ಬೆಂಗಳೂರು :  ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪನಿ ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿಗೆ ಮುಂದಾಗಿದೆ. ಬಿಎಸ್‌ಎನ್‌ಎಲ್ ಇನ್ನು ಮುಂದೆ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ಆರಂಭಿಸಲಿದೆ. ಇದು ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನು ಉಂಟು ಮಾಡುವ ಸಾಧ್ಯತೆ ಇದೆ. 

ಇದುವರೆಗೆ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೇವೆ ಎಂಬುದು ಜಾರಿಗೆ ಬಂದಿಲ್ಲ. 2013 ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿ ಬಳಿಕ ತಾಂತ್ರಿಕ ಕಾರಣಕ್ಕೆ ಕೈಬಿಟ್ಟಿತ್ತು. ಮೊಬೈಲ್ ಹಾಗೂ ವಿಲ್ ದೂರವಾಣಿಯಲ್ಲಿ ಈಗಾಗಲೇ ಈ ಸೌಲಭ್ಯ ಇದೆ. ಆದರೆ ಸ್ಥಿರ ದೂರವಾಣಿಯಲ್ಲಿ ಇದೇ ಮೊದಲ ಬಾರಿಗೆ ಪ್ರೀಪೇಯ್ಡ್ ಕರೆ ಸೇವೆ ಸಿಗಲಿದೆ. ಡಿಜಿಟಲ್ ಇಂಡಿಯಾ ಕಲ್ಪನೆಯಂತೆ ಸ್ಥಿರ ದೂರವಾಣಿಯನ್ನು ಪ್ರೀಪೇಯ್ಡ್ ಸೌಲಭ್ಯದಡಿ ತರಲಾಗುತ್ತಿದೆ.

ಏನಿದು ಪ್ರೀಪೇಯ್ಡ್ ಸೌಲಭ್ಯ?: ಪ್ರತಿಯೊಂದು ದೂರವಾಣಿ ವಿನಿಮಯ ಕೇಂದ್ರ (ಟೆಲಿಕಾಂ ಎಕ್ಸ್‌ಚೇಂಜ್)ಗಳಲ್ಲಿ ಇರುವ ಹಾಲಿ ತಾಂತ್ರಿಕ ವ್ಯವಸ್ಥೆಯಲ್ಲೇ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಕೇಂದ್ರ ಅಥವಾ ಕೇಬಲ್ ಬೇಕಾಗಿಲ್ಲ. ನೆಕ್ಸ್ಟ್ ಜನರೇಷನ್ ನೆಟ್‌ವರ್ಕ್ಸ್ (ಎನ್‌ಜಿಎನ್) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನದ ಪ್ರತ್ಯೇಕ ಸರ್ವರ್‌ಗಳನ್ನು ಎಲ್ಲ ಟೆಲಿಕಾಂ ಎಕ್ಸ್‌ಚೇಂಜ್ ಗಳಲ್ಲಿ ಅಳವಡಿಸಲಾಗುತ್ತದೆ. ಇದರಿಂದಲೇ ಮನೆಯ ಸ್ಥಿರ ದೂರವಾಣಿಯಲ್ಲಿ ಪ್ರೀಪೇಯ್ಡ್ ಸೌಲಭ್ಯವನ್ನು ನಿಯಂತ್ರಿಸಲಾಗುತ್ತದೆ.

ಹೊಸ ಫೋನ್ ಖರೀದಿಸಬೇಕು: ಸ್ಥಿರ ದೂರವಾಣಿ ಪ್ರೀಪೇಯ್ಡ್ ಹೊಸ ಸಂಪರ್ಕ ಪಡೆಯಲು ಠೇವಣಿ, ಅನುಷ್ಠಾನ ಶುಲ್ಕವನ್ನು ನೀಡಬೇಕಾಗಿಲ್ಲ. ಬಿಎಸ್‌ಎನ್‌ಎಲ್‌ನಿಂದ ಪ್ರತ್ಯೇಕವಾಗಿ ಸ್ಥಿರ ದೂರವಾಣಿ ಸೆಟ್‌ನ್ನು ಪಡೆದುಕೊಂಡರೆ ಸಾಕು. ಹಾಲಿ ಸ್ಥಿರ ದೂರ ವಾಣಿ ಸಂಪರ್ಕ  ಹೊಂದಿರುವವರಿಗೆ ಬಿಎಸ್ ಎನ್‌ಎಲ್ ವತಿಯಿಂದಲೇ ಹೊಸ ದೂರವಾಣಿ ಸೆಟ್ ಪೂರೈಕೆಯಾಗಲಿದೆ. ಇದಕ್ಕಾಗಿ 625 ರು. ಪಾವತಿಸಬೇಕು. ಪ್ರೀಪೇಯ್ಡ್ ಸೌಲಭ್ಯ ಪಡೆಯುವುದನ್ನು ಆಯಾ ಗ್ರಾಹಕರ ಆಯ್ಕೆಗೆ ಬಿಡಲಾಗಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸುತ್ತವೆ.

ಮೌಲ್ಯವರ್ಧಿತ ಸೇವೆ: ಪ್ರೀಪೇಯ್ಡ್ ಸ್ಥಿರ ದೂರವಾಣಿ ಸೌಲಭ್ಯವು ಸ್ಥಿರ ದೂರವಾಣಿಯಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡಲಿದೆ. ಈಗಿನಂತೆ ಕಂಪ್ಯೂಟರ್‌ನಲ್ಲಿ ವೇಗದ ಇಂಟರ್ ನೆಟ್ ಬಳಸಲು, ಸ್ಥಿರ ದೂರವಾಣಿಯಲ್ಲಿ ಮೊಬೈಲ್ ಮಾದರಿಯ ಸೇವೆ ನೀಡಲು ಸಾಧ್ಯವಾಗಲಿದೆ. ಮೊಬೈಲ್‌ನಂತೆ ವೋಚರ್ ಕಾರ್ಡ್‌ನ್ನು ಪಡೆದು ಸ್ಥಿರ ದೂರವಾಣಿಯಲ್ಲೇ ರೀಚಾರ್ಜ್ ಮಾಡಿಸಿಕೊಳ್ಳಲು ಅವಕಾಶ ಇದೆ. ಇಲ್ಲವೇ ಬಿಎಸ್‌ಎನ್‌ಎಲ್ ಕಚೇರಿ ಅಥವಾ ಗ್ರಾಹಕ ಕೇಂದ್ರಗಳಿಗೆ ತೆರಳಿಯೂ ರೀಚಾರ್ಜ್ ಮಾಡಿಸಬಹುದು.

ಈಗಿನ ಮಾಹಿತಿಯಂತೆ ಕನಿಷ್ಠ 10 ರು.ನಿಂದ ಗರಿಷ್ಠ 200 ರು.ವರೆಗೆ ರೀಚಾರ್ಜ್ ಟಾರಿಫ್ ಅನ್ನು ಆರಂಭದ ಹಂತದಲ್ಲಿ ನೀಡಲಾಗಿದೆ. ಅಲ್ಲದೆ ವಾರ್ಷಿಕ 1999 ರು.ಗಳ ಟಾರಿಫ್‌ನ್ನೂ ನೀಡಲಾಗಿದೆ. ಮಾಸಿಕ ಯಾವುದೇ ನೆಟ್‌ವಕ್ ಗರ್ಳಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆದುಕೊಳ್ಳುವ ಇಂಗಿತವನ್ನು ಬಿಎಸ್‌ಎನ್‌ಎಲ್ ಹೊಂದಿದೆ. ಮೊಬೈಲ್ ಪೈಪೋಟಿಯ ಭರದಲ್ಲಿ ಸ್ಥಿರ ದೂರವಾಣಿ ಕಣ್ಮರೆಯಾಗುತ್ತಿದೆ. ಅಂತಹ ವೇಳೆ ಸ್ಥಿರ ದೂರವಾಣಿಯ ಪ್ರೀಪೇಯ್ಡ್ ಸೌಲಭ್ಯ  ಬಂದಿದ್ದು ಆಶಾದಾಯಕವಾಗಿದೆ.