- ಸುಳ್ಳುಸುದ್ದಿಗಳನ್ನು ಹರಿಯಬಿಡುವವರಿಗೆ ಕಾದಿದೆ ಆಪತ್ತು!
- ಸಂದೇಶಗಳನ್ನು ಡಿಕ್ರಿಪ್ಟ್ ಮಾಡದೇ, ದುಷ್ಕರ್ಮಿಗಳ ಪತ್ತೆ!
ನವದೆಹಲಿ: ಸುಳ್ಳುಸುದ್ದಿಗಳನ್ನು ಹರಡಿಸಲು ವಾಟ್ಸಪ್ ದುರ್ಬಳಕೆಯಾಗುತ್ತಿರುವ ಬೆನ್ನಲ್ಲಿ, ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳಿಗೆ ಕೊನೆಗೂ ಫಲಸಿಕ್ಕಿದೆ. ಬುಧವಾರ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್‌ರನ್ನು ಭೇಟಿಯಾದ ಬಳಿಕ ವಾಟ್ಸಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್, ಭಾರತಕ್ಕಾಗಿಯೇ ಹೊಸ ಮುಖ್ಯಸ್ಥನನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ.
ರವಿಶಂಕರ್ ಪ್ರಸಾದ್ ಹಾಗೂ ಕ್ರಿಸ್ ಡೇನಿಯಲ್ಸ್ ಸುಳ್ಳುಸುದ್ದಿಗಳು ಹಾಗೂ ಅವುಗಳಿಂದಾಗಿ ಸಂಭವಿಸುತ್ತಿರುವ ಗುಂಪು ಹತ್ಯೆಗಳನ್ನು ತಡೆಯುವ ಬಗ್ಗೆ ಚರ್ಚಿಸಿದ್ದಾರೆ. ವಾಟ್ಸಪ್ ಮೂಲಕ ಹರಡುವ ಸುಳ್ಳುಸುದ್ದಿಗಳು ಗುಂಪುಹತ್ಯೆಗೆ ಕಾರಣವಾಗುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕಂಪನಿಯು, ಈ ವರ್ಷಾಂತ್ಯದೊಳಗೆ ಭಾರತದ ಕಾರ್ಯನಿರ್ವಹಣೆಗಾಗಿ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಹೇಳಿದೆ.
ಈ ವರ್ಷಾಂತ್ಯದೊಳಗೆ ಭಾರತದ ಹೊಸ ಮುಖ್ಯಸ್ಥನನ್ನು ನೇಮಿಸಲಾಗುವುದು. ಅವರು ಭಾರತದ ಗ್ರಾಹಕರಿಗೆ ಅನುಕೂಲವಾಗುವಂತೆ ಹಾಗೂ ಜನರ ಸುರಕ್ಷತೆ ಖಚಿತಪಡಿಸಲು ಸರ್ಕಾರದೊಂದಿಗೆ ಸೇರಿ ಕೆಲಸ ಮಾಡಲಿದ್ದಾರೆ ಎಂದು ಕಂಪನಿಯು ಹೇಳಿದೆ.
ಸುಳ್ಳುಸುದ್ದಿಗಳನ್ನು ಹುಟ್ಟುಹಾಕುವವರನ್ನು ಪತ್ತೆಹಚ್ಚಲು ಸರ್ಕಾರದ ಪ್ರಯತ್ನಕ್ಕೆ ಇದು ಸಹಕಾರಿಯಾಗಲಿದೆ. ಆದರೆ ಬಳಕೆದಾರರು ಕಳುಹಿಸುವ ಎನ್ಕ್ರಿಪ್ಟೆಡ್ ಸಂದೇಶಗಳನ್ನು ಡಿಕ್ರಿಪ್ಟ್ ಮಾಡುವ ಯಾವುದೇ ಇರಾದೆ ಸರ್ಕಾರಕ್ಕಿಲ್ಲ, ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸುಳ್ಳುಸುದ್ದಿಗಳನ್ನು ಕಳುಹಿಸಿ, ಅಪರಾಧ ಮತ್ತು ಹಿಂಸೆಗೆ ಕಾರಣವಾಗುವವರ ಸ್ಥಳ ಮತ್ತು ಗುರುತು ಕಂಡುಹಿಡಿಯುವುದಕ್ಕೆ ಸರ್ಕಾರ ಮುಂದಾಗಿದೆ.
ಈ ಹಿಂದೆ , ಭಾರತದಲ್ಲಿಯೇ ಇದ್ದು ದೂರುಗಳನ್ನು ಸ್ವೀಕರಿಸಲು ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರ ವಾಟ್ಸಪ್‌ಗೆ ಹೇಳಿದ್ದನ್ನು ಸ್ಮರಿಸಬಹುದು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 2, 2018, 9:23 AM IST