ಆ್ಯಪಲ್ ತನ್ನ ಆ್ಯಪ್ ಸ್ಟೋರ್‌ನಿಂದ ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ‘ಟಂಬ್ಲರ್’ನ್ನು ತೆಗೆದು ಹಾಕಿದೆ.

ಈ ಕ್ರಮಕ್ಕೆ ಯಾವುದೇ ಸ್ಪಷ್ಟ ಕಾರಣವನ್ನು ತಿಳಿಸದಿದ್ದರೂ, ಟಂಬ್ಲರ್ ತನ್ನ ಬಳಕೆದಾರರಿಗೆ ಲೈಂಗಿಕ ಕಂಟೆಟ್‌ಗಳನ್ನು ಅಪ್ಲೋಡ್, ವಿನಿಮಯ ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 

ಆ್ಯಪ್ ಸ್ಟೋರ್‌ನಲ್ಲಿ ತನ್ನ ಆ್ಯಪ್ ನಾಪತ್ತೆಯಾಗಿರುವ ಬಗ್ಗೆ ನ.18ರಂದು ಟಂಬ್ಲರ್, ಹೆಲ್ಪ್ ಸೆಂಟರ್ ಗಮನಕ್ಕೆ ತಂದಿದ್ದು, ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ತನ್ನ ಬಳಕೆದಾರರಿಗೆ ಹೇಳಿತ್ತು. ಆದರೆ ಆ್ಯಪಲ್ ಆಗಲಿ, ಟಂಬ್ಲರ್ ಆಗಲಿ ಆ ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಫೆಬ್ರವರಿಯಲ್ಲಿ, ಕಾನೂನುಬಾಹಿರ ಕಂಟೆಟ್, ವಿಶೇಷವಾಗಿ ಚೈಲ್ಡ್ ಪೋರ್ನ್‌ನಂತಹ ಕಂಟೆಟ್‌ಗಳು ವಿನಿಮಯವಾಗುತ್ತಿರುವ ಹಿನ್ನೆಲೆಯಲ್ಲಿ, ಆ್ಯಪಲ್ ತನ್ನ ಆ್ಯಪ್ ಸ್ಟೋರ್‌ನಿಂದ ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂನ್ನು ಕೂಡಾ ತೆಗೆದು ಹಾಕಿತ್ತು.

ಆ್ಯಪಲ್ ನಿಯಮಗಳ ಪ್ರಕಾರ, ತನ್ನ ಆ್ಯಪ್ ಸ್ಟೋರ್‌ನಲ್ಲಿ ಸ್ಥಾನ ಪಡೆಯಬೇಕಾದರೆ, ಆ್ಯಪ್ ಅಭಿವೃದ್ಧಿಪಡಿಸುವವರು ಕಾನೂನು ಬಾಹಿರ ವಿಷಯಗಳನ್ನು ಬೇರ್ಪಡಿಸುವಂತೆ ಕಂಟೆಂಟ್ ಫಿಲ್ಟರ್ ಹೊಂದಿರುವುದು ಕಡ್ಡಾಯವಾಗಿದೆ. 

ಆ್ಯಪ್ ತೆಗೆದುಹಾಕಲಾದ ಕೆಲವೇ ಗಂಟೆಗಳಲ್ಲಿ, ಟೆಲಿಗ್ರಾಂ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು, ಆ್ಯಪ್ ಸ್ಟೋರ್‌ಗೆ ವಾಪಾಸು ಬಂದಿತ್ತು.

ಅದೇ ರೀತಿ, ಟಂಬ್ಲರ್‌ನ್ನು ಕೂಡಾ ಲೈಂಗಿಕ ಕಂಟೆಟ್‌ಗಳನ್ನು ಯಾವುದೇ ಕಂಟೆಂಟ್ ಫಿಲ್ಟರ್‌ಗಳಿಲ್ಲದೇ ಅಪ್ಲೋಡ್ ಹಾಗೂ ವಿನಿಮಯ ಮಾಡಿಕೊಳ್ಳಲು ಬಳಸಲಾಗುತ್ತಿದೆ.

ಇಂಡೋನೇಶಿಯಾದಲ್ಲಿ ಟಂಬ್ಲರ್‌ಗೆ  ಹಿಂದೊಮ್ಮೆ ಒಂದು ದಿವಸದ ಮಟ್ಟಿಗೆ ನಿಷೇಧ ಹೇರಲಾಗಿತ್ತು.