ಹನಿಮೂನ್ ಎಂಬ ಪದ ಕಿವಿ ಮೇಲೆ ಬಿದ್ದ ತಕ್ಷಣ ನಾವು ರೊಮ್ಯಾಂಟಿಕ್ ಮೂಡ್‍ಗೆ ಜಾರುತ್ತೇವೆ. ಅಲ್ಲಿ ಪತಿ-ಪತ್ನಿ ಇಬ್ಬರೇ ಕೈ ಕೈ ಹಿಡಿದು ಬೀಚ್ ಸುತ್ತೋದು, ಹಿಮದ ಹೊದಿಕೆ ಹೊದ್ದ ಬೆಟ್ಟಗಳ ಮುಂದೆ ತಬ್ಬಿ ನಿಂತು ಫೋಟೋಗೆ ಪೋಸ್ ಕೊಡೋದು...ಹೀಗೆ ಸಾಲು ಸಾಲು ಚಿತ್ರಗಳು ಕಣ್ಣ ಮುಂದೆ ಬರುತ್ತವೆ. ಒಟ್ಟಾರೆ ಹನಿಮೂನ್ ಅಂದ್ರೇನೆ ರೊಮ್ಯಾನ್ಸ್ ಮಾಡೋದಕ್ಕೋಸ್ಕರ ಪ್ರೈವೆಸಿ ಬಯಸಿ ಪತಿ-ಪತ್ನಿ ಸುಂದರ ತಾಣಗಳಿಗೆ ಭೇಟಿ ನೀಡುವುದು. ಆದ್ರೆ ಹನಿಮೂನ್‍ಗೆ ಫ್ರೆಂಡ್ಸ್ ಅನ್ನೂ ಕರ್ಕೊಂಡು ಹೋದ್ರೆ ಹೇಗೆ? ಅರೇ, ಹನಿಮೂನ್‍ಗೆ ಫ್ರೆಂಡ್ಸ್! ಕೇಳೋಕೆ ವಿಚಿತ್ರವಾಗಿದೆ ಅಲ್ವಾ? ವಿಚಿತ್ರವೆನಿಸಿದರೂ ಫ್ರೆಂಡ್‍ಮೂನ್ ಎಂದು ಕರೆಸಿಕೊಳ್ಳುವ ಈ ಟ್ರೆಂಡ್ ಈಗ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸುತ್ತಿದ್ದು, 2020ನೇ ಸಾಲಿನ ಪ್ರವಾಸೋದ್ಯಮದಲ್ಲಿ ಜೋರು ಸದ್ದು ಮಾಡುವ ನಿರೀಕ್ಷೆಯಿದೆ. 

ಕಳ್ಳ ಕಾಕರನ್ನು ಶಿಕ್ಷಿಸುವ ಸಿಗಂದೂರೇಶ್ವರಿ ದೇವಿ

ಏನಿದು ಫ್ರೆಂಡ್‍ಮೂನ್?

ಹೆಸರೇ ಸೂಚಿಸುವಂತೆ ನವ ದಂಪತಿ ತಮ್ಮ ಸ್ನೇಹಿತರ ಜೊತೆಗೆ ಹನಿಮೂನ್‍ಗೆ ಹೋಗೋದೆ ಫ್ರೆಂಡ್‍ಮೂನ್. ಇದಕ್ಕೆ ಬಡ್ಡಿಮೂನ್ ಎಂಬ ಇನ್ನೊಂದು ಹೆಸರಿದೆ ಕೂಡ. ಇಲ್ಲಿ ಪತಿ ಹಾಗೂ ಪತ್ನಿಯ ಜೊತೆಗೆ ಅವರ ಸ್ನೇಹಿತರು ಕೂಡ ಹನಿಮೂನ್ ಟ್ರಿಪ್‍ಗೆ ಸಾಥ್ ನೀಡುವ ಮೂಲಕ ಪ್ರವಾಸದ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸುತ್ತಾರೆ. ಏನೇ ಹೇಳಿ, ಇಬ್ಬರೇ ಹೋಗೋದಕ್ಕಿಂತ ಫ್ರೆಂಡ್ಸ್ ಜೊತೆಗಿದ್ರೆ ಟ್ರಾವೆಲ್ ಮಜಾನೇ ಬೇರೆ. ಜೋಕ್ ಮಾಡುತ್ತ,ಬಾಯಿ ತುಂಬಾ ಮಾತನಾಡುತ್ತ,ಪಾರ್ಟಿ ಮಾಡುತ್ತ, ಕಾಲೆಳೆಯುತ್ತಿದ್ರೆ ಪ್ರವಾಸದ ಸುಸ್ತು ಕಾಡುವುದಿಲ್ಲ, ಎಲ್ಲೂ ಬೋರ್ ಅನಿಸೋದಿಲ್ಲ. 

ಕಾಸ್ಟ್ ಕಟ್ಟಿಂಗ್ 

ಹನಿಮೂನ್‍ಗೆ ವಿದೇಶದಲ್ಲಿರುವ ಯಾವುದಾದ್ರೂ ತಾಣಕ್ಕೆ ಹೋಗ್ಬೇಕು ಎಂಬ ಬಯಕೆ ನವವಧುವರರಿಗಿರುತ್ತದೆ. ಆದ್ರೆ ಬಜೆಟ್ ಪ್ರಾಬ್ಲಂ ಕಾಡುತ್ತೆ. ಅದೇ ಪತಿ ಹಾಗೂ ಪತ್ನಿ ತಮ್ಮ ಸ್ನೇಹಿತ-ಸ್ನೇಹಿತೆಯರನ್ನು ಜೊತೆಗೂಡಿಸಿಕೊಂಡ್ರೆ ಪ್ರವಾಸದ ವೆಚ್ಚ ತಗ್ಗುತ್ತದೆ. 7-8 ಜನ ಒಟ್ಟಿಗೆ ಪ್ರವಾಸಕ್ಕೆ ತೆರಳಿದಾಗ ದೊಡ್ಡ ವಿಲ್ಲಾ ಬುಕ್ ಮಾಡಬಹುದು. ದುಬಾರಿಯಾದ್ರೂ ಸುಂದರವಾಗಿರುವ ಪರಿಸರದಲ್ಲೇ ಸ್ಟೇ ಮಾಡ್ಬಹುದು. ಏಕೆಂದ್ರೆ ವೆಚ್ಚವನ್ನು ಎಲ್ಲರೂ ಹಂಚಿಕೊಳ್ಳುವ ಕಾರಣ ಹೊರೆಯಾಗದು. ಫುಡ್, ರೋಡ್ ಟ್ರಾವೆಲ್ ಖರ್ಚು ಕೂಡ ಕಡಿಮೆಯಾಗುತ್ತದೆ. ಶೇ.50ರಷ್ಟು ಪ್ರವಾಸ ವೆಚ್ಚ ತಗ್ಗುವುದಾದ್ರೆ ನಾವು ಫ್ರೆಂಡ್‍ಮೂನ್‍ಗೆ ರೆಡಿ ಎಂಬ ಅಭಿಪ್ರಾಯವನ್ನು ಶೇ.40ರಷ್ಟು ಯುವಜನತೆ ಸಮೀಕ್ಷೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ 18 ಹಾಗೂ 35 ವಯಸ್ಸಿನ ನಡುವಿನ ಶೇ.47ರಷ್ಟು ಮಂದಿ ಫ್ರೆಂಡ್‍ಮೂನ್‍ಗೆ ಹೋಗುವುದಾಗಿ ತಿಳಿಸಿದ್ದರು. 

ಸೆಕೆಂಡ್‌ ಹನಿಮೂನ್‌ ರೋಚಕತೆ ಸವಿಯಲು ಈ ಜಾಗ ಬೆಸ್ಟ್!

ಮೊದಲೇ ಪ್ಲ್ಯಾನ್ ಮಾಡಿ

ಫ್ರೆಂಡ್‍ಮೂನ್ ಪ್ಲ್ಯಾನ್ ಮಾಡುವ ಮೊದಲು ಈ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ. ಯಾವ ಸ್ಥಳ, ಎಷ್ಟು ದಿನಗಳು, ಎಲ್ಲಿ ಸ್ಟೇ ಮಾಡ್ಬೇಕು, ಯಾವಾಗ ಹೋಗೋದು, ಎಷ್ಟು ಖರ್ಚಾಗಬಹುದು ಎಂಬ ಬಗ್ಗೆ ಲೆಕ್ಕ ಹಾಕಿ,ಸ್ನೇಹಿತರಿಗೂ ಮಾಹಿತಿ ನೀಡಿ.ಇದರಿಂದ ಸ್ನೇಹಿತರು ಟ್ರಾವೆಲ್‍ಗಾಗಿ ಒಂದಿಷ್ಟು ಹಣವನ್ನು ಸೇವ್ ಮಾಡಲು ಪ್ರಾರಂಭಿಸುತ್ತಾರೆ. ಅಲ್ಲದೆ, ಆಫೀಸ್‍ನಲ್ಲಿ ರಜೆ ಅಪ್ಲೈ ಮಾಡಲು ಹಾಗೂ ಪ್ರಮುಖವಾದ ಕೆಲಸಗಳಿದ್ದರೆ ಬೇಗ ಮುಗಿಸಿಕೊಳ್ಳಲು ನೆರವಾಗುತ್ತದೆ. ಪ್ರವಾಸಕ್ಕಾಗಿ ಶಾಪಿಂಗ್ ಸೇರಿದಂತೆ ಅಗತ್ಯವಾದ ಎಲ್ಲ ತಯಾರಿ ಮಾಡಿಕೊಳ್ಳಲು ಕೂಡ ಅವರಿಗೆ ಸಮಯ ಸಿಗುತ್ತದೆ. 

ಸ್ನೇಹಿತರ ಆಯ್ಕೆಯಲ್ಲಿ ಎಚ್ಚರ

ಫ್ರೆಂಡ್‍ಮೂನ್‍ಗೆ ಯಾವೆಲ್ಲ ಸ್ನೇಹಿತರನ್ನು ಕರೆದುಕೊಂಡು ಹೋಗಬೇಕು ಎಂಬ ಬಗ್ಗೆ ಪತಿ-ಪತ್ನಿ ಇಬ್ಬರೂ ಕುಳಿತು ಚರ್ಚಿಸಿ. ನಿಮ್ಮಿಬ್ಬರ ಅಭಿರುಚಿಗೆ ಹೊಂದುವ, ಸಮಾನಮನಸ್ಕ ಗೆಳೆಯ-ಗೆಳತಿಯರನ್ನೇ ಆಯ್ಕೆ ಮಾಡಿ. ಹಾಗಂತ ತುಂಬಾ ಜನ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಹೋಗೋದು ಬೇಡ. 5-6 ಜನಕ್ಕಿಂತ ಹೆಚ್ಚಿನ ಸ್ನೇಹಿತರನ್ನು ಕರೆದುಕೊಂಡು ಹೋಗ್ಬೇಡಿ. ಜನ ಜಾಸ್ತಿಯಾದಷ್ಟು ಗೊಂದಲ ಹೆಚ್ಚಾಗುತ್ತದೆ, ಭಿನ್ನಾಭಿಪ್ರಾಯಗಳೂ ತಲೆದೋರಬಹುದು. ಇನ್ನು ನಿಮ್ಮೊಂದಿಗೆ ಫ್ರೆಂಡ್‍ಮೂನ್‍ಗೆ ಬರುವ ಸ್ನೇಹಿತರು ಹೇಗಿದ್ದರೂ ನಿಮ್ಮ ಮದುವೆಗೆ ಬಂದೇಬರುತ್ತಾರೆ. ಆವಾಗಲೇ ನಿಮ್ಮ ಪತಿ ಅಥವಾ ಪತ್ನಿಗೆ ತಪ್ಪದೆ ಪರಿಚಯಿಸಿ.

ವಿಮಾನಕ್ಕೆ ನಿವೃತ್ತಿ ಸಿಕ್ಕ ಮೇಲೆ ಅವೇನಾಗುತ್ತವೆ?

ಪ್ರೈವೆಸಿಗೂ ಜಾಗವಿರಲಿ

ನವಿವಾಹಿತರಿಗೆ ಒಬ್ಬರನ್ನೊಬ್ಬರು ಅರಿಯಲು ಖಾಸಗಿತನ ಒದಗಿಸುವುದೇ ಹನಿಮೂನ್ ಉದ್ದೇಶ. ಆದ್ರೆ ಇಂದು ವಿವಾಹ ಎನ್ನುವ ವ್ಯವಸ್ಥೆ ಸಾಕಷ್ಟು ಬದಲಾವಣೆಗೆ ಒಳಗಾಗಿದೆ. ಈಗಿನ ಕಾಲದಲ್ಲಿ ಮದುವೆಗೆ ಮುನ್ನವೇ ಗಂಡು-ಹೆಣ್ಣು ಸಾಕಷ್ಟು ಬಾರಿ ಭೇಟಿಯಾಗುತ್ತಾರೆ, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಮದುವೆಗೆ ಮುನ್ನವೇ ಒಬ್ಬರನ್ನೊಬ್ಬರು ಸ್ವಲ್ಪ ಮಟ್ಟಿಗೆ ಅರ್ಥ ಮಾಡಿಕೊಂಡಿರುತ್ತಾರೆ. ಹೀಗಾಗಿ ಹನಿಮೂನ್‍ಗೆ ಹೋಗಿಯೇ ಅವರು ಒಬ್ಬರನ್ನೊಬ್ಬರು ಅರಿಯಬೇಕಾಗಿಲ್ಲ. ಆದ್ರೂ ನವವಿವಾಹಿತರಿಗೆ ಸ್ವಲ್ಪ ಮಟ್ಟಿನ ಪ್ರೈವೆಸಿಯಂತೂ ಬೇಕೇಬೇಕು. ಸೋ, ಫ್ರೆಂಡ್‍ಮೂನ್‍ಗೆ ಹೋದಾಗ ಫ್ರೆಂಡ್ಸ್ ಜೊತೆಗೆ ಮಸ್ತಿ ಮಾಡಿ, ಆದ್ರೆ ನಿಮ್ಮಿಬ್ಬರ ರೊಮ್ಯಾನ್ಸ್ ಹಾಗೂ ಪ್ರೈವೆಸಿಗೂ ಒಂದಿಷ್ಟು ಸಮಯ ಮೀಸಲಿಡಿ.