ರಿಚ್‌ಮಂಡ್(ಸೆ.08): ಕುಡಿದು ವಾಹನ ಚಲಾಯಿಸುವುದನ್ನ ತಪ್ಪಿಸಲು ಪೊಲೀಸರು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಇಷ್ಟೇ ಅಲ್ಲ ಸಂಜೆಯಾದರೆ ಸಾಕು ಪೊಲೀಸರು ಅಲ್ಕೋಹಾಲ್ ಟೆಸ್ಟ್ ಮಶಿನ್ ಹಿಡಿದು ವಾಹನ ಸವಾರರನ್ನ ಪರೀಶಿಲಿಸುತ್ತಾರೆ. ಇಷ್ಟೇ ಅಲ್ಲ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಆಲ್ಕೋಹಾಲ್ ಅಂಶ ಕಂಡುಬಂದಲ್ಲಿ ದಂಡ ವಿಧಿಸಲಾಗುತ್ತಿದೆ.

ಪೊಲೀಸರು ಅದೆಷ್ಟೇ ದಂಡ ಹಾಕಿದರೂ, ಎಚ್ಚರಿಕೆ ನೀಡಿದರೂ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ವರದಿಯಾಗುತ್ತಲೇ ಇದೆ. ಆದರೆ ವರ್ಜೀನಿಯಾ ಸರ್ಕಾರ ಕುಡಿದು ವಾಹನ ಚಲಾವಣೆ ತಪ್ಪಿಸಲು ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.

ವರ್ಜೀನಿಯಾ ಸಾರಿಗೆ ಇಲಾಖೆ , ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದೆ. ಈ ನೂತನ ತಂತ್ರಜ್ಞಾನವನ್ನ ವಾಹನದಲ್ಲಿ ಅಳವಡಿಸಲಾಗುತ್ತೆ. ಇದರಲ್ಲಿರುವ ಸೆನ್ಸಾರ್ ಚಾಲಕನ ಆಲ್ಕೋಹಾಲ್ ಪ್ರಮಾಣವನ್ನ ಅಳೆಯುತ್ತದೆ. 

ಚಾಲಕ ಶೇಕಡಾ 0.8ರ ಪ್ರಮಾಣಕ್ಕಿಂತ ಹೆಚ್ಚು ಆಲ್ಕೋಹಾಲ್ ಸೇವಿಸಿದ್ದರೆ ಸೆನ್ಸಾರ್ ವಾಹನ ಇಂಜಿನ್‌ಗೆ ಸಂಕೇತ ರವಾನಿಸಲಿದೆ. ಇಷ್ಟೇ ಅಲ್ಲ ಇಂಜಿನ್ ಸ್ಟಾರ್ಟ್ ಆಗೋದನ್ನ ತಂತ್ರಜ್ಞಾನ ತಡೆಯಲಿದೆ. 

ವರ್ಜೀನಿಯಾ ಸರ್ಕಾರ ಈ ಮಹತ್ವದ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಸದ್ಯ ಅಭಿವೃದ್ದಿ ಹಂತದಲ್ಲಿರುವ ಈ ತಂತ್ರಜ್ಞಾನ ಶೀಘ್ರದಲ್ಲೇ ವರ್ಜೀನಿಯಾ ಸಾರಿಗೆ ಬಸ್ ಹಾಗೂ ಖಾಸಗಿ ಚಾರ್ಟರ್ ಬಸ್ ಕಂಪೆನಿಯ ವಾಹನಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಈ ಹೊಸ ತಂತ್ರಜ್ಞಾನ ಯಶಸ್ವಿಯಾದರೆ ಶೀಘ್ರದಲ್ಲೇ ಭಾರತಕ್ಕೆ ಕಾಲಿಡಲಿದೆ. ಹೀಗಾದಲ್ಲಿ ಪೊಲೀಸರ ಬಹುದೊಡ್ಡ ತಲೆನೋವು ತಪ್ಪಲಿದೆ.