Asianet Suvarna News Asianet Suvarna News

ಮೈಸೂರು ಅಷ್ಟೇ ಅಲ್ಲ, ರಾಜ್ಯದ ಈ ಊರುಗಳಲ್ಲೂ ನಡೆಯುತ್ತೆ ಅದ್ಧೂರಿ ದಸರಾ!

ಕರ್ನಾಟಕದಲ್ಲಿ ದಸರಾವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತೆ. ಇಡೀ ರಾಜ್ಯವೇ ನವರಾತ್ರಿ ವೇಳೆ ಸಂಭ್ರಮದಿಂದ ಇರುತ್ತೆ. ಮೈಸೂರು ದಸರಾ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ರಾಜ್ಯದ ಅನೇಕ ಕಡೆಗಳಲ್ಲಿಯೂ ಕೂಡ ವಿಭಿನ್ನವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಅವುಗಳ ಮಾಹಿತಿ ಇಲ್ಲಿದೆ.

Dasara Festival Celebrations in Karnataka
Author
First Published Sep 26, 2022, 5:18 PM IST

ದೇಶಾದ್ಯಂತ ವಿವಿಧ ಸಂಪ್ರದಾಯದ ಮೂಲಕ ದಸರಾ ಹಬ್ಬವನ್ನು ಆಚರಿಸುತ್ತಾರೆ. ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ನಾಡ ಹಬ್ಬವಾಗಿ ಆಚರಿಸಲಾಗುತ್ತೆ. ಮಹಿಷಾಸುರನ ಮರ್ದಿಸಿದ ಚಾಮುಂಡೇಶ್ವರಿಯನ್ನು ವಿಜಯದಶಮಿಯಂದು ಪೂಜಿಸಲಾಗುವುದು. ಮೈಸೂರು ದಸರಾ ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಮೈಸೂರು ಅಷ್ಟೇ ಅಲ್ಲದೇ ಕರ್ನಾಟಕದ ಅನೇಕ ಕಡೆ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ. ಮಡಿಕೇರಿ, ಮಂಗಳೂರು ಹಾಗೂ ಶಿವಮೊಗ್ಗದಲ್ಲಿಯೂ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗುತ್ತದೆ. ಅವುಗಳ ಮಾಹಿತಿ ಇಲ್ಲಿದೆ.

ಮಂಜಿನ ನಗರಿಯಲ್ಲಿ ದಸರಾ ಮೆರಗು..
ವಿಶ್ವವಿಖ್ಯಾತ ಮೈಸೂರು ದಸರಾ ನಂತರ ಮಡಿಕೇರಿ (Madikeri) ದಸರಾವು ತನ್ನದೇ ಆದ ಐತಿಹಾಸಿಕ ಮಹತ್ವ ಪಡೆದಿದೆ. ಮಡಿಕೇರಿಯಲ್ಲಿ ರಾತ್ರಿ ನಡೆಯುವ ದಶಮಂಟಪಗಳ ಮೆರವಣಿಗೆ ಕಣ್ಮನ ಸೆಳೆಯುತ್ತದೆ. ದಸರಾ ಪ್ರಯುಕ್ತ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ದೇವತೆಗಳ ಕರಗಗಳ ಮೆರವಣಿಗೆ ನಡೆಯುತ್ತದೆ. ಈ ಕರಗಗಳು ಒಂಬತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ಆಶೀರ್ವಾದ ನೀಡುತ್ತವೆ. ಈ ಹಿಂದೆ ಕೊಡಗಿನಲ್ಲಿ (Kodagu) ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಸಾವು ನೋವುಗಳು ಸಂಭವಿಸಿತ್ತು. ಇದರಿಂದ ಚಿಂತಿತರಾದ ಅಂದಿನ ಅರಸರು, ಪರಿಹಾರಕ್ಕಾಗಿ ಈ ನಾಲ್ಕು ಶಕ್ತಿ ದೇವತೆಗಳ ಮೊರೆ ಹೋಗಿ ಕರಗಗಳ ನಗರ (City) ಪ್ರದಕ್ಷಿಣೆ ಮಾಡಿಸಿದರು. ಇದಾದ ಬಳಿಕ ಸಾಂಕ್ರಮಿಕ ರೋಗ ಮರೆಯಾಯಿತು ಎಂಬ ಪ್ರತೀತಿ ಇದೆ. ಹೀಗೆ ಮಡಿಕೇರಿ ದಸರಾ ಆರಂಭವಾಗಿದೆ. ಮಡಿಕೇರಿ ದಸರಾ ಹಿಂದಿನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಈ ದಸರಾ ಉತ್ಸವವನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿದೆ.

Navratri Special: ಹಬ್ಬಕ್ಕೆ ಕುಂಬಳಕಾಯಿಯ ಈ ತಿಂಡಿ ಟ್ರೈ ಮಾಡಿ!

ಕಡಲ ನಗರಿ ಮಂಗಳೂರಿನಲ್ಲಿ ದಸರಾ ವೈಭವ
ಪ್ರತಿವರ್ಷವೂ ಮಂಗಳೂರಿನಲ್ಲಿ ನವರಾತ್ರಿಯ ಸಂಭ್ರಮ ಮನೆ ಮಾಡಿರುತ್ತೆ. ದಸರಾ ಉತ್ಸವದ ಅಂಗವಾಗಿ ಮಂಗಳೂರಿನ (Mangaluru) ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತೆ. ಇವು ಮಂಗಳೂರು ದಸರಾಕ್ಕೆ ವಿಶೇಷ ಮೆರಗು ನೀಡುತ್ತವೆ. ಮಂಗಳೂರು ದಸರಾಕ್ಕೆ ಶಾರದ (Sharada) ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು (Ganesha) ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧನೆ ಮಾಡಲಾಗುತ್ತದೆ. ನವದುರ್ಗೆಯರನ್ನು ಪ್ರತಿಷ್ಠಾಪಿಸಲಾದ ಸ್ವರ್ಣಮಯವಾದ ಮಂಟಪಕ್ಕೆ ರಂಗುರಂಗಿನ ಅಲಂಕಾರ ಮಾಡಲಾಗಿರುತ್ತದೆ. ಇದನ್ನು ನೋಡುವುದೇ ಒಂದು ಸೌಭಾಗ್ಯ. ಹತ್ತು ದಿನಗಳ ಕಾಲ ಮಂಗಳೂರಿನ ಹಾದಿ ಬೀದಿಗಳು ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತವೆ. ಈ ಉತ್ಸವದ ಅತಿ ಪ್ರಮುಖ ವಿಶೇಷತೆಯೆಂದರೆ ಹುಲಿ ವೇಷ. ಇದು ನೋಡಲು ತುಂಬಾ ಸೊಗಸಾಗಿರುತ್ತದೆ.

Navratri: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ

ಶಿವಮೊಗ್ಗದಲ್ಲಿಯೂ ಜಂಬೂ ಸವಾರಿ
ಮೈಸೂರಿನಂತೆ ಶಿವಮೊಗ್ಗದಲ್ಲೂ (Shivamogga) ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. 350 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಜಂಬೂಸವಾರಿ ನಡೆಸಲಾಗುತ್ತದೆ. ಹಾಗೂ ಮೆರವಣಿಗೆಯಲ್ಲಿ ನಗರದೆಲ್ಲೆಡೆಯ ದೇವಸ್ಥಾನಗಳ ಉತ್ಸವ ಮೂರ್ತಿಗಳು ಸಹ ಭಾಗವಹಿಸುತ್ತವೆ. ಜೊತೆಗೆ ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ ಜಂಬೂಸವಾರಿಗೆ ರಂಗು ನೀಡುತ್ತವೆ. ಉತ್ಸವ ಮೂರ್ತಿಗಳನ್ನು ಒಂದಕ್ಕಿಂತ ಒಂದನ್ನು ಅತ್ಯಾಕರ್ಷಕವಾಗಿ ಅಲಂಕರಿಸುವುದರಿಂದ ಅವುಗಳನ್ನು ನೋಡುವುದೇ ಒಂದು ಚಂದ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು (Vijaya Dashami) ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಮಾಡಲಾಗುತ್ತದೆ. ಜಂಬೂ ಸವಾರಿ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿಯುತ್ತದೆ. ಬಳಿಕ ರಾವಣ ದಹನ ಮತ್ತು ಪಟಾಕಿ ಮತ್ತು ಸಿಡಿಮದ್ದು ಪ್ರದರ್ಶನ ನಡೆಯುತ್ತದೆ.

 

Dasara Festival Celebrations in Karnataka

 

Follow Us:
Download App:
  • android
  • ios