ವಾಷಿಂಗ್ಟನ್‌[ಸೆ.19]: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ- 2 ಲ್ಯಾಂಡರ್‌ನ ಸ್ಪಷ್ಟಫೋಟೋ ತೆಗೆಯುವ ನಾಸಾದ ಯತ್ನವೂ ವಿಫಲವಾಗಿದೆ ಎನ್ನಲಾಗಿದೆ. ವಿಕ್ರಮ್‌ ಲ್ಯಾಂಡರ್‌ ಇರುವ ಸ್ಥಳದ ಮೇಲ್ಗಡೆಯಿಂದ ಮಂಗಳವಾರ ಹಾದು ಹೋದ ನಾಸಾ ಆರ್ಬಿಟರ್‌ ಅಸ್ಪಷ್ಟಚಿತ್ರವೊಂದನ್ನು ಸೆರೆ ಹಿಡಿದಿದೆ.

ಆ ಚಿತ್ರದಲ್ಲಿ ವಿಕ್ರಮ್‌ ಲ್ಯಾಂಡರ್‌ ಗುರುತಿಸುವುದು ಸಾಧ್ಯವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಈ ಕುರಿತು ಇದುವರೆಗೆ ಇಸ್ರೋ ಅಥವಾ ನಾಸಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರಾತ್ರಿ ಸಮಯ (ಭೂಮಿಯ 14 ದಿನ ಚಂದ್ರನ 1ದಿನಕ್ಕೆ ಸಮ) ಆರಂಭವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಭಾರೀ ಕತ್ತಲು ಕವಿಯಲು ಆರಂಭಿಸಿದೆ. ಜೊತೆಗೆ ಲ್ಯಾಂಡರ್‌ ಅಪ್ಪಳಿಸಿದ ಸ್ಥಳದ ಮೇಲೆ ಸುತ್ತಲಿನ ಪ್ರದೇಶದ ನೆರಳು ಕೂಡಾ ಬೀಳಲಾರಂಭಿಸಿದೆ. ಹೀಗಾಗಿ ಲ್ಯಾಂಡರ್‌ನ ಸ್ಪಷ್ಟಚಿತ್ರ ತೆಗೆಯುವುದು ನಾಸಾಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮತ್ತೆ ಸ್ವಲ್ಪ ಬೆಳಕು ಮೂಡುವುದಕ್ಕೆ ಸೆ.20ರ ಬಳಿಕ ಮತ್ತೆ 14 ದಿನ ಬೇಕು. ಆಗ ಮತ್ತೆ ನಾಸಾದ ಆರ್ಬಿಟರ್‌ ಲ್ಯಾಂಡರ್‌ ಬಿದ್ದ ಸ್ಥಳದಲ್ಲಿ ಹಾರಾಡಿದಾಗ ಮತ್ತೆ ಸ್ಪಷ್ಟಚಿತ್ರ ತೆಗೆಯುವ ಅವಕಾಶ ಸಿಗಲಿದೆ.