ನವದೆಹಲಿ: ಇತ್ತೀಚೆಗೆ ಫೇಸ್‌ಬುಕ್‌, ವಾಟ್ಸಪ್‌, ಟ್ವೀಟರ್‌ನಲ್ಲಿನ ತಪ್ಪು ಮಾಹಿತಿಗಳು ಜನರ ದಾರಿ ತಪ್ಪಿಸಿ ಅನೇಕ ಹಿಂಸಾತ್ಮಕ ಘಟನೆಗಳು ನಡೆದಿದ್ದುಂಟು. ಇದರ ಬೆನ್ನಲ್ಲೇ ವಾಟ್ಸಪ್‌ ಮೇಲೆ ಕೇಂದ್ರ ಸರ್ಕಾರವು ‘ಪ್ರಹಾರ’ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜನಪ್ರಿಯ ಸಾಮಾಜಿಕ ಮಾಧ್ಯಮ ‘ಫೇಸ್‌ಬುಕ್‌’, ತನ್ನಲ್ಲಿನ ದಾರಿ ತಪ್ಪಿಸುವ ಅಂಶಗಳ ಮೇಲೆ ನಿಗಾ ವಹಿಸಲು ನಿರ್ಧರಿಸಿದ್ದು, ಜರ್ಮನಿ ಮಾದರಿಯಲ್ಲಿ ಭಾರತದಲ್ಲೂ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದೆ.

ಜರ್ಮನಿಯಲ್ಲಿ ಅರ್ವಾಟೋ ಎಂಬ ಕಂಪನಿಯ ಜತೆ ಫೇಸ್‌ಬುಕ್‌ ಒಪ್ಪಂದ ಮಾಡಿಕೊಂಡಿದೆ. ಅಲ್ಲಿ ಯಾವುದಾದರೂ ಆಕ್ಷೇಪಾರ್ಹ ಅಂಶವಿದ್ದರೆ, ಆ ಅಂಶವು ಪ್ರಕಟವಾದ 48 ಗಂಟೆಗಳಲ್ಲಿ ತೆಗೆದು ಹಾಕುವ ಕಾರ್ಯವನ್ನು ಅರ್ವಾಟೋ ಮಾಡುತ್ತದೆ. ಇಲ್ಲದಿದ್ದರೆ, ಆಕ್ಷೇಪಾರ್ಹ ಅಂಶ ಪ್ರಕಟವಾಗಿದ್ದಕ್ಕೆ ಜರ್ಮನಿಯಲ್ಲಿ ದಂಡ ವಿಧಿಸುವ ಕಾನೂನಿದೆ.

ಇದೇ ಮಾದರಿಯಲ್ಲಿ ಫೇಸ್‌ಬುಕ್‌ 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಭಾರತದಲ್ಲಿ ಆಕ್ಷೇಪಾರ್ಹ ಅಂಶಗಳನ್ನು ತೆಗೆಯುವ ಹೊಣೆಯನ್ನು ಹೊರಗುತ್ತಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಹುಶಃ ಅರ್ವಾಟೋಗೇ ಈ ಗುತ್ತಿಗೆ ಹೋಗಬಹುದು ಎಂದೂ ಹೇಳಲಾಗಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅರ್ವಾಟೋ ನಿರಾಕರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.