ಮುಂಬೈ(ಫೆ.23): ಫ್ರಂಟ್‌ ಕೆಮರಾ ಆನ್‌ ಮಾಡಿದ ತಕ್ಷಣ, ಚಕ್ಕನೆ ಮೇಲಕ್ಕೆದ್ದು ಫೋಟೋ ಕ್ಲಿಕ್ಕಿಸುವ 32 ಮೆಗಾ ಫಿಕ್ಸೆಲ್‌ನ ಪಾಪ್‌ ಅಪ್‌ ಕೆಮರಾ, ಹಿಂಬದಿಯಲ್ಲಿ ಮೂರು ಕ್ಯಾಮರಾಗಳು, 12 ಮೆಗಾಫಿಕ್ಸೆಲ್‌ ಕ್ಯಾಮರಾಕ್ಕೆ 48 ಮಿಲಿಯನ್‌ ಕ್ವಾಡ್‌ ಪಿಕ್ಸೆಲ್‌ ಸೆನ್ಸರ್‌, ಫುಲ್‌ ಸ್ಕ್ರೀನ್‌ ಡಿಸ್‌ಪ್ಲೇ, 6ಜಿಬಿ ರಾರ‍ಯಮ್‌, 128 ಜಿಬಿ ಮೆಮರಿ, ಆ್ಯಂಡ್ರಾಯ್ಡ್‌ ವರ್ಷನ್‌ 9, ಬೆಲೆ 28,990 ರುಪಾಯಿ ಮಾತ್ರ!

ತೂಕ ಹಾಕಿದರೆ ಕೇವಲ 185 ಗ್ರಾಮ್‌ ತೂಗುವ ವಿವೋ 1818 ಮಾಡೆಲ್‌ನ ಈ ಫೋನಿನ ಅಧಿಕೃತ ಹೆಸರು ವಿ15 ಪ್ರೊ. ಅಂಗೈಯಲ್ಲಿ ಸರಿಯಾಗಿ ಹುದುಗಿಸಬಲ್ಲಷ್ಟುದೊಡ್ಡದು. ಹಿಂಬದಿಯಲ್ಲಿ ಹೊಳೆವ ನೀಲಿಯ ಬೆನ್ನುಕಟ್ಟು. ಅದಕ್ಕೊಂದು ಕವರ್‌ ಕೂಡ ಜೊತೆಗೇ ಬರುತ್ತದೆ.  ಅದು ನೆಲಕ್ಕೆ ತಾಗದಂತೆ ರಕ್ಷಿಸುತ್ತದೆ ಅನ್ನುವುದೊಂದು ಹೆಗ್ಗಳಿಕೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಮತ್ತು ಜಿಯೋನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ!

ಇನ್‌ ಡಿಸ್‌ಪ್ಲೇ ಫಿಂಗರ್‌ ಪ್ರಿಂಟ್‌ ಸ್ಕಾನರ್‌ ಉಂಟು. ಅದು ಚೆನ್ನಾಗಿಯೂ ಕೆಲಸ ಮಾಡುತ್ತದೆ. ಫ್ರಂಟ್‌ ಕೆಮರಾ ಫೇಕ್‌ ರೆಕಗ್ನಿಷನ್‌ ಬೇಕಾದಾಗೆಲ್ಲ ಫಟ್ಟನೆ ಹುತ್ತದಿಂದ ತಲೆಯೆತ್ತುವ ನಾಗರ ಹಾವಿನ ನಾಲಗೆಯಂತೆ ಹೊರಗೆ ಬಂದು ಒಳಸೇರಿಕೊಳ್ಳುತ್ತದೆ. ಆ ವೇಗ ನಿಜಕ್ಕೂ ಚೆನ್ನಾಗಿದೆ. ಆದರೆ ಅದು ಕೊನೆ ತನಕ ಹಾಗೆಯೇ ಉಳಿಯುತ್ತದಾ? ಅದಕ್ಕೆ ಸಂಬಂಧಿಸಿದ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಸಮಸ್ಯೆಗಳೇನು ಅನ್ನುವುದನ್ನು ಈಗಲೇ ಯಾಕೆ ಯೋಚಿಸಬೇಕು?

ಇದನ್ನೂ ಓದಿ: ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಫೋನ್ ಲಿಸ್ಟ್ ಔಟ್: ನಿಮ್ಮದು ಯಾವುದು?

ಫೋಟೋ ವಿಚಾರದಲ್ಲಂತೂ ಇದು ಅಗ್ರಗಣ್ಯ. ಒಂದೊಂದು ಫೋಟೋವನ್ನೂ ಬೇಕಾದಂತೆ ಮಣಿಸಿಕೊಳ್ಳಬಹುದು. ಸೆಲ್ಪೀ ತೆಗೆದು ಆಳೆತ್ತರದ ಪೋಸ್ಟರ್‌ ಮಾಡಿಸಿಕೊಳ್ಳಬಹುದು. ಬೇರೆ ಬೇರೆ ಎಫೆಕ್ಟುಗಳನ್ನು ತುಂಬಬಹುದು. ಬಣ್ಣ ಬದಲಾಯಿಸಬಹುದು. ಇಂಥವು ಎಲ್ಲೂ ಫೋನುಗಳಲ್ಲೂ ಇರುವಂಥದ್ದೇ ಆದರೂ ಇದು ಅವುಗಳನ್ನೇ ಒಂದಷ್ಟುಅಚ್ಚುಕಟ್ಟಾಗಿ ಮಾಡುತ್ತದೆ ಅನ್ನಿಸುವುದಕ್ಕೆ ಕಾರಣ ವೇಗ.

ಈಗೀಗ ಸ್ಮಾರ್ಟ್‌ ಫೋನುಗಳು ಇಯರ್‌ಫೋನ್‌ ಕೊಡುವುದಿಲ್ಲ. ಆದರೆ ಈ ಪೆಟ್ಟಿಗೆಯೊಳಗೆ ಏನೇನೆಲ್ಲ ಇದೆ. ಸ್ಕ್ರೀನ್‌ ಗಾರ್ಡ್‌ ಜೊತೆಗೇ ಇರುತ್ತದೆ. ಪ್ರೊಟೆಕ್ಟಿವ್‌ ಕೇಸ್‌ ಕೊಡುತ್ತಾರೆ. ಕೇಸ್‌ ಹಾಕದೇ ಹೋದರೆ ಇದು ನಿಜಕ್ಕೂ ಸ್ಲಿಮ್‌ ಫೋನು. ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ ಇದನ್ನು ಕಾಪಾಡುವ ಕವಚಕ್ಕೇ ಭಾರ ಜಾಸ್ತಿ.

ಇದನ್ನೂ ಓದಿ: ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

ಈ ಫೋನ್‌ ಎಡಬದಿಯಲ್ಲೊಂದು ಸ್ಮಾರ್ಟ್‌ ಬಟನ್‌ ಇದೆ. ಅದನ್ನು ಒತ್ತಿದರೆ ಗೂಗಲ್‌ ಅಸಿಸ್ಟೆಂಟ್‌ ಹಾಜರಾಗುತ್ತಾನೆ. ಈ ಬಟನ್‌ಗೆ ಬೇಕುಬೇಕಾದ್ದೆಲ್ಲವನ್ನೂ ಹೊಂದಿಕೆ ಮಾಡಿಕೊಳ್ಳಬಹುದು. ಐಫೋನ್‌ ಥರದ ಒಂದು ಅಸಿಸ್ಟಿವ್‌ ಟಚ್‌ ಬಟನ್‌ ಕೂಡ ಪರದೆಯ ಮೇಲೆ ತೇಲಾಡುತ್ತಿರುತ್ತದೆ. ಅದನ್ನು ಒತ್ತಿದರೆ ಈಚೀಚೆಗೆ ಬಳಸಿದ ಆ್ಯಪ್‌ಗಳು ಕಾಣಸಿಗುತ್ತವೆ. ಜೊತೆಗೇ ಆಡಿಯೋ ರೆಕಾರ್ಡರ್‌, ಕ್ಯಾಲ್ಕುಲೇಟರ್‌, ಸ್ಕ್ರೀನ್‌ ಲಾಕ್‌ ,ಸೈಲೆಂಟ್‌ ಮೋಡ್‌ ಇತ್ಯಾದಿಗಳು ಇವೆ. ಕಾರ್‌ ಮೋಡ್‌ ಥರ ಮೋಟರ್‌ ಬೈಕ್‌ ಮೋಡ್‌ ಕೂಡ ಇದೆ. ಕಾರಿನ ಬದಲು ಮೋಟರ್‌ಬೈಕ್‌ ಅಂತಿದೆ ಎನ್ನುವುದನ್ನು ಬಿಟ್ಟರೆ ಅದರಲ್ಲಿ ಅಂಥ ವ್ಯತ್ಯಾಸ ಇಲ್ಲ.

ನಿಜಕ್ಕೂ ಆಕರ್ಷಕವಾಗಿರುವುದು ಥೀಮ್‌. ಮೈ ಹೌಸ್‌ ಥೀಮ್‌ಗೆ ಫೋನನ್ನು ಸೆಟ್‌ ಮಾಡಿದರೆ ಎಲ್ಲೆಲ್ಲಿ ಏನೇನಿದೆ ಎಂದು ಹುಡುಕುವುದೇ ಒಂದು ಆಟ. ಅನೇಕ ಗೆಶ್ಚರ್‌ಗಳೂ ಇಲ್ಲಿವೆ. ಅವನ್ನೆಲ್ಲ ಒಂದಷ್ಟುದಿನ ಆಟ ಆಡ್ತಾ ಆಡ್ತಾ ಬಳಸುತ್ತಿರಬಹುದು. ವಿವೋ ಕಡಿಮೆ ಬೆಲೆಯ ಪೋನುಗಳನ್ನು ಮಾರುಕಟ್ಟೆಗೆ ಬಿಡುತ್ತಿತ್ತು. ಇದೀಗ ಪ್ರೀಮಿಯರ್‌ ಸೆಗ್ಮೆಂಟಿಗೆ ಲಗ್ಗೆ ಹಾಕುತ್ತಾ ವನ್‌ ಪ್ಲಸ್‌ ಸಿಕ್ಸ್‌ ದಾರಿ ಹಿಡಿದಂತೆ ಕಾಣಿಸುತ್ತದೆ