ಇವರ್ಯಾವ ಸೀಮೆ ಪೋಷಕರು ನೋಡಿ.. ಫೂಟ್ ರೆಸ್ಟ್‌ನಲ್ಲಿ ಮಗುವನ್ನು ನಿಲ್ಲಿಸಿಕೊಂಡು ಸ್ಕೂಟರ್ ರೈಡ್: ವೀಡಿಯೋ ವೈರಲ್
ತಮಗಿಂತ ತಮ್ಮ ಕುಡಿಗಳ ಬಗ್ಗೆಯೇ ಪೋಷಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಮಗುವಿನ ಸುರಕ್ಷತೆಯ ಬಗ್ಗೆಯೇ ಹೆಚ್ಚು ಗಮನಹರಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಗುವಿನ ಜೀವವನ್ನು ಅಪಾಯದಲ್ಲಿಟ್ಟು ವಾಹನ ರೈಡ್ ಮಾಡಿದ್ದಾರೆ.
ಬೆಂಗಳೂರು: ತಮಗಿಂತ ತಮ್ಮ ಕುಡಿಗಳ ಬಗ್ಗೆಯೇ ಪೋಷಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಮಗುವಿನ ಸುರಕ್ಷತೆಯ ಬಗ್ಗೆಯೇ ಹೆಚ್ಚು ಗಮನಹರಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರು ಮಗುವಿನ ಜೀವವನ್ನು ಅಪಾಯದಲ್ಲಿಟ್ಟು ಜಾಲಿ ರೈಡ್ ಮಾಡಿದ್ದಾರೆ. ಅಂದಹಾಗೆ ನಮ್ಮ ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿರುವುದು, ಸ್ಕೂಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಜೋಡಿಯೊಂದು ತಮ್ಮ ಮಗುವನ್ನು ಸ್ಕೂಟರ್‌ನಲ್ಲಿ ಹಿಂಬದಿ ಸವಾರರು ಕಾಲಿಡಲು ಬಳಸುವ ಜಾಗ ಫೂಟ್‌ರೆಸ್ಟ್‌ನಲ್ಲಿ ನಿಲ್ಲಿಸಿಕೊಂಡು ಪ್ರಯಾಣ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ದಂಪತಿಯ ಈ ನಿರ್ಲಕ್ಷ್ಯದ ಅಜಾಗರೂಕ ವಾಹನ ಚಾಲನೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೃಶ್ಯವನ್ನು ಹಿಂಬದಿಯಲ್ಲಿ ಬರುತ್ತಿದ್ದ ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕಿರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ ಚಾಲನೆ ಮಾಡುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಜೀವಕ್ಕೆ ಎರವಾಗುವಂತಹ ಘಟನೆಗಳು ನಡೆಯುತ್ತವೆ. ಅದರಲ್ಲೂ ಮಕ್ಕಳು ಜೊತೆಯಲ್ಲಿದ್ದ ಸಂದರ್ಭದಲ್ಲಂತೂ ಬಹುತೇಕರು ಬಹಳ ಜಾಗರೂಕರಾಗಿ ಪ್ರಯಾಣಿಸುತ್ತಾರೆ. ಆದರೆ ಈ ಜೋಡಿ ಮಗುವನ್ನು ಫೂಟ್‌ರೆಸ್ಟ್‌ನಲ್ಲಿ ನಿಲ್ಲಿಸಿ ಪಯಣಿಸಿದ್ದು, ಜಸ್ಟ್ ಸಡನ್ ಬ್ರೇಕ್ ಹಾಕಿದರೆ ಮಗು ರಸ್ತೆಗುರುಳುವುದು ಗ್ಯಾರಂಟಿ. ಈ ಮೂಲಕ ಪುಟ್ಟ ಮಗುವಿನ ಜೀವದ ಜೊತೆ ಈ ದಂಪತಿ ಚೆಲ್ಲಾಟವಾಡಿದೆ.
ಟ್ವಿಟ್ಟರ್‌ನಲ್ಲಿ ಲುಲುಬಿ (𝗟 𝗼 𝗹 𝗹 𝘂 𝗯 𝗲 𝗲 @Lollubee) ಎಂಬ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು, ಈಡಿಯಟ್ಸ್ ಆನ್ ರೋಡ್ ಎಂದು ಬರೆದಿರುವ ಅವರು, ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಬೆಂಗಳೂರು ಸಿಟಿ ಪೊಲೀಸರಿಗೆ ವೀಡಿಯೋ ಟ್ಯಾಗ್ ಮಾಡಿದ್ದಾರೆ. ವೀಡಿಯೋ ನೋಡಿದ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು, ಈ ಪ್ರಕರಣದ ಬಗ್ಗೆ ವೈಟ್‌ಫೀಲ್ಡ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈ ಘಟನೆಯನ್ನು ಕೂಡ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ನನ್ನ ಬಳಿ ಗಾಡಿ ಇಲ್ಲ ಅವಳಿ ಮಕ್ಕಳಿದ್ದಾರೆ, ಆದರೆ ಸ್ವಲ್ಪ ದೂರದವರೆಗೆ ನಾನು ಈ ರೀತಿ ಮಕ್ಕಳನ್ನು ಕರೆದೊಯ್ಯುತ್ತೇನೆ. ಈ ವಿಚಾರವನ್ನು ದೊಡ್ಡದು ಮಾಡಬೇಡಿ ಎಂದು ಒಬ್ಬರು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ 2022ರಲ್ಲಿಯೇ ಪ್ರತಿ ಗಂಟೆಗೆ 19 ಜನ ಅಪಘಾತಕ್ಕೆ ಬಲಿಯಾಗುತ್ತಿದ್ದರು. ಈ ಸಂಖ್ಯೆ ಈಗ ಎಷ್ಟಿದೆಯೋ ಗೊತ್ತಿಲ್ಲ ಆದರೆ ಈ ಜೋಡಿಯ ಕೆಲಸಕ್ಕೆ ನನ್ನ ಬಳಿ ಪದಗಳೇ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Idiots on the road 🤬@blrcitytraffic @BlrCityPolice please take action. pic.twitter.com/tAN9BxTHiS
— 𝗟 𝗼 𝗹 𝗹 𝘂 𝗯 𝗲 𝗲 (@Lollubee) April 15, 2024