ಲ್ಯಾಂಡರ್, ರೋವರ್ ಸಂಪರ್ಕ ಬಹುತೇಕ ಅಸಾಧ್ಯ!
ಲ್ಯಾಂಡರ್, ರೋವರ್ ಸಂಪರ್ಕ ಇನ್ನು ಬಹುತೇಕ ಅಸಾಧ್ಯ: ಇಸ್ರೋ| ಈ ಎರಡು ಉಪಕರಣಗಳು ಹೆಚ್ಚುಕಮ್ಮಿ ನಮ್ಮ ಕೈತಪ್ಪಿದಂತೆಯೇ ಆಗಿದೆ| ಇನ್ನೇನೂ ಭರವಸೆ ಉಳಿದಿಲ್ಲ
ಬೆಂಗಳೂರು[ಸೆ.08]: ಚಂದ್ರಯಾನ-2 ಯೋಜನೆಯ ಎರಡು ಅತ್ಯಂತ ಪ್ರಮುಖ ಉಪಕರಣಗಳಾದ ವಿಕ್ರಂ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ಜೊತೆ ಸಂಪರ್ಕ ಮರುಸ್ಥಾಪಿಸುವುದು ಬಹುತೇಕ ಅಸಾಧ್ಯ ಎಂದು ಇಸ್ರೋ ತಿಳಿಸಿದೆ.
‘ಈ ಎರಡು ಉಪಕರಣಗಳು ಹೆಚ್ಚುಕಮ್ಮಿ ನಮ್ಮ ಕೈತಪ್ಪಿದಂತೆಯೇ ಆಗಿದೆ. ಲ್ಯಾಂಡರ್ ಜೊತೆ ಸಂಪರ್ಕ ಕಡಿತವಾಗಿದೆ. ಇನ್ನೇನೂ ಭರವಸೆ ಉಳಿದಿಲ್ಲ. ಅವುಗಳ ಜೊತೆ ಸಂಪರ್ಕ ಮರುಸ್ಥಾಪಿಸುವುದು ಬಹಳ ಬಹಳ ಕಷ್ಟ’ ಎಂದು ಚಂದ್ರಯಾನ-2 ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಅದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಸಿವನ್, ‘ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ನಾವು ಯೋಜಿಸಿದಂತೆಯೇ ನಡೆಯುತ್ತಿತ್ತು. ಚಂದ್ರನಿಂದ 2.1 ಕಿ.ಮೀ. ದೂರದವರೆಗೂ ಅದು ಸರಿಯಾಗಿ ಸಾಗುತ್ತಿತ್ತು. ನಂತರ ಇದ್ದಕ್ಕಿದ್ದಂತೆ ಲ್ಯಾಂಡರ್‌ನಿಂದ ಭೂಮಿಗೆ ಸಂದೇಶ ಬರುವುದು ನಿಂತುಹೋಯಿತು. ಈ ಕುರಿತ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದರು.
ಸಂಪೂರ್ಣ ದೇಸಿ ತಂತ್ರಜ್ಞಾನವನ್ನು ಬಳಸಿ 1471 ಕೆ.ಜಿ. ತೂಕದ ಲ್ಯಾಂಡರನ್ನು ಇಸ್ರೋ ರೂಪಿಸಿತ್ತು. ಅದಕ್ಕೆ ದೇಶದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ
ವಿಕ್ರಂ ಸಾರಾಭಾಯ್ ಅವರ ಹೆಸರಿಡಲಾಗಿತ್ತು. ಲ್ಯಾಂಡರ್ ಚಂದ್ರನ ನೆಲದ ಮೇಲೆ ಮೆತ್ತಗೆ ಇಳಿದು ಚಂದ್ರನ ಒಂದು ದಿನದಷ್ಟುಕಾಲ, ಅಂದರೆ ಭೂಮಿಯ 14 ದಿನಗಳ ಕಾಲ, ಕಾರ್ಯ ನಿರ್ವಹಿಸಬೇಕಿತ್ತು. ಲ್ಯಾಂಡರ್ ಇಳಿದ ಮೇಲೆ ಅದರೊಳಗಿದ್ದ 27 ಕೆ.ಜಿ. ತೂಕದ, ಆರು ಚಕ್ರಗಳ ರೋಬೋಟಿಕ್ ಯಂತ್ರವಾದ ಪ್ರಜ್ಞಾನ್ ರೋವರ್ ಹೊರಗೆ ಬಂದು ಚಂದ್ರನ ನೆಲದ ಮೇಲೆ 500 ಮೀಟರ್ ಸಂಚರಿಸಿ ಚಂದ್ರನನ್ನು ಅಧ್ಯಯನ ಮಾಡಬೇಕಿತ್ತು.
ಲ್ಯಾಂಡರ್‌ನಲ್ಲಿ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲು ಮೂರು ವೈಜ್ಞಾನಿಕ ಉಪಕರಣಗಳಿದ್ದವು. ಹಾಗೆಯೇ ರೋವರ್‌ನಲ್ಲಿ ಚಂದ್ರನ ಮೇಲ್ಮೈಯನ್ನು ಇನ್ನಷ್ಟುಹೆಚ್ಚಿನ ಅಧ್ಯಯನ ನಡೆಸಲು ಎರಡು ವೈಜ್ಞಾನಿಕ ಉಪಕರಣಗಳಿದ್ದವು. ಲ್ಯಾಂಡರ್‌ನ ಸಂಪರ್ಕ ಕಡಿತಗೊಂಡಿರುವುದರಿಂದ ಅದರೊಳಗಿರುವ ಈ ಎಲ್ಲ ಉಪಕರಣಗಳ ಸಂಪರ್ಕವೂ ಕಡಿತಗೊಂಡಂತಾಗಿದೆ.