಎವೆರೆಸ್ಟ್‌ನ ತುತ್ತ ತುದಿಯನ್ನು ಚುಂಬಿಸಬೇಕು ಎಂಬುದು. ಈ ಬಾರಿ ಅಂಥಾ ಕನಸಿಗೆ ಜೀವವನ್ನೇ ಕೊಟ್ಟವರು ಹನ್ನೊಂದು ಜನ. ಬಲವಾದ ಶೀತಗಾಳಿ, ಹಿಮಪಾತ, ತಾಪಮಾನ ದಿಢೀರ್ ಕುಸಿತ ಮೊದಲಾದ ಕಾರಣಗಳಿಗೆ ಎವರೆಸ್ಟ್ ಪರ್ವತಾರೋಹಿಗಳು ಸಾವನ್ನಪ್ಪುವುದು ಸಾಮಾನ್ಯ. ಆದರೆ ಈ ಬಾರಿ ಈ ಹನ್ನೊಂದು ಜನ ಸಾವನ್ನಪ್ಪಿರುವುದಕ್ಕೆ ಕಾರಣ ಟ್ರಾಫಿಕ್ ಜ್ಯಾಮ್! 

Reason Behind Most Deaths Occur on Everest While Returning
Author
Bengaluru, First Published Jun 2, 2019, 3:32 PM IST

ಪರ್ವತಾರೋಹಿಯೊಬ್ಬನ ಜೀವಮಾನದ ಕನಸು - ವಿಶ್ವದ ಅತೀ ಎತ್ತರದ ಶಿಖರ ಚೊಮೊಲುಂಗ್ಮಾ ಅರ್ಥಾತ್ ಮೌಂಟ್ ಎವೆರೆಸ್ಟ್‌ನ ತುತ್ತ ತುದಿಯನ್ನು ಚುಂಬಿಸಬೇಕು ಎಂಬುದು. ಈ ಬಾರಿ ಅಂಥಾ ಕನಸಿಗೆ ಜೀವವನ್ನೇ ಕೊಟ್ಟವರು ಹನ್ನೊಂದು ಜನ.

ಬಲವಾದ ಶೀತಗಾಳಿ, ಹಿಮಪಾತ, ತಾಪಮಾನ ದಿಢೀರ್ ಕುಸಿತ ಮೊದಲಾದ ಕಾರಣಗಳಿಗೆ ಎವರೆಸ್ಟ್ ಪರ್ವತಾರೋಹಿಗಳು ಸಾವನ್ನಪ್ಪುವುದು ಸಾಮಾನ್ಯ. ಆದರೆ ಈ ಬಾರಿ ಈ ಹನ್ನೊಂದು ಜನ ಸಾವನ್ನಪ್ಪಿರುವುದಕ್ಕೆ ಕಾರಣ ಟ್ರಾಫಿಕ್ ಜ್ಯಾಮ್!

ಎವರೆಸ್ಟ್ ತುದಿಯಲ್ಲಿ 800 ಕ್ಕೂ ಹೆಚ್ಚು ಜನ:

ಕಳೆದ ವಾರ ಎವರೆಸ್ಟ್ ಶಿಖರದ ಮೇಲಿದ್ದ ಪರ್ವತಾರೋಹಿಗಳ ಚಿತ್ರವೊಂದು ಬಹಳ ಸದ್ದು ಮಾಡಿತು. ಬೆಳ್ಳನೆ ಮಂಜುಹೊದ್ದ ಬೆಟ್ಟಕ್ಕೆ ಬಣ್ಣ ಬಣ್ಣದ ಮಾಲೆ ತೊಡಿಸಿದ ಹಾಗಿತ್ತದು! ಆದರೆ ಅಲ್ಲಿನ ಸನ್ನಿವೇಶ ರಮ್ಯವಾಗಿರಲಿಲ್ಲ. ಈ ಬಾರಿ ಒಟ್ಟು 820 ಜನ ಎವೆರೆಸ್ಟ್ ಏರಲು ಸಜ್ಜಾಗಿದ್ದರು. ಮೇ 22 ರ ಒಂದೇ ದಿನ 270 ಕ್ಕೂ ಹೆಚ್ಚು ಪರ್ವತಾರೋಹಿಗಳು ಹಿಮರಾಶಿಯ ಕಡಿದಾದ ಹಾದಿಯಲ್ಲಿ ಗಂಟೆಗಟ್ಟಲೆ ನಿಂತಿದ್ದರು. ಎಂಥಾ ಅನುಭವಿ ಪರ್ವತಾರೋಹಿಗೂ ಅದು ಕಠಿಣ ಸವಾಲು.

‘ನಮ್ಮ ಎದೆಗೂಡಿನ ಮೇಲೆ ಆನೆ ನಿಂತ ಹಾಗಿತ್ತು. ಅಷ್ಟೊಂದು ಎದೆಭಾರ. ಉಸಿರಾಟದ ಕಷ್ಟ. ನಡೆಯುತ್ತಲೇ ಇದ್ದರೆ ಅಷ್ಟೇನೂ  ಸಮಸ್ಯೆಯಾಗಲ್ಲ. ಆದರೆ ಗಂಟಗಟ್ಟಲೆ ನಿಂತಿರುವಾಗ ಕೈ ಕಾಲುಗಳು ಮರಗಟ್ಟುತ್ತವೆ. ದೇಹ ಜಡವಾಡುತ್ತದೆ.

ಚೈತನ್ಯ ಕುಸಿಯುತ್ತದೆ.’ ಅಂತ ಆ ಅನುಭವವನ್ನು ಪರ್ವತಾರೋಹಿಯೊಬ್ಬರು ವರ್ಣಿಸುತ್ತಾರೆ. ಇವರಂತೆ ಅಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ಪರ್ವತಾರೋಹಿಗಳ ಮುಖವನ್ನು ಆಕ್ಸಿಜನ್ ಮಾಸ್ಕ್ ಕವರ್ ಮಾಡಿತ್ತು. ಅದರಡಿ ಅದುರುತ್ತಿದ್ದ ತುಟಿಗಳು, ಪಸೆಯಾರಿ ಮರಣದ ಚಿತ್ರ ಕಂಡಂತೆ ಬೆಚ್ಚಿ ದಣಿದ ಕಣ್ಣುಗಳು.

ಮಾರಣಾಂತಿಕವಾಗಿ ಕಾಡುವ ಹೈ ಆಲ್ಟಿಟ್ಯೂಡ್ ಸಮಸ್ಯೆ. ಕ್ಷಣ ಕ್ಷಣಕ್ಕೂ ಸಿಲಿಂಡರ್‌ನಲ್ಲಿ ಕಡಿಮೆಯಾಗುತ್ತಿದ್ದ ಆಕ್ಸಿಜನ್. ಈ ಪರಿಸ್ಥಿತಿಯಲ್ಲಿ ಅವರಿಗೆ ವಾಪಾಸ್ ಕ್ಯಾಂಪ್‌ಗೆ ಹಿಂತಿರುಗುವ ಅವಕಾಶ ಇದ್ದೇ ಇತ್ತು. ಆದರೆ ಅವರಲ್ಲಿ ಹೆಚ್ಚಿನವರು ತಮ್ಮಿಡೀ ದುಡಿಮೆಯ ಹಣವನ್ನು ಈ ಕನಸಿಗಾಗಿ ಮೀಸಲಿಟ್ಟವರು. ತಿಂಗಳಾನುಗಟ್ಟಲೆ ಕಠಿಣ ತರಬೇತಿ ಪಡೆದಿದ್ದರು. ಕಷ್ಟಪಟ್ಟು ರಜೆ ಹೊಂದಿಸಿದ್ದರು. ತಿರುಗಿ ಹೋದರೆ ಆ ಎಲ್ಲ ಶ್ರಮ ನೀರಲ್ಲಿ ಹೋಮ.

ಅವೆಲ್ಲಕ್ಕಿಂತ ಮುಖ್ಯವಾಗಿ ಇನ್ನೊಂಚೂರು ಹಾದಿ ಕ್ರಮಿಸಿದರೆ ಚೊಮೊಲುಂಗ್ಮಾದ ತುದಿ ಚುಂಬಿಸುವ ಕನಸು ನನಸಾದ ಹಾಗೆ. ದಟ್ಟ ಮಂಜಿನಿಂದ ಮುಚ್ಚಿರುವ ಶಿಖರದ ತುದಿ ಕುಸಿದುಬಿದ್ದ ಉತ್ಸಾಹಕ್ಕೆ ನೀರೆರೆಯುತ್ತಿತ್ತು. ಹಾಗಿದ್ದೂ ಈ ಜನದಟ್ಟಣೆ, ಹವೆಯಲ್ಲಿ ನಿಲ್ಲಲಾಗದೆ ನೂರಾರು ಜನ ಕ್ಯಾಂಪ್‌ಗೆ ವಾಪಾಸಾದರು. ಅವರ ಜೀವ ಉಳಿಯಿತು. 

ತುದಿಮುಟ್ಟದೇ ಬಂದವರ ಮಾತು

‘ಇದೊಂದು ಡೆತ್ ರೇಸ್. ಹುಚ್ಚಾಪಟ್ಟೆ ಟ್ರಾಫಿಕ್ ಜ್ಯಾಮ್ ಇದೆ. ಸಾಮರ್ಥ್ಯವಿಲ್ಲದಿದ್ದರೂ ಜನ ಬಲವಂತವಾಗಿ ಮೇಲೇರಲು ಹೊರಡುತ್ತಾರೆ. ತುದಿಯನ್ನೇನೋ ಮುಟ್ಟತ್ತಾರೆ. ಆದರೆ ವಾಪಾಸು ಬರುವ ಮೊದಲೇ ಸಾವನ್ನಪ್ಪುತ್ತಾರೆ’ ಎನ್ನುತ್ತಾರೆ ಆ್ಯಕ್ಸಿಜನ್ ಲೆವೆಲ್ ಕಡಿಮೆಯಾದ ಕಾರಣ ಎವರೆಸ್ಟ್ ತುದಿಯ ಸಮೀಪಕ್ಕೆ ಹೋಗಿ ಹಿಂದಿರುಗಿದ ಭಾರತೀಯ ಟ್ರೆಕ್ಕರ್ ರಿಝ್ಝಾ ಆಲಿ.

ಜರ್ಮನ್ ಪರ್ವತಾರೋಹಿ ಡೇವಿಡ್ ಕೊಟ್ಲರ್ ಅವರಂತೂ ಎವರೆಸ್ಟ್ ಪೀಕ್‌ಗಿಂತ ಕೆಲವು ನೂರು ಮೀಟರ್‌ಗಳ ಅಂತರವಷ್ಟೇ ಇರುವಾಗ ಜನದಟ್ಟಣೆ ಹಾಗೂ ಹವೆಯನ್ನು ಕಂಡು ಹಿಂತಿರುಗಿದವರು. ‘ಈ ಥರದ ಕ್ಯೂಈವರೆಗೆ ನೋಡಿಲ್ಲ. ನೂರಾರು ಜನ ಕ್ಯೂನಲ್ಲಿ ಬಾಕಿಯಾಗ್ತಾರೆ.

ಅಂಥ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಹೆಚ್ಚು ಬೇಕಾಗುತ್ತದೆ. ಆದರೆ ಕೆಲವರ ಬಳಿ ಹೆಚ್ಚುವರಿ ಸಿಲಿಂಡರ್ ಇರಲಿಲ್ಲ. ತರಬೇತಿ ಪಡೆದ ಶೆರ್ಪಾಗಳಿಲ್ಲದಿದ್ದರೂ ಸಮಸ್ಯೆಯಾಗುತ್ತೆ. ಅದಕ್ಕೆ ಎವರೆಸ್ಟ್ ಏರಬಯಸುವವರು ಉತ್ತಮ ಕಂಪೆನಿಗಳನ್ನೇ ನೋಡಿಕೊಳ್ಳಬೇಕು. ಕಡಿಮೆ ಆಫರ್‌ಗೆ ಬಲಿಬಿದ್ದು, ಸರಿಯಾದ ಸೌಲಭ್ಯಗಳಿಲ್ಲದ ಕಂಪೆನಿಗಳ ಮೂಲಕ ಎವರೆಸ್ಟ್ ಏರಲು ಹೋಗಿ ಜೀವ ಕಳೆದುಕೊಳ್ಳಬಾರದು. ’ ಎನ್ನುತ್ತಾರವರು.

ಈ ಬಾರಿ ಎವರೆಸ್ಟ್ ಏರಲು ಏಕಿಷ್ಟು ಜನ?

ಅನೇಕ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಎವರೆಸ್ಟ್ ಪರ್ವತಾರೋಹಣ ಮಾಡುವ ಅವಕಾಶ ನೀಡುತ್ತಿವೆ. 11 ಸಾವಿರ ಡಾಲರ್ ಮೊತ್ತವನ್ನು ನೇಪಾಳ ಸರ್ಕಾರಕ್ಕೆ ರಾಯಲ್ಟಿಯಾಗಿ ನೀಡಿದರೆ ಅದು ಪರ್ವತಾರೋಹಣಕ್ಕೆ ಅನುಮತಿ ನೀಡುತ್ತದೆ. ಈ ಬಾರಿ 44 ಟೀಮ್‌ಗಳ ಸುಮಾರು 381 ಪರ್ಮಿಟ್‌ಗಳನ್ನು ನೀಡಿದೆ.

ಇದರಲ್ಲಿ 820 ಜನ ಈ ಬಾರಿ ಶಿಖರಾರೋಹಣಕ್ಕೆ ಮುಂದಾಗಿದ್ದರು. ‘ಸರ್ಕಾರ ಹಣಕ್ಕಾಗಿ ಈ ರೀತಿ ಮಾಡೋದು ಎಷ್ಟೋ ಜನ ಜೀವದ ಜೊತೆಗೆ ಸರಸವಾಡುವಂತೆ ಮಾಡುತ್ತದೆ. ಎವರೆಸ್ಟ್ ಪರ್ವತಾರೋಹಿಗಳಿಗೆ ಕಠಿಣ ತರಬೇತಿ ನೀಡಬೇಕು’ ಎನ್ನುತ್ತಾರೆ ಪರ್ವತಾರೋಹಿ ಕುಲ್ಲೀಶ್.

ಅವರು ಕಳೆದ 5 ದಶಕಗಳಿಂದ ಎವರೆಸ್ಟ್ ಪರ್ವತಾರೋಹಣ ಮಾಡುತ್ತ ಬಂದವರು. ಹಾಗಿದ್ದರೂ ಎವರೆಸ್ಟ್ ಏರುವ ಮುನ್ನ ಎರಡು ತಿಂಗಳ ಮುಂಚೆಯೇ ಬೇಸ್ ಕ್ಯಾಂಪ್‌ಗೆ ಬರುತ್ತಾರೆ. ಇದರಿಂದ ದೇಹವೂ ಆ ಪರಿಸರದ ಜೊತೆಗೆ ಹೊಂದಿಕೊಳ್ಳಲು ಸುಲಭವಾಗುತ್ತದೆ ಅನ್ನೋದು ಅವರ ಅಭಿಪ್ರಾಯ.

ಡೆಡ್ಲಿಯೆಸ್ಟ್ 2019 ಎವರೆಸ್ಟ್ ಪರ್ವತಾರೋಹಣದ ಈವರೆಗಿನ ರೆಕಾರ್ಡ್ ಗಮನಿಸಿದರೆ ನಾಲ್ಕನೇ ಅತೀ ದೊಡ್ಡ ಮರಣ ಮೃದಂಗ ಈ ಬಾರಿಯದ್ದು. 2019 ನೇ ಇಸವಿ ಎವರೆಸ್ಟ್ ಪರ್ವತಾರೋಹಿಗಳಿಗೆ
ಡೆಡ್ಲಿಯೆಸ್ಟ್ ಅನಿಸಿದೆ. 1922 ರಿಂದ ಈವರೆಗೆ 5000 ದಷ್ಟು ಜನ ಎವರೆಸ್ಟ್ ಏರಿದ್ದಾರೆ. ಅದರಲ್ಲಿ 300 ಜನ ಸತ್ತಿದ್ದಾರೆ. ಅತೀ ಹೆಚ್ಚು ಜನ ಸತ್ತಿದ್ದು 1922 ರಲ್ಲಿ. ಸುಮಾರು ಇನ್ನೂರು ಜನ ಹಿಮಗಳಡಿ
ಕಣ್ಮರೆಯಾದರು.

ಅವರು ಮೊದಲ ಎವರೆಸ್ಟ್ ಪರ್ವತಾರೋಹಿಗಳು. ಇಂದಿಗೂ ಅವರ ಮೃತ ದೇಹ ಹಿಮದಡಿಯಲ್ಲೇ ಇದೆ. ಕಳೆದ ವರ್ಷ 5 ಜನರನ್ನು ಎವರೆಸ್ಟ್ ಬಲಿ ಪಡೆದಿತ್ತು. ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ತಲಾ ಆರು ಮಂದಿ ಮೃತಪಟ್ಟಿದ್ದರು. 

- ಪ್ರಿಯಾ ಕೇರ್ವಾಶೆ 

Follow Us:
Download App:
  • android
  • ios