ಬೆಂಗಳೂರು(ನ.26): ವಿಮಾ ಪಾಲಿಸಿಗಳ ಕಂತು ಪಾವತಿ ಇನ್ಮುಂದೆ ಸುಲಭವಾಗಿದೆ.  ಭಾರತೀಯ ಜೀವ ವಿಮಾ ನಿಗಮ ಸೇರಿದಂತೆ 30ಕ್ಕೂ ಹೆಚ್ಚು ವಿಮಾ ಕಂಪೆನಿಗಳ ಕಂತು ಪಾವತಿಸಲು ಅಲೆದಾಡಬೇಕಿಲ್ಲ. ಇದೀಗ ಪೇಟಿಎಂ ಮೂಲಕ ವಿಮಾ ಕಂತು ಪಾವತಿಗೆ ಅವಕಾಶ ನೀಡಲಾಗಿದೆ.

ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಪೇಟಿಎಂ, ಇದಕ್ಕೆ ಸಂಬಂಧಿಸಿದಂತೆ ಭಾರತದ ಅತ್ಯಂತ ಬೃಹತ್ ವಿಮಾ ಸಂಸ್ಥೆಯಾದ `ಭಾರತೀಯ ಜೀವ ವಿಮಾ ನಿಗಮ’ದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಎಲ್ಐಸಿ ಪಾಲಿಸಿದಾರರು ಇನ್ನುಮುಂದೆ ಕ್ಷಣಾರ್ಧದಲ್ಲಿ, ಆನ್-ಲೈನ್ ಮೂಲಕ ತಮ್ಮ ಕಂತಿನ ಮೊತ್ತವನ್ನು ಪಾವತಿಸುವುದು ಸಾಧ್ಯವಾಗಲಿದೆ. ಇದಲ್ಲದೆ, ಮುಂಚೂಣಿ ವಿಮಾ ಸಂಸ್ಥೆಗಳಾದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್, ರಿಲಯನ್ಸ್ ಲೈಫ್, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್, ಎಚ್ ಡಿಎಫ್ ಸಿ ಲೈಫ್, ಟಾಟಾ ಎಐಎ,  ಸೇರಿದಂತೆ 30ಕ್ಕೂ ಹೆಚ್ಚು ಸಂಸ್ಥೆಗಳ ಜೀವವಿಮೆ ಕಂತುಗಳನ್ನು ಕೂಡ ಪೇಟಿಎಂ ಮೂಲಕ ಆನ್-ಲೈನ್ ನಲ್ಲಿ ಸುಲಭವಾಗಿ ಪಾವತಿಸಬಹುದು.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ವಿಮಾ ಕಂತುಗಳನ್ನು ಹೆಚ್ಚಿನ ಪಾಲಿಸಿದಾರರು ಸಾಂಪ್ರದಾಯಿಕ ಮಾದರಿಯಲ್ಲೇ ಪಾವತಿಸುತ್ತಿದ್ದಾರೆ. ಇಂತಹ ಕೋಟ್ಯಂತರ ಪಾಲಿಸಿದಾರರು ಸುಗಮವಾಗಿ ಮತ್ತು ಸುಲಭವಾಗಿ, ಕೇವಲ ಅರೆಕ್ಷಣದಲ್ಲಿ ತಾವಿದ್ದ ಜಾಗದಿಂದಲೇ ಆನ್-ಲೈನ್ ಮೂಲಕ ಕಂತುಗಳನ್ನು ಪಾವತಿಸುವಂತೆ ಮಾಡಲಾಗಿದೆ. ಎಂದು ಪೇಟಿಎಂ ಸಂಸ್ಥೆಯ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ.