ತಂತ್ರಜ್ಞಾನ, ಸಾರಿಗೆ ಸಂಪರ್ಕಗಳು ಬೆಳೆದಂತೆ ಜಗತ್ತು ಚಿಕ್ಕದಾಗುತ್ತಿದೆ. ವಿವಿಧ ಸಂಸ್ಕೃತಿಗಳು ಹತ್ತಿರಾಗುತ್ತಿವೆ. ವೈಯಕ್ತಿಕವೇ ಆಗಲಿ, ಔದ್ಯೋಗಿಕವೇ ಆಗಲಿ, ಸಂಬಂಧಗಳಿಗೆ ಗಡಿಯ ಹಂಗಿಲ್ಲ. ಜಗತ್ತಿನ ಯಾವುದೇ ಮೂಲೆಯವರನ್ನು ಭೇಟಿಯಾದರೂ ಒಂದು ನಗುವಿನಿಂದ ಗೆಳೆತನ ಸಂಪಾದಿಸಬಹುದು. ಆದರೆ, ನಗುವಿನ ಜೊತೆ ಗ್ರೀಟ್ ಮಾಡುವ ಪದ್ಧತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ. ನಾವು ನಮಸ್ತೇ ಎನ್ನುತ್ತೇವೆ, ಕೆಲ ಪಾಶ್ಚಾತ್ಯರು ಶೇಕ್ ಹ್ಯಾಂಡ್ ಮಾಡುತ್ತಾರೆ. ಇಂಥ  ಹತ್ತು ಹಲವು ಅಭ್ಯಾಸಗಳು ಸಂಸ್ಕೃತಿ ಬದಲಾದಲೆಲ್ಲ ಕಾಣಸಿಗುತ್ತವೆ. ಗ್ರೀಟ್ ಮಾಡುವ ವಿಧಾನ ಬದಲಾದರೂ, ಅದು ಎದುರಿನವರನ್ನು ಗೌರವಿಸುವ, ಸ್ನೇಹಭಾವದಿಂದ ಕಾಣುವ ಮನೋಭಾವವನ್ನೇ ಸೂಚಿಸುತ್ತದೆ. ಹಾಗಿದ್ದರೆ, ಜಗತ್ತಿನಾದ್ಯಂತ  ಎಲ್ಲೆಲ್ಲಿ ಹೇಗೆಲ್ಲ ಗ್ರೀಟ್ ಮಾಡುತ್ತಾರೆ ನೋಡೋಣ...

ಹೂಸು ಬಿಡೋ ಸ್ಪರ್ಧೆ: ನಡೆಯೋದು ಭಾರತದಲ್ಲಿ ಮಾತ್ರ!

ಏಷ್ಯಾದ ದೇಶಗಳು
ಭಾರತದಲ್ಲಿ ಎರಡೂ ಕೈ ಜೋಡಿಸಿ ಮುಗಿದು ನಮಸ್ತೆ ಹೇಳುವುದು ನಾವು ಪರಿಚಯದವರನ್ನು ಹಾಗೂ ಹೊಸಬರನ್ನು ಕಂಡಾಗ ಗ್ರೀಟ್ ಮಾಡುವ ವಿಧಾನ. ಜಪಾನ್, ಕಾಂಬೋಡಿಯಾ, ಥೈಲ್ಯಾಂಡ್‌ನಲ್ಲಿ ಕೂಡಾ ಇದಕ್ಕೆ ಹತ್ತಿರದ ಗ್ರೀಟಿಂಗ್ ಅಭ್ಯಾಸಗಳಿವೆ. ಜಪಾನಿನಲ್ಲಿ ದೇಹವನ್ನು ಬಾಗಿಸಿ ಗೌರವ ಸೂಚಿಸುತ್ತಾರೆ. ಹೆಚ್ಚು ಬಾಗಿದಷ್ಟೂ ಹೆಚ್ಚು ಗೌರವ ತೋರಿದಂತೆ ಭಾವಿಸಲಾಗುತ್ತದೆ. ಜಪಾನ್‌ನ ಪುರುಷರು ಕೈಗಳನ್ನು ಬದಿಗಿಟ್ಟು ಬಗ್ಗಿದರೆ, ಮಹಿಳೆಯರು ತಮ್ಮ ಅಂಗೈಗಳನ್ನು ತೊಡೆಗಳ ಮೇಲೆ ಇಟ್ಟು  ಬಾಗುತ್ತಾರೆ. ಆದರೆ ಈಗಿನ ತಲೆಮಾರಿನವರು ಸ್ವಲ್ಪ ತಲೆಯನ್ನು ಆಡಿಸಿ ಗೌರವ ಸೂಚಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಮಲೇಶಿಯಾದಲ್ಲಿ ಮೊದಲು ಮತ್ತೊಬ್ಬರ ಕೈಯನ್ನು ಹಿಡಿದು ಬಿಡಲಾಗುತ್ತದೆ. ನಂತರ ತಮ್ಮ ಕೈಯ್ಯನ್ನು ಎದೆಯ ಮೇಲಿಟ್ಟು ತಲೆಯಾಡಿಸಿ ಹೆಲೋ ಸೂಚಿಸಲಾಗುತ್ತದೆ.

ಹಿರಿಯರಿಗೆ ಗೌರವ ತೋರುವುದು
ಭಾರತದಲ್ಲಿ ಹಿರಿಯರನ್ನು ಕಂಡೊಡನೆ ಅವರ ಕಾಲು ಮುಟ್ಟಿ ನಮಸ್ಕರಿಸಿ ಗೌರವ ತೋರಿಸಲಾಗುತ್ತದೆ, ಆಶೀರ್ವಾದ ಕೋರಲಾಗುತ್ತದೆ. ಇದು ಪಾಶ್ಚಾತ್ಯರಿಗೆ ವಿಪರೀತವಾಗಿ ಕಾಣಿಸುತ್ತದೆ. ಫಿಲಿಪೈನ್ಸ್‌ನಲ್ಲಿ ಹಿರಿಯರಿಗೆ ಗೌರವ ತೋರಲು ಕಿರಿಯರಾದವರು ಅವರ ಕೈ ಹಿಡಿದು ತಮ್ಮ ಹಣೆಗೆ ಒತ್ತಿಕೊಳ್ಳುತ್ತಾರೆ.  ಇನ್ನು ಕೆಲ ಆಫ್ರಿಕಾದ ದೇಶಗಳಲ್ಲಿ ಕಿರಿಯರು ಮೊಣಕಾಲಿನಲ್ಲಿ ಕುಳಿತು  ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ.

ನಾಲಿಗೆ ಚಾಚುವುದು
ಜನರಿಗೆ ಹಾಯ್ ಹೇಳುವ ಉದ್ದೇಶಕ್ಕಾಗಿ ನಾಲಿಗೆ ಹೊರ ಚಾಚುವ ಅಪರೂಪದ ಅಭ್ಯಾಸ ಟಿಬೆಟಿಯನ್ ಸಮುದಾಯದ್ದು. ಈ ಅಭ್ಯಾಸಕ್ಕಾಗಿ ಅವರು ತಮ್ಮ ಕೆಟ್ಟ ರಾಜನೊಬ್ಬನನ್ನು ದೂರುತ್ತಾರೆ.  9ನೇ ಶತಮಾನದಲ್ಲಿ ಟಿಬೆಟ್‌ನಲ್ಲಿದ್ದ ರಾಜನೊಬ್ಬನ ನಾಲಿಗೆ ಕಪ್ಪಗಿದ್ದು, ಆತ ಬಹಳ ಕೆಟ್ಟವನಾಗಿದ್ದ. ತಾವು ಆತನ ಪುನರ್ಜನ್ಮವಾಗಲೀ, ಸಂಬಂಧಿಕರಾಗಲೀ ಅಲ್ಲವೆಂಬುದನ್ನು ತೋರಿಸಲು ಟಿಬೆಟಿಯನ್ ಸನ್ಯಾಸಿಗಲು ನಾಲಿಗೆ ಚಾಚಿ ತೋರುವ ಅಭ್ಯಾಸ ರೂಢಿಸಿಕೊಂಡರು. ಅಲ್ಲಿಂದ ಈ ಅಭ್ಯಾಸ ಅನುಸರಣೆಯಲ್ಲಿದೆ.

ಮುಖ ತಿಕ್ಕುವುದು
ಇದೊಂದು ತಮಾಷೆಯಂತೆ ಕಾಣಿಸಬಹುದು. ಆದರೆ ನ್ಯೂಜಿಲೆಂಡ್‌ನ ಮಾಓರಿ ಸಮುದಾಯದ ಜನರು ಒಬ್ಬರಿಗೊಬ್ಬರ ಮುಖವನ್ನು ತಿಕ್ಕಿ- ತಮ್ಮ ಉಸಿರನ್ನು ಶೇರ್ ಮಾಡಿಕೊಂಡು-  ಗ್ರೀಟ್ ಮಾಡಿಕೊಳ್ಳುತ್ತಾರೆ. ಆದರೆ, ಗೌರವದ ಸೂಚಕವೂ ಆಗಿರುವ ಇದನ್ನವರು ಎಲ್ಲರಿಗೂ ಮಾಡಲಾರರು.

ಚಪ್ಪಾಳೆ ತಟ್ಟುವುದು
ನಮ್ಮಲ್ಲಿ ಯಾರನ್ನಾದರೂ ಸಣ್ಣವರನ್ನು ಕರೆಯಲು ಚಪ್ಪಾಳೆ ತಟ್ಟುತ್ತೇವಲ್ಲವೇ, ಆದರೆ ಜಿಂಬಾಬ್ವೆಯಲ್ಲಿ ಹೆಲ್ಲೋ ಹೇಳುವುದೇ ಚಪ್ಪಾಳೆಯ ಮೂಲಕ. ಒಬ್ಬ ವ್ಯಕ್ತಿಯು ಒಮ್ಮೆ ಕ್ಲ್ಯಾಪ್ ಮಾಡು ಹೆಲೋ ಹೇಳಿದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಎರಡು ಬಾರಿ ಚಪ್ಪಾಳೆ ತಟ್ಟುವುದು ಇವರ ಅಭ್ಯಾಸ. ಪುರುಷರು ತಮ್ಮ ಬೆರಳುಗಳು ಹಾಗೂ ಅಂಗೈ ಸೇರಿಸಿ ಚಪ್ಪಾಳೆ ತಟ್ಟಿದರೆ, ಮಹಿಳೆಯರು ನಿರ್ದಿಷ್ಟ ದಿಕ್ಕಿನಲ್ಲಿ ಕೈ ಹಿಡಿದು ತಟ್ಟುತ್ತಾರೆ.

ಸೆಕೆಂಡ್ ಸಿಟಿ ಟ್ರಾವೆಲಿಂಗ್‌ಗೆ ರೆಡಿನಾ ನೀವು?


ಮೂಗುಗಳ ಮುತ್ತು
ಮೂಗಿಗೆ ಮೂಗು ತಾಗಿಸಿ ಸ್ನೇಹ ತೋರ್ಪಡಿಸುವುದು ಯೆಮನ್ ಹಾಗೂ ಕತಾರ್‌ನಲ್ಲಿ ಚಾಲ್ತಿಯಲ್ಲಿದೆ. ಆದರೆ, ಮಹಿಳೆಯರಿಗೆ ಈ ಅವಕಾಶವಿಲ್ಲ.

ಗಾಳಿಮುತ್ತು
ಅರ್ಜೆಂಟೀನಾ, ಚಿಲಿ, ಪೆರು, ಮೆಕ್ಸಿಕೋ, ಬೆಜಿಲ್ ಹಾಗೂ ಕೊಲಂಬಿಯಾಗಳಲ್ಲಿ ಕೆನ್ನೆಗಳನ್ನು ಹತ್ತಿರ ತಂದು ಗಾಳಿಯಲ್ಲಿ ಒಂದು ಮುತ್ತು ನೀಡುವುದು ಹೆಲೋ ಹೇಳುವ ವಿಧಾನ. ಸ್ಪೇನ್, ಪೋರ್ಚುಗಲ್, ಪೆರುಗ್ವೆ, ಇಟಲಿ, ಫಿಲಪೈನ್ಸ್, ಪ್ಯಾರಿಸ್‌ಗಳಲ್ಲಿ ಎರಡು ಕೆನ್ನೆಗೂ ಒಂದೊಂದರಂತೆ ಗಾಳಿಯಲ್ಲಿ ಮುತ್ತನ್ನು ನೀಡಲಾಗುತ್ತದೆ. ರಷ್ಯಾ, ಉಕ್ರೇನ್‌ಗೆ ಬಂದರೆ, ಅಲ್ಲಿ ಮೂರು ಮುತ್ತುಗಳು ಸ್ಟ್ಯಾಂಡರ್ಡ್. ಫ್ರಾನ್ಸ್‌ನ ಕೆಲ ಭಾಗಗಳಲ್ಲಂತೂ ನಾಲ್ಕರವರೆಗೂ ಇದು ಹೋಗುತ್ತದೆ. ಇದರಲ್ಲಿ ಕೂಡಾ ಕೆಲವೊಂದು ನಿಯಮಗಳಿವೆ. ಈ ಎಲ್ಲ ದೇಶಗಳಲ್ಲೂ ಮಹಿಳೆಯರು ಮಹಿಳೆಯರಿಗೆ ಮಾತ್ರ ಏರ್ ಕಿಸ್ ನೀಡುತ್ತಾರೆ. ಪುರುಷರು ಮಹಿಳೆಯರಿಗೆ ಏರ್ ಕಿಸ್ ನೀಡುತ್ತಾರೆ. ಆದರೆ ಅರ್ಜೆಂಟೀನಾದಲ್ಲಿ ಮಾತ್ರ ಪುರುಷರು ಪುರುಷರಿಗೂ ಕೆನ್ನೆಯಿಂದ ಕೆನ್ನೆ ತಿಕ್ಕಿ ಏರ್ ಕಿಸ್ ನೀಡುತ್ತಾರೆ.